(ಜೆ,ಟಿವಿ ಕನ್ನಡ ಸುದ್ದಿ)
ಚಿತ್ತಾಪುರ: ಅಟೋ ಚಾಲಕರು ಅತ್ಯಂತ ಪ್ರಾಮಾಣಿಕತೆ ಮತ್ತು ನಂಬಿಕೆಯಿಂದ ಜೀವನ ಸಾಗಿಸುವವರು. ಸಾರ್ವಜನಿಕರು ಆಟೋದಲ್ಲಿ ಬಿಟ್ಟು ಹೋದ ವಸ್ತುಗಳನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಅನೇಕ ಉದಾಹರಣೆಗಳಿವೆ. ಇವರ ಸೇವೆ ಸಮಾಜ ಸೇವೆಯಂತೆಯೇ ಪವಿತ್ರವಾದುದು ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಬಣ್ಣಿಸಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಚಾಲಕರ ಒಕ್ಕೂಟ, ಆಟೋ ಚಾಲಕರ ಮತ್ತು ಮಾಲಿಕರ ಸಂಘ ಹಾಗೂ ಶಂಕರನಾಗ್ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ 'ಆಟೋ ರಾಜಾ ಶಂಕರನಾಗ್ ಆಟೋ ನಾಮಫಲಕ ಉದ್ಘಾಟನೆ, ಐಡಿ ಕಾರ್ಡ್ ಹಾಗೂ ಸಮಾವಸ್ತ್ರ ವಿತರಣೆ' ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಅವರು, "ಯಾವುದೇ ಸಂಘಟನೆಯಲ್ಲಿ ಒಗ್ಗಟ್ಟು ಬಹಳ ಮುಖ್ಯ. ಸಂಘದ ಅಧ್ಯಕ್ಷರು ಚಾಲಕರ ಕಷ್ಟ-ಸುಖಗಳಿಗೆ ಸ್ಪಂದಿಸಿದಾಗ ಮಾತ್ರ ಸಂಘಟನೆ ಬಲಿಷ್ಠವಾಗಲು ಸಾಧ್ಯ. ಅಟೋ ಚಾಲಕರ ಶಕ್ತಿ ದೊಡ್ಡದಾಗಿದ್ದು, ಸಂಘಟಿತ ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಬಹುದು," ಎಂದರು.
ಪುರಸಭೆ ಮಾಜಿ ಅಧ್ಯಕ್ಷರಾದ ನಾಗರಾಜ ಭಂಕಲಗಿ, ಚಂದ್ರಶೇಖರ ಕಾಶಿ, ಹಾಗೂ ಜಿಪಂ ಮಾಜಿ ಸದಸ್ಯ ಗುಂಡಣ್ಣ ಬಾಳಿ ಸೇರಿದಂತೆ ಹಲವು ಗಣ್ಯರು ಚಾಲಕರ ವೃತ್ತಿ ಗೌರವದ ಕುರಿತು ಮಾತನಾಡಿದರು. ಇದೇ ವೇಳೆ ಪಟ್ಟಣದ ಲಾಡ್ಡಿಂಗ್ ಕ್ರಾಸ್ ಹಾಗೂ ಬಸ್ ನಿಲ್ದಾಣದ ಬಳಿ 'ಆಟೋ ರಾಜಾ ಶಂಕರನಾಗ್' ನಾಮಫಲಕವನ್ನು ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ರವಿಚಂದ್ರ ದೊಡ್ಡಮನಿ, ನಾಗರಾಜ ಕಾಶಿ, ಸುಭಾಷ ಕಾಶಿ, ವಿಠಲ್ ಕಟ್ಟಿಮನಿ, ಜಗನ್ನಾಥ ಮುಡುಬೂಳಕರ್ ಸೇರಿದಂತೆ ಯಾದಗಿರಿ ಮತ್ತು ದೇವದುರ್ಗದ ವಿವಿಧ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ನರಸಪ್ಪ ಚಿನ್ನಾಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನೂರಾರು ಅಟೋ ಚಾಲಕರು ಸಮಾವಸ್ತ್ರ ಧರಿಸಿ ಭಾಗವಹಿಸಿದ್ದರು.