ಜನತೆಯ ಸುದ್ದಿ ವಾಹಿನಿ

ಬುಧವಾರ, ಮೇ 6, 2026

ಮೋದಿ-ಷಾ ಅಬ್ಬರಕ್ಕೆ ಬಂಗಾಳದ ಸರ್ವಾಧಿಕಾರಿ ಸರ್ಕಾರ ಧೂಳಿಪಟ; ಮಣಿಕಂಠ ರಾಠೋಡ.

ಚಿತ್ತಾಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರ ದಕ್ಷ ನಾಯಕತ್ವದ ಅಬ್ಬರಕ್ಕೆ ಪಶ್ಚಿಮ ಬಂಗಾಳದಲ್ಲಿ ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಧೂಳಿಪಟವಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಲಾಡ್ಜಿಂಗ್ ಕ್ರಾಸ್ ಬಳಿ ಸೋಮವಾರ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿ ರಾಜ್ಯಗಳ ಚುನಾವಣಾ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು "ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಯಾರಿಗೂ ಎದೆಗುಂದದೆ ಧೈರ್ಯದಿಂದ ಚುನಾವಣೆ ಎದುರಿಸಿದ್ದರಿಂದ 15 ವರ್ಷಗಳ ಮಮತಾ ಆಡಳಿತ ಅಂತ್ಯಗೊಂಡಿದೆ. ಅದೇ ಮಾದರಿಯಲ್ಲಿ ಚಿತ್ತಾಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಸಹ ಯಾರಿಗೂ ಹೆದರುವ ಅವಶ್ಯಕತೆಯಿಲ್ಲ. ಬಿಜೆಪಿ ವಿಶ್ವದಲ್ಲೇ ಅತಿದೊಡ್ಡ ಪಕ್ಷವಾಗಿದ್ದು, ನಮ್ಮನ್ನು ಎದುರಿಸಲು ಯಾರಿಂದಲೂ ಸಾಧ್ಯವಿಲ್ಲ," ಎಂದು ಕಾರ್ಯಕರ್ತರಲ್ಲಿ ಧೈರ್ಯ ತುಂಬಿದರು.

ಮಮತಾ ಬ್ಯಾನರ್ಜಿ ಸರ್ಕಾರವನ್ನು 'ರಾಕ್ಷಸಿ ರೂಪದ ಸರ್ಕಾರ' ಎಂದು ಟೀಕಿಸಿದ ಅವರು, "ಅಲ್ಲಿ ಸರ್ವಾಧಿಕಾರಿ ಧೋರಣೆ ಮತ್ತು ಭಯದ ವಾತಾವರಣವಿತ್ತು. ಮೋದಿ ಮತ್ತು ಅಮಿತ್ ಷಾ ಅವರು ಕಾರ್ಯಕರ್ತರಲ್ಲಿ ಚೈತನ್ಯ ತುಂಬಿದ್ದರಿಂದಲೇ ಈ ಅಭೂತಪೂರ್ವ ಗೆಲುವು ಸಾಧ್ಯವಾಗಿದೆ. ಬಿಜೆಪಿಯವರನ್ನು ರಸ್ತೆಗಿಳಿಯದಂತೆ ಮಾಡುವುದು ಹಾಗೂ ಆರ್‌ಎಸ್‌ಎಸ್ ಪಥಸಂಚಲನ ತಡೆಯುವ ಸಂಚು ನಡೆದಿತ್ತು. ಆದರೆ ಇಂದು ದೇಶವೇ ತಿರುಗಿ ನೋಡುವಂತೆ ಅದ್ದೂರಿ ಗೆಲುವು ಲಭಿಸಿದೆ," ಎಂದರು.

ಕ್ಷೇತ್ರದ ರಾಜಕೀಯದ ಕುರಿತು ಮಾತನಾಡಿದ ರಾಠೋಡ, "ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ನಡೆದ ಕಾರಣ ಸಾವಿರಾರು ಬೋಕಸ್ ಮತಗಳು ರದ್ದಾಗಿವೆ. ಅದೇ ರೀತಿ ಚಿತ್ತಾಪುರದಲ್ಲೂ ಎಸ್‌ಐಆರ್ ಪ್ರಕ್ರಿಯೆ ನಡೆಯಲಿದ್ದು, ಇಲ್ಲಿನ ಸುಮಾರು 18 ಸಾವಿರ ಬೋಕಸ್ ಮತಗಳು ಕಟ್ ಆಗಲಿವೆ. ಆಗ ಇಲ್ಲಿನ ಕಾಂಗ್ರೆಸ್ ಸರ್ಕಾರವೂ ಧೂಳಿಪಟವಾಗುವುದು ನಿಶ್ಚಿತ," ಎಂದು ಭವಿಷ್ಯ ನುಡಿದರು.

"ಬರುವ ದಿನಗಳಲ್ಲಿ ಇಲ್ಲಿನ ಶಾಸಕರಿಗೆ ಭವಿಷ್ಯವಿಲ್ಲ. ಅವರ ಹಿಂದೆ ಓಡಾಡುವುದನ್ನು ಬಿಡಿ. ನಮ್ಮವರೇ ಕೆಲವು ಮುಖಂಡರು ಶಾಸಕರನ್ನು ಭೇಟಿ ಮಾಡಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿರುವುದು ಪಕ್ಷದ ನಾಯಕರ ಗಮನದಲ್ಲಿದೆ."

— ಮಣಿಕಂಠ ರಾಠೋಡ, ಬಿಜೆಪಿ ಮುಖಂಡ.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಭಜಂತ್ರಿ, ಪುರಸಭೆ ಮಾಜಿ ಸದಸ್ಯ ಶಾಮ್ ಮೇಧಾ, ಅಶ್ವಥ್‌ ರಾಠೋಡ ಮಾತನಾಡಿದರು. ವೇದಿಕೆಯ ಮೇಲೆ ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ಯುವ ಅಧ್ಯಕ್ಷ ದೇವರಾಜ್ ತಳವಾರ ಸೇರಿದಂತೆ ಪ್ರಮುಖರಾದ ಬಸವರಾಜ ಸಂಕನೂರ, ರಮೇಶ್ ಬೊಮ್ಮನಳ್ಳಿ, ಪ್ರಭು ಗಂಗಾಣಿ ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕರ್ತರು ಜೈಘೋಷಗಳನ್ನು ಕೂಗಿ, ಪಟಾಕಿ ಸಿಡಿಸಿ ಹಾಗೂ ಸಿಹಿ ಹಂಚುವ ಮೂಲಕ ವಿಜಯೋತ್ಸವವನ್ನು ಸಡಗರದಿಂದ ಆಚರಿಸಿದರು.

ಗುರುವಾರ, ಏಪ್ರಿಲ್ 30, 2026

ದೇಶಿ ಗೋವಂಶ ‘ರಾಷ್ಟ್ರಮಾತೆ’ ಎಂದು ಘೋಷಿಸಲು ಶ್ರೀರಾಮ ಸೇನೆ ಆಗ್ರಹ.

ಚಿತ್ತಾಪುರ: ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿರುವ ಗೋವಿನ ಸಂತತಿಯನ್ನು ಉಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಹೀಗಾಗಿ ದೇಶಿ ಗೋವಂಶವನ್ನು ‘ರಾಷ್ಟ್ರಮಾತೆ’ ಎಂದು ಘೋಷಿಸಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ವಿಶೇಷ ಶಿಫಾರಸು ಕಳುಹಿಸಬೇಕು ಎಂದು ಶ್ರೀರಾಮ ಸೇನೆಯ ಕಾರ್ಯಕರ್ತರು ಒತ್ತಾಯಿಸಿದರು.

ಪಟ್ಟಣದ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಸಂಘಟನೆಯ ಮುಖಂಡರು ಮಾತನಾಡಿದರು.

ಸಂವಿಧಾನದ 48ನೇ ವಿಧಿಗೆ ಅಗತ್ಯ ತಿದ್ದುಪಡಿ ತಂದು ದೇಶಾದ್ಯಂತ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದರ ಜೊತೆಗೆ, ರಾಜ್ಯ ಮಟ್ಟದಲ್ಲೂ ದೇಶಿ ಗೋವಂಶವನ್ನು ‘ರಾಜ್ಯ ಮಾತೆ’ ಎಂದು ಘೋಷಿಸಬೇಕು. ಗೋ ಕಳ್ಳಸಾಗಣೆ ಮತ್ತು ಹತ್ಯೆಯನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಬೇಕು. ತಪ್ಪಿತಸ್ಥರಿಗೆ ಆಜೀವ ಕಾರಾಗೃಹ ಶಿಕ್ಷೆ ಮತ್ತು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತಹ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಶ್ರೀರಾಮ ಸೇನೆಯ ಮುಖಂಡ ವಿಶ್ವಾರಾಧ್ಯ ತಳವಾರ ಮಾತನಾಡಿ, "ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ನಂದಿಶಾಲೆ’ ಹಾಗೂ ಜಿಲ್ಲಾ ಮಟ್ಟದಲ್ಲಿ ಕನಿಷ್ಠ ಒಂದು ಮಾದರಿ ‘ಗೋ ಅಭಯಾರಣ್ಯ’ ಸ್ಥಾಪಿಸಬೇಕು. ಹೆದ್ದಾರಿಗಳಲ್ಲಿ ಅಪಘಾತಕ್ಕೀಡಾಗುವ ಗೋವುಗಳ ಚಿಕಿತ್ಸೆಗಾಗಿ ಪ್ರತಿ 50 ರಿಂದ 100 ಕಿ.ಮೀ ಅಂತರದಲ್ಲಿ ‘ಗೋ-ವಾಹಿನಿ’ ಆಂಬುಲೆನ್ಸ್ ಮತ್ತು ಟ್ರಾಮಾ ಸೆಂಟರ್‌ಗಳ ವ್ಯವಸ್ಥೆ ಕಲ್ಪಿಸಬೇಕು," ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಮುಖಂಡರಾದ ವಾಲ್ಮೀಕ ಚವ್ಹಾಣ, ಸಂಜಯ ರಾಠೋಡ, ವೆಂಕಟೇಶ ಚವ್ಹಾಣ, ಆಕಾಶ, ಗುರುರಾಜ, ರೋಹನ್ ಜಾಧವ್, ಅರುಣ ಪವಾರ, ಈಶ್ವರ ರಾಠೋಡ, ಆದಿತ್ಯ, ಕುಮಾರ ರಾಠೋಡ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಚಿತ್ತಾಪುರ ಸರ್ಕಾರಿ ಪದವಿ ಕಾಲೇಜಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಎಲ್ಲಾ ಭಾಗ್ಯಗಳಲ್ಲಿ ಆರೋಗ್ಯ ಭಾಗ್ಯ ಪ್ರಮುಖ: ಗುತ್ತೇದಾರ 

ಚಿತ್ತಾಪುರ: ಎಲ್ಲಾ ಭಾಗ್ಯಗಳಲ್ಲಿ ಆರೋಗ್ಯ ಭಾಗ್ಯ ಬಹಳ ಪ್ರಮುಖವಾಗಿದೆ ಎಂದು ಹಿರಿಯ ಪತ್ರಕರ್ತ ಕಾಶಿನಾಥ ಹೇಳಿದರು.

ಪಟ್ಟಣದ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ತಾಲೂಕ ಆಸ್ಪತ್ರೆ ಚಿತ್ತಾಪುರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಭಾರತೀಯ ರೆಡ್ ಕ್ರಾಸ್ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2025-26ನೇ ಶೈಕ್ಷಣಿಕ ಸಾಲಿನ ಒಂದು ದಿವಸದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಆರೋಗ್ಯಯುತ ಸಮಾಜ ನಿರ್ಮಾಣ ಆಗಬೇಕಾದರೆ ಅದು ಯುವಕ ಯುವತಿಯರ ಮೇಲಿದೆ ಎಂದರು.

ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ಸಮಾಜದಲ್ಲಿ ದೇವಸ್ಥಾನಗಳು ಹಾಗೂ ದಾವಖಾನೆಗಳು ಹೌಸ್ ಫುಲ್ ಆಗಿವೆ, ಪೊಲೀಸ್ ಠಾಣೆಗಳ ಸಂಖ್ಯೆ ಹೆಚ್ಚಾಗಿವೆ ಇದೇ ದುರಂತ ಎಂದು ಮಾರ್ಮಿಕವಾಗಿ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ದಂತ ಆರೋಗ್ಯ ಅಧಿಕಾರಿ ಡಾ. ಖನಿಜ್ ಫಾತಿಮಾ ಮಾತನಾಡಿ, ಜೀವನ ಶೈಲಿ ಹೇಗೆ ಇರುತ್ತದೆ ಹಾಗೆ ಆರೋಗ್ಯ ಇರುತ್ತದೆ. ಈ ನಿಟ್ಟಿನಲ್ಲಿ ಪ್ರಮುಖವಾಗಿ ಯುವಕರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಅದರಲ್ಲೂ ಹಲ್ಲಿನ ಸುರಕ್ಷೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸರ್ಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕಿ ಸುಜ್ಞಾನಿ ಪಾಟೀಲ್ ಮಾತನಾಡಿ, ಇಂದಿನ ಯುವಕರೇ ಮುಂದಿನ ಪ್ರಜೆಗಳು ಎಂದು ಹೇಳಿದ ಅವರು ಪ್ರಮುಖವಾಗಿ ಎಚ್ಐವಿ ಸೋಂಕಿನ ಕುರಿತು ವಿವರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಬಿರಾದಾರ ಮಾತನಾಡಿ, ಆರೋಗ್ಯವೇ ಭಾಗ್ಯ ಎನ್ನುವ ಸಂದೇಶವನ್ನು ಅರಿತುಕೊಂಡು ಇಂದಿನ ಯುವ ಜನಾಂಗ ಸಾಗಬೇಕು. ಈ ನಿಟ್ಟಿನಲ್ಲಿ ದೇವರು ಕೊಟ್ಟ ಉತ್ತಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

ಎನ್ಎಸ್ಎಸ್ ಅಧಿಕಾರಿಗಳಾದ ಡಾ. ಶಶಿಧರ್ ಯಡ್ರಾಮಿ, ಆಸ್ಮಾ ನಿಖತ್, ಪ್ರಾಧ್ಯಾಪಕರಾದ ಪ್ರೋ.ಮಲ್ಲಪ್ಪ ಮಾನೇಗಾರ್, ಶರಣಬಸಪ್ಪ ರಾಯ್ಕೋಟಿ, ರೋಹಿಣಿ ಕಲ್ಮಟ್, ನಾಗವೇಣಿ, ಲಕ್ಷ್ಮೀಪುತ್ರ ಪಾಸೋಡಿ, ಕೈಲಾಸಪತಿ ವಿಶ್ವಕರ್ಮ, ಶರಣಪ್ಪ ದಿಗ್ಗಾಂವ, ಮರೇಪ್ಪ ಮೇತ್ರೆ, ಶ್ರೀಕಾಂತ್, ಅಭಿಷೇಕ್, ವಿಜಯಲಕ್ಷ್ಮೀ ರಾಠೋಡ, ಮಂಜುನಾಥ ದೇಶಪಾಂಡೆ, ಆಸ್ಪತ್ರೆಯ ನಿಜಾಮುದ್ದೀನ್, ಗುರುರಾಜ್ ಮುಗುಳಿ, ಪತ್ರಕರ್ತ ಸಂತೋಷಕುಮಾರ ಕಟ್ಟಿಮನಿ ಸೇರಿದಂತೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಎನ್ಎಸ್ಎಸ್ ಅಧಿಕಾರಿ ಡಾ. ಸಂಗಪ್ಪ ಮಾಮನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸುಗುರೇಶ್ವರ ಆರ್ ಮಠಪತಿ ಸ್ವಾಗತಿಸಿದರು, ಮಲ್ಲಪ್ಪ ತೊಟ್ನಳ್ಳಿ ನಿರೂಪಿಸಿದರು, ಡಾ. ವಿಲಾಸ್ ವಂದಿಸಿದರು. ನಂತರ ಆರೋಗ್ಯ ತಪಾಸಣೆ ನಡೆಯಿತು. ವಿದ್ಯಾರ್ಥಿಗಳು ಶಿಬಿರದ ಸಂಪೂರ್ಣ ಸದುಪಯೋಗ ಪಡಿಸಿಕೊಂಡರು.

ಸೋಮವಾರ, ಏಪ್ರಿಲ್ 27, 2026

ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ.100 ಫಲಿತಾಂಶ: ವಿದ್ಯಾರ್ಥಿಗಳ ಭರ್ಜರಿ ಸಾಧನೆ

jtvkannada
ಚಿತ್ತಾಪುರ: ಪಟ್ಟಣದ ನಾಗಾವಿ ಕ್ಯಾಂಪಸ್‌ನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಎಸ್.ಸಿ) 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ದಾಖಲಿಸುವ ಮೂಲಕ ತಾಲ್ಲೂಕಿನ ಗಮನ ಸೆಳೆದಿದೆ.

ಶಾಲೆಯ ಈ ಸಾಧನೆಯ ಕುರಿತು ಪ್ರಾಚಾರ್ಯರಾದ ಬಸವರಾಜ ಅವಂಟಿ ಅವರು ಹರ್ಷ ವ್ಯಕ್ತಪಡಿಸಿ ಮಾತನಾಡಿದ ಅವರು  ಒಟ್ಟು ಹಾಜರಾದವರು 43 ವಿದ್ಯಾರ್ಥಿಗಳು,ತೇರ್ಗಡೆಯಾದವರು 43 ವಿದ್ಯಾರ್ಥಿಗಳು (ಶೇ.100 ಫಲಿತಾಂಶ) ಉನ್ನತ ಶ್ರೇಣಿ (Distinction) 10 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ 29 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿ: 02 ವಿದ್ಯಾರ್ಥಿಗಳು, ಸಾಮಾನ್ಯ ಶ್ರೇಣಿ:,02 ವಿದ್ಯಾರ್ಥಿಗಳು ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದರು.

ಹರ್ಷಾನಂದ್: 625ಕ್ಕೆ 594 ಅಂಕಗಳನ್ನು (95.04%) ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.ಕೇಶವ್ ನಾಯ್ಯೋಡಿ: 591 ಅಂಕಗಳನ್ನು (94.56%) ಪಡೆಯುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದಾರೆ.

"ವಿದ್ಯಾರ್ಥಿಗಳ ನಿರಂತರ ಪರಿಶ್ರಮ ಹಾಗೂ ಶಿಕ್ಷಕ ವೃಂದದ ಸೂಕ್ತ ಮಾರ್ಗದರ್ಶನದಿಂದಾಗಿ ಈ ಅತ್ಯುತ್ತಮ ಫಲಿತಾಂಶ ಲಭ್ಯವಾಗಿದೆ. ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು." 

— ಬಸವರಾಜ ಅವಂಟಿ, ಪ್ರಾಚಾರ್ಯರು

ಈ ಗಮನಾರ್ಹ ಸಾಧನೆಗೆ ಶಾಲೆಯ ಪ್ರಾಚಾರ್ಯರು, ಬೋಧಕ ಸಿಬ್ಬಂದಿ ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಉತ್ತೀರ್ಣರಾದ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

ಪೊಲೀಸರ ಮಿಂಚಿನ ಕಾರ್ಯಾಚರಣೆ: 'ಡಾನ್'ಗಳಿಗೆ ಬೆಳ್ಳಂಬೆಳಗ್ಗೆ ಖಾಕಿ ಶಾಕ್!

​ಗಲ್ಲಿಗಳಲ್ಲಿ ದಾದಾಗಿರಿ ನಡೆಸುವ ಕಿಡಿಗೇಡಿಗಳಿಗೆ ಡಿವೈಎಸ್‌ಪಿ ಖಡಕ್ ಎಚ್ಚರಿಕೆ; 

50ಕ್ಕೂ ಹೆಚ್ಚು ರೌಡಿ ಶೀಟರ್‌ಗಳ ಮನೆಗಳ ಮೇಲೆ ದಾಳಿ.

​ಚಿತ್ತಾಪುರ: ಪಟ್ಟಣದಲ್ಲಿ ತಾವೇ ‘ಡಾನ್’ಗಳೆಂದು ಮೆರೆಯುತ್ತಾ ಸಾರ್ವಜನಿಕರ ನೆಮ್ಮದಿ ಕೆಡಿಸುತ್ತಿದ್ದ ಕಿಡಿಗೇಡಿಗಳಿಗೆ ಚಿತ್ತಾಪುರ ಮತ್ತು ವಾಡಿ ಪೊಲೀಸರು ಸದ್ದಿಲ್ಲದೆ ಶಾಕ್ ನೀಡಿದ್ದಾರೆ. ಶನಿವಾರ ಬೆಳ್ಳಂಬೆಳಗ್ಗೆ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ರೌಡಿಗಳ ಮನೆಗಳಿಗೆ ಲಗ್ಗೆ ಇಟ್ಟ ಪೊಲೀಸರು, "ಇನ್ಮುಂದೆ ದಾದಾಗಿರಿ ನಡೆಸಿದರೆ ಅಟ್ಟಾಡಿಸಿ ಹೊಡೆಯುತ್ತೇವೆ" ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ.

​ಡಿವೈಎಸ್‌ಪಿ ಶಂಕರಗೌಡ ಪಾಟೀಲ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ಎಷ್ಟು ಆಕಸ್ಮಿಕವಾಗಿತ್ತೆಂದರೆ, ನಿದ್ರೆಯಲ್ಲಿದ್ದ ಹಳೆ ಕದೀಮರು ಬಾಗಿಲು ತೆರೆಯುತ್ತಿದ್ದಂತೆ ಪೊಲೀಸರನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಚಿತ್ತಾಪುರ ವೃತ್ತದ ವ್ಯಾಪ್ತಿಯಲ್ಲಿ ಬರುವ ಸುಮಾರು 50ಕ್ಕೂ ಹೆಚ್ಚು ರೌಡಿ ಶೀಟರ್‌ಗಳ ಮನೆಗಳನ್ನು ಪೊಲೀಸರು ಇಂಚಿಂಚಾಗಿ ಜಾಲಾಡಿದ್ದಾರೆ.

​ಮನೆಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರಬಹುದಾದ ಮಾರಕಾಸ್ತ್ರಗಳು ಹಾಗೂ ಮಾದಕ ದ್ರವ್ಯಗಳಿಗಾಗಿ ಹದ್ದಿನ ಕಣ್ಣಿನಿಂದ ತಪಾಸಣೆ ನಡೆಸಲಾಯಿತು. ಈ ವೇಳೆ ಪ್ರತಿಯೊಬ್ಬ ರೌಡಿಯ ಇತ್ತೀಚಿನ ಚಟುವಟಿಕೆಗಳು, ಅವರು ಯಾರನ್ನು ಭೇಟಿಯಾಗುತ್ತಿದ್ದಾರೆ ಮತ್ತು ಅವರ ಸಂಪರ್ಕದಲ್ಲಿರುವವರು ಯಾರು ಎಂಬ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ.


​"ರಸ್ತೆಯಲ್ಲಿ ತಲೆ ಎತ್ತಿ ಓಡಾಡಬೇಕಿರುವುದು ಜನಸಾಮಾನ್ಯರೇ ಹೊರತು ರೌಡಿಗಳಲ್ಲ. ಕಾನೂನಿಗೆ ಗೌರವ ಕೊಡದವರಿಗೆ ಪೊಲೀಸ್ ಲಾಠಿಯೇ ಉತ್ತರ ನೀಡಲಿದೆ."
— ಪೊಲೀಸ್ ಇಲಾಖೆಯ ಖಡಕ್ ಎಚ್ಚರಿಕೆ.

​ಸಮಾಜಘಾತುಕ ಶಕ್ತಿಗಳ ಎಡೆಮುರಿ ಕಟ್ಟಲು ಫೀಲ್ಡಿಗಿಳಿದಿರುವ ಖಾಕಿ ಪಡೆ, ಈಗಾಗಲೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ಪಟ್ಟಿಯನ್ನು ಸಿದ್ಧಪಡಿಸಿದೆ. ಕಾನೂನು ಕೈಗೆತ್ತಿಕೊಂಡು ಸಾರ್ವಜನಿಕರ ನೆಮ್ಮದಿ ಕೆಡಿಸುವವರ ಅಡ್ಡಾಗಳನ್ನು ಧೂಳೀಪಟ ಮಾಡುವುದಾಗಿ ಪೊಲೀಸರು ಈ ದಾಳಿಯ ಮೂಲಕ ನೇರ ಎಚ್ಚರಿಕೆ ನೀಡಿದ್ದಾರೆ.

ಈ ಮಿಂಚಿನ ದಾಳಿಯಲ್ಲಿ ಚಿತ್ತಾಪುರ ಪಿಎಸ್‌ಐ ಮಂಜುನಾಥ ರೆಡ್ಡಿ, ವಾಡಿ ಪಿಎಸ್‌ಐ ತಿರುಮಲೇಶ್ ಕೆ. ಸೇರಿದಂತೆ ಎರಡೂ ಠಾಣೆಗಳ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಪೊಲೀಸರ ಈ ಧೀರ ನಡೆಯನ್ನು ಕಂಡು ಪಟ್ಟಣದ ಜನಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದಾರೆ.

ಅನುಭವ ಮಂಟಪವೇ ವಿಶ್ವದ ಪ್ರಪ್ರಥಮ ಸಂಸತ್ತು: ಲೇಖಕಿ ಪೂಜಾ ಭಂಕಲಗಿ.

ಚಿತ್ತಾಪುರ: "ಬ್ರಿಟನ್ ದೇಶದವರು ತಮ್ಮ ಸಂಸತ್ತೇ ಮೊದಲನೆಯದು ಎಂದು ಪ್ರತಿಪಾದಿಸುತ್ತಾರೆ. ಆದರೆ, ಅದಕ್ಕಿಂತಲೂ ಶತಮಾನಗಳ ಹಿಂದೆ ಕರುನಾಡಿನಲ್ಲಿ ವಿವಿಧ ವರ್ಗದ ಶರಣರನ್ನು ಒಗ್ಗೂಡಿಸಿ, ಎಲ್ಲರಿಗೂ ಸಮಾನ ಮಾನ್ಯತೆ ನೀಡಿದ ಬಸವಣ್ಣನವರು ಸ್ಥಾಪಿಸಿದ 'ಅನುಭವ ಮಂಟಪ'ವೇ ಜಗತ್ತಿನ ಪ್ರಪ್ರಥಮ ಪಾರ್ಲಿಮೆಂಟ್," ಎಂದು ಲೇಖಕಿ ಪೂಜಾ ಆರ್. ಭಂಕಲಗಿ ಅಭಿಮತ ವ್ಯಕ್ತಪಡಿಸಿದರು.

ತಾಲೂಕಿನ ಭಾಗೋಡಿ ಗ್ರಾಮದ ಶಾಂತಲಿಂಗೇಶ್ವರ ಮಠದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ 893ನೇ ಜಯಂತ್ಯೋತ್ಸವದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. "ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರು ಜಾತಿ ಪದ್ಧತಿ ಹಾಗೂ ಅಸಮಾನತೆಯ ವಿರುದ್ಧ ನಿರಂತರ ಹೋರಾಡಿದವರು. ಆದರೆ ಇಂದಿಗೂ ಸಮಾಜದಲ್ಲಿ ಅಸಮಾನತೆ ಚಾಲ್ತಿಯಲ್ಲಿರುವುದು ದುರ್ದೈವದ ಸಂಗತಿ," ಎಂದು ಬೇಸರ ವ್ಯಕ್ತಪಡಿಸಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಗುರುಮಿಠಕಲ್ ಖಾಸಾ ಮಠದ ಶ್ರೀ ಶಾಂತವೀರ ಮುರಘರಾಜೇಂದ್ರ ಸ್ವಾಮೀಜಿ ಮಾತನಾಡಿ, "ವಚನ ಸಾಹಿತ್ಯವೆಂಬ ಮಹಾನ್ ಸಂಪತ್ತನ್ನು ಜಗತ್ತಿಗೆ ನೀಡಿದ ಬಸವಣ್ಣನವರು, ಸಮಾನತೆಯ ಸಮಾಜಕ್ಕಾಗಿ ಮಾಡಿದ ಕ್ರಾಂತಿ ಇತಿಹಾಸದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಿತು," ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಪದ್ಮಣ್ಣಗೌಡ ಪಾಟೀಲ ಮಾತನಾಡಿ, "ಬಸವಣ್ಣನವರ ತತ್ವಗಳು ಕೇವಲ ಭಾಷಣಕ್ಕೆ ಸೀಮಿತವಾಗಬಾರದು. ಅವು ನಮ್ಮ ದೈನಂದಿನ ಜೀವನದ ಹಾದಿಯಾಗಬೇಕು. ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಭಾವನೆ ಮೂಡಿದಾಗ ಮಾತ್ರ ಜಯಂತಿಯ ಆಚರಣೆ ಸಾರ್ಥಕವಾಗುತ್ತದೆ. ಗ್ರಾಮದ ಯುವಜನತೆ ಶರಣರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಸಮಾಜದ ಪ್ರಗತಿಗೆ ಶ್ರಮಿಸಬೇಕು," ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಪಂ ಮಾಜಿ ಅಧ್ಯಕ್ಷ ಶರಣಬಸಪ್ಪಗೌಡ ಪಾಟೀಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಉಪಾಧ್ಯಕ್ಷ ವೀರುಪಾಕ್ಷಪ್ಪ ಗಡ್ಡದ್, ನಾಗರಾಜ ಭಂಕಲಗಿ, ದೇವಿಂದ್ರ ಅರಣಕಲ್, ಬಸವರಾಜ ಪಾಟೀಲ್ ದಳಪತಿ, ರಾಮಲಿಂಗ ಬಾನಾರ್‌, ಭೀಮಣ್ಣ ಹೋತಿನಮಡಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಮಹಾಂತಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಎಂಬತ್ನಾಳ ಸ್ವಾಗತಿಸಿದರು, ಮಾಲಾಶ್ರೀ ನಿರೂಪಿಸಿ, ವಂದಿಸಿದರು.

ಭಾನುವಾರ, ಏಪ್ರಿಲ್ 26, 2026

ಕಲಬುರಗಿ ಜಿಲ್ಲೆಗೆ ಚಿತ್ತಾಪುರ ತಾಲೂಕು ದ್ವಿತೀಯ: ಶೇ. 87.89 ಸಾಧನೆ.

ಚಿತ್ತಾಪುರ: ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಚಿತ್ತಾಪುರ ತಾಲೂಕು ಅಭೂತಪೂರ್ವ ಸುಧಾರಣೆ ಕಂಡಿದೆ. ಕಳೆದ ಬಾರಿ ಕೇವಲ ಶೇ. 40.88 ಫಲಿತಾಂಶ ಪಡೆದಿದ್ದ ತಾಲೂಕು, ಈ ಬಾರಿ ಶೇ. 87.89 ರಷ್ಟು ಅಂಕಗಳನ್ನು ಗಳಿಸುವ ಮೂಲಕ ಕಲಬುರಗಿ ಜಿಲ್ಲೆಯಲ್ಲಿಯೇ ದ್ವಿತೀಯ ಸ್ಥಾನ ಅಲಂಕರಿಸಿದೆ.

ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಎಂಬ ಭೇದವಿಲ್ಲದೆ ಎಲ್ಲಾ ಶಾಲೆಗಳು ಉತ್ತಮ ಸಾಧನೆ ತೋರಿವೆ ಸರ್ಕಾರಿ ಶಾಲೆಗಳು, ಹಾಜರಾದ 2952 ವಿದ್ಯಾರ್ಥಿಗಳಲ್ಲಿ 2601 ಮಂದಿ ಉತ್ತೀರ್ಣರಾಗಿದ್ದು, ಶೇ. 87.81 ಫಲಿತಾಂಶ ಬಂದಿದೆ.ಅನುದಾನಿತ ಶಾಲೆಗಳು, ಹಾಜರಾದ 734 ವಿದ್ಯಾರ್ಥಿಗಳಲ್ಲಿ 639 ಮಂದಿ ಉತ್ತೀರ್ಣರಾಗಿದ್ದು, ಶೇ. 87.6 ಸಾಧನೆಯಾಗಿದೆ.
ಅನುದಾನರಹಿತ ಶಾಲೆಗಳು, ಹಾಜರಾದ 1401 ವಿದ್ಯಾರ್ಥಿಗಳಲ್ಲಿ 1240 ಮಂದಿ ಉತ್ತೀರ್ಣರಾಗಿದ್ದು, ಶೇ. 88.51 ರಷ್ಟು ಫಲಿತಾಂಶ ಬಂದಿದೆ. ಒಟ್ಟಾರೆಯಾಗಿ ತಾಲೂಕಿನ 5097 ವಿದ್ಯಾರ್ಥಿಗಳ ಪೈಕಿ 4480 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ತಿಳಿಸಿದ್ದಾರೆ.

ನೂರಕ್ಕೆ ನೂರು ಫಲಿತಾಂಶ ಪಡೆದ ಶಾಲೆಗಳು
ತಾಲೂಕಿನ ಒಟ್ಟು 23 ಶಾಲೆಗಳು ಶೇ. 100 ರಷ್ಟು ಫಲಿತಾಂಶ ದಾಖಲಿಸಿವೆ. ಅವುಗಳಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯ ಚಿತ್ತಾಪುರ, ಆಲ್ ಅಮೀನ್ ಉರ್ದು ಪ್ರೌಢ ಶಾಲೆ ವಾಡಿ, ಬೆಥನಿ ಶಾಲೆ, ಅಂಬೇಡ್ಕರ್ ಶಾಲೆ, ಕಂದಗೋಳ, ದಂಡೋತಿ, ಹೆಬ್ಬಾಳ, ನಾಲವಾರ, ಚಿನಚೋಳಿ ಎಚ್, ಶೆಳ್ಳಗಿಯ ಸರ್ಕಾರಿ ಶಾಲೆಗಳು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು (ಗುಂಡಗುರ್ತಿ, ವಾಡಿ), ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ವಿದ್ಯಾನಿಕೇತನ ಪ್ರೌಢ ಶಾಲೆ ಪ್ರಮುಖವಾಗಿವೆ.

ತಾಲೂಕಿನ ಟಾಪ್ 10 ಪ್ರತಿಭಾವಂತ ವಿದ್ಯಾರ್ಥಿಗಳಾದ ಹೆಬ್ಬಾಳದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶ್ವೇತಾ (619) ಅತಿ ಹೆಚ್ಚು ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಉಳಿದಂತೆ ಸುಮಂತ್ (614), ನಿವೇದಿತಾ ನಂದಾ (612), ಅಕ್ಷತಾ (612), ಚೈತನ್ಯ (610), ಶುಭಂ (609), ಖುಷಿ (608), ಎಂ.ಡಿ. ಅಮೀನ್ ಪಟೇಲ (608), ಶ್ರೀಲಕ್ಷ್ಮಿ (608) ಹಾಗೂ ಮದನ್ (607) ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಫಲಿತಾಂಶ ಸುಧಾರಣೆಗೆ ಕಾರಣವಾದ ಅಂಶಗಳು
"ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 47 ರಷ್ಟು ಫಲಿತಾಂಶ ಏರಿಕೆಯಾಗಿದೆ. ಇದಕ್ಕೆ ಪ್ರಮುಖವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಒದಗಿಸಿದ 'ಅರಿವೆ ಗುರು' ಪುಸ್ತಕ (4 ಮಾದರಿ ಪ್ರಶ್ನೆ ಪತ್ರಿಕೆಗಳು), ಮಿಷನ್-40+, ಜಿಲ್ಲಾಧಿಕಾರಿಗಳ ಪ್ರಗತಿ ಪರಿಶೀಲನೆ ಹಾಗೂ ಸಿಇಒ ಅವರ ಮಾರ್ಗದರ್ಶನ ಕಾರಣ," ಎಂದು ಬಿಇಒ ಶಶಿಧರ ಬಿರಾದಾರ ಹೇಳಿದ್ದಾರೆ.

ಜೊತೆಗೆ ಜನವರಿ 2025 ರಿಂದ ಶನಿವಾರ ಮತ್ತು ಭಾನುವಾರ ವಿಶೇಷ ತರಗತಿ, 'ವೇಕ್ ಅಪ್ ಕಾಲ್', ಮಕ್ಕಳ ಮನೆ ಭೇಟಿ, ಡಯಟ್ ತಂಡದ ದತ್ತು ಯೋಜನೆ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ನೀಡಿದ ವಿಶೇಷ ಆದ್ಯತೆ ಈ ಯಶಸ್ಸಿಗೆ ನಾಂದಿ ಹಾಡಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಲು ಈಗಿನಿಂದಲೇ ಯೋಜನೆ ರೂಪಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೊಗಲಾ - ರಾಜೇಶ್ರೀ ಸಿಮೆಂಟ್ ಕಂಪನಿ ರಸ್ತೆ ನಿರ್ಮಾಣಕ್ಕೆ ಆಗ್ರಹ.

​ಚಿತ್ತಾಪುರ: ತಾಲೂಕಿನ ಮೊಗಲಾ ಗ್ರಾಮದಿಂದ ಕೇವಲ 3 ಕಿ.ಮೀ ದೂರದಲ್ಲಿರುವ ರಾಜೇಶ್ರೀ ಸಿಮೆಂಟ್ ಕಂಪನಿ (ಮಳಖೇಡ) ಗೇಟ್‌ವರೆಗೆ ಸಮರ್ಪಕ ರಸ್ತೆ ನಿರ್ಮಾಣ ಮಾಡದ ಆಡಳಿತ ಮಂಡಳಿ ಹಾಗೂ ಜನಪ್ರತಿನಿಧಿಗಳ ಧೋರಣೆ ಖಂಡಿಸಿ ಗ್ರಾಮದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಹಲವು ವರ್ಷಗಳ ಹೋರಾಟಕ್ಕೆ ಬೆಲೆ ಇಲ್ಲವೇ?
ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ರಸ್ತೆಗಾಗಿ ಸಚಿವರಿಗೆ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಸ್ಥರ ಈ ನ್ಯಾಯಸಮ್ಮತ ಬೇಡಿಕೆಯನ್ನು ಅಧಿಕಾರಿಗಳು ಮತ್ತು ರಾಜೇಶ್ರೀ ಸಿಮೆಂಟ್ ಕಂಪನಿ ಮ್ಯಾನೇಜ್‌ಮೆಂಟ್ ಕಸದ ಬುಟ್ಟಿಗೆ ಹಾಕುತ್ತಿವೆ ಎಂದು ಮುಖಂಡರಾದ ವೀರಭದ್ರಪ್ಪ ಇವಣಿ ಮತ್ತು ದೇವಿಂದ್ರಪ್ಪ ಅಲ್ಲೂರ ಅವರು ನೇರವಾಗಿ ಆರೋಪಿಸಿದ್ದಾರೆ.

​ಸಂಕಷ್ಟದಲ್ಲಿ ರೈತರು ಮತ್ತು ಕಾರ್ಮಿಕರು
​ರಸ್ತೆ ಇಲ್ಲದ ಕಾರಣ ಗ್ರಾಮಸ್ಥರು ಪಡುತ್ತಿರುವ ಪಾಡು ವರ್ಣನಾತೀತವಾಗಿದೆ. ರಸ್ತೆ ಸರಿ ಇಲ್ಲದ ಕಾರಣ ರೈತರು ತಮ್ಮ ಹೊಲಗಳಿಗೆ ಹೋಗಲು ಹಾಗೂ ಬೆಳೆಗಳನ್ನು ಸಾಗಿಸಲು ಹರಸಾಹಸ ಪಡುವಂತಾಗಿದೆ. ಪ್ರತಿದಿನ ಕಂಪನಿಗೆ ಕೆಲಸಕ್ಕೆ ಹೋಗುವ ನೌಕರರು ಕೆಸರು ಮತ್ತು ಹಳ್ಳ-ಕೊಳ್ಳಗಳಿಂದ ಕೂಡಿದ ಹಾದಿಯಲ್ಲೇ ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ. ಈ ರಸ್ತೆ ನಿರ್ಮಾಣವಾದರೆ ಸೇಡಂ ಕ್ಷೇತ್ರಕ್ಕೆ ಇರುವ ಅಂತರ ಕೇವಲ 10-12 ಕಿ.ಮೀ ಗೆ ಇಳಿಯಲಿದ್ದು, ಸಾರಿಗೆ ವ್ಯವಸ್ಥೆ ಸುಗಮವಾಗಲಿದೆ. ಆದರೆ ಕಂಪನಿಯ ಹಠಮಾರಿ ಧೋರಣೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ.


​"ಗ್ರಾಮದ ಪಕ್ಕದಲ್ಲೇ ಕಂಪನಿ ಇದ್ದರೂ ಅಭಿವೃದ್ಧಿಗೆ ಕಿಂಚಿತ್ತೂ ಸಹಕಾರ ನೀಡುತ್ತಿಲ್ಲ. ಕೇವಲ 3 ಕಿ.ಮೀ ರಸ್ತೆ ಮಾಡಲು ವರ್ಷಗಟ್ಟಲೆ ಸತಾಯಿಸುತ್ತಿರುವುದು ಸರಿಯಲ್ಲ. ಕಂಪನಿ ಮತ್ತು ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರೆಲ್ಲ ಸೇರಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ."

— ವೀರಭದ್ರಪ್ಪ ಇವಣಿ ಹಾಗೂ ದೇವಿಂದ್ರಪ್ಪ

 
ಸ್ಥಳೀಯ ಸಂಪನ್ಮೂಲ ಬಳಸಿಕೊಳ್ಳುವ ರಾಜೇಶ್ರೀ ಸಿಮೆಂಟ್ ಕಂಪನಿ, ಸ್ಥಳೀಯರ ಮೂಲಭೂತ ಸೌಕರ್ಯಗಳ ಬಗ್ಗೆ ಮೌನ ವಹಿಸಿರುವುದು ಜನರಲ್ಲಿ ಆಕ್ರೋಶ ಮೂಡಿಸಿದೆ. ತಕ್ಷಣವೇ ಮೊಗಲಾದಿಂದ ಕಂಪನಿ ಗೇಟ್‌ವರೆಗೆ ಸುಸಜ್ಜಿತ ರಸ್ತೆ ನಿರ್ಮಿಸಿಕೊಡಬೇಕು, ಇಲ್ಲವಾದಲ್ಲಿ ಪ್ರತಿಭಟನೆಯ ಬಿಸಿ ಎದುರಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಅಂಬೇಡ್ಕರ್ ವಿಚಾರಧಾರೆ ಜಗತ್ತಿನ ಶೋಷಿತರ ಏಳಿಗೆಯ ದಾರಿದೀಪ: ಸುರೇಶ್ ಮೆಂಗನ್.

ಚಿತ್ತಾಪುರ: "ಪ್ರಬುದ್ಧ ಭಾರತ ನಿರ್ಮಾಣವಾಗಲು ಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ಹೇಗೆ ಭದ್ರ ಬುನಾದಿಯಾಗಿದೆಯೋ, ಅದೇ ರೀತಿ ಅವರ ಉದಾತ್ತ ವಿಚಾರಧಾರೆಯು ಇಡೀ ಜಗತ್ತಿನ ಶೋಷಿತ ಸಮುದಾಯಗಳ ಏಳಿಗೆಗೆ ದಾರಿದೀಪವಾಗಿದೆ," ಎಂದು ದಲಿತ ಹಿರಿಯ ಮುಖಂಡ ಸುರೇಶ್ ಮೆಂಗನ್ ಅಭಿಪ್ರಾಯಪಟ್ಟರು.

ಪಟ್ಟಣದ ಬಜಾಜ್ ಮಿನಿ ಸಭಾಂಗಣದಲ್ಲಿ ಶನಿವಾರ ದಲಿತ ಸಂಘರ್ಷ ಸಮಿತಿ (ಬಿ.ಕೃಷ್ಣಪ್ಪ ಬಣ) ಹಾಗೂ ಕರ್ನಾಟಕ ರಾಜ್ಯ ಕಾರ್ಮಿಕ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರನ್ನು ಸ್ಮರಿಸಿದ ಮೆಂಗನ್ ಅವರು, "ಭಾರತದ ಸಂವಿಧಾನ ಶಿಲ್ಪಿ ಕೇವಲ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಅಸ್ಪೃಶ್ಯತೆ ನಿವಾರಣೆ, ಸಾಮಾಜಿಕ ಸಮಾನತೆ ಮತ್ತು ಶೋಷಿತರ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ಮಾನವತಾವಾದಿ. ಅವರ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯ," ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡೆಕ್ಕನ್ ಬಿಇಡಿ ಕಾಲೇಜಿನ ಉಪನ್ಯಾಸಕ ಡಾ. ಅನೀಲಕುಮಾರ ತೆಂಗಳಿ ಮಾತನಾಡಿ, ಇಂದಿನ ಯುವ ಪೀಳಿಗೆಯ ವೈಚಾರಿಕತೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

"ಇಂದಿನವರಿಗೆ ಬರವಣಿಗೆಯ ಅಂಬೇಡ್ಕರ್ ಬೇಕಾಗಿಲ್ಲ, ಮೆರವಣಿಗೆಯ ಅಂಬೇಡ್ಕರ್ ಬೇಕಾಗಿದ್ದಾರೆ. ಪುಸ್ತಕದ ಅಂಬೇಡ್ಕರ್ ಅವರಿಗಿಂತ ಪುತ್ತಳಿಯ ಅಂಬೇಡ್ಕರ್ ಮೇಲೆ ಹೆಚ್ಚು ಮೋಹ ಬೆಳೆಯುತ್ತಿದೆ. ಆದರೆ, ಸಂವಿಧಾನದ ಅಡಿಯಲ್ಲಿ ನಮಗೆ ಸಿಕ್ಕಿರುವ ಸಮಾನತೆ ಮತ್ತು ಅವಕಾಶಗಳನ್ನು ಬಳಸಿಕೊಂಡು ಜ್ಞಾನವಂತರಾಗುವುದು ಇಂದಿನ ಅಗತ್ಯ," ಎಂದು ಕಿವಿಮಾತು ಹೇಳಿದರು.

ಇಂದಿಗೂ ಜಾತಿ ವ್ಯವಸ್ಥೆ ಮತ್ತು ಶೋಷಣೆ ಪೂರ್ಣವಾಗಿ ನಿಂತಿಲ್ಲ, ಇದನ್ನು ಎದುರಿಸಲು ಅಂಬೇಡ್ಕರ್ ಅವರ ಬೌದ್ಧಿಕ ಚಿಂತನೆಗಳೇ ನಮಗೆ ಅಸ್ತ್ರವಾಗಬೇಕು ಎಂದು ಅವರು ತಿಳಿಸಿದರು.

ಅಣದೂರದ ಭಂತೆ ದಮಾನಂದ ಮಹಾತರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಡಿಎಸ್‌ಎಸ್ ಮುಖಂಡ ಜಗದೀಶ್ ಸಾಗರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಎಎಪಿ ಕಾರ್ಯಾಧ್ಯಕ್ಷ ಸೀತಾರಾಮ ಗುಂಡಪ್ಪ ಮೆರವಣಿಗೆಗೆ ಚಾಲನೆ ನೀಡಿದರು. ಡಿಎಸ್ಎಸ್ ಸಂಘಟನಾ ಸಂಚಾಲಕ ಭರತ್ ಧನ್ನಾ ಸಂವಿಧಾನದ ಪೀಠಿಕೆ ಪಠಿಸಿದರು.

ಎಎಪಿ ಮುಖಂಡರಾದ ದರ್ಶನ ಜೈನ, ಸಂಚಿತ್ ಸಹಾನಿ, ಅರ್ಜುನ್ ಹಲಗಿಗೌಡ, ಉಷಾ ಬೆಂಗಳೂರು, ರಾಘವೇಂದ್ರ ಚಿಂಚನಸೂರ, ಅಶೋಕ ಮಲ್ಕಪಗೋಳ್, ಕೀರಣ್ ರಾಠೋಡ, ಎಂ.ಎಂ.ಜಾಗೀರದಾರ್, ನ್ಯಾಯವಾದಿ ಎಸ್.ಪಿ.ಸಾತನೂರಕರ್, ಪರಮೇಶ್ವರ ಝಳಕಿ, ಮಲ್ಲಿಕಾರ್ಜುನ ಪೂಜಾರಿ ಸೇರಿದಂತೆ ಸಂಘಟನೆಯ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.ನರಸಪ್ಪ ಚಿನ್ನಾಕಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

ಶುಕ್ರವಾರ, ಏಪ್ರಿಲ್ 24, 2026

ಗುರು ಇಂಡೇನ್ ಗ್ಯಾಸ್ ಏಜೆನ್ಸಿ ಅವ್ಯವಸ್ಥೆ; ಗ್ರಾಹಕರ ಆಕ್ರೋಶ.

ಚಿತ್ತಾಪುರ: ಪಟ್ಟಣದ ಗುರು ಇಂಡೇನ್ ಗ್ಯಾಸ್ ಏಜೆನ್ಸಿಯ ಕಳಪೆ ಸೇವೆ ಹಾಗೂ ಸಿಬ್ಬಂದಿಗಳ ಬೇಜವಾಬ್ದಾರಿತನದ ವಿರುದ್ಧ ಗ್ರಾಹಕರು ಬುಧವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗ್ಯಾಸ್ ಬುಕ್ಕಿಂಗ್ ಮಾಡಿ 15 ದಿನ ಕಳೆದರೂ ಸಿಲಿಂಡರ್ ಪೂರೈಕೆಯಾಗದ ಹಿನ್ನೆಲೆಯಲ್ಲಿ, ಸಾರ್ವಜನಿಕರು ದಿನವಿಡೀ ಗೋಡೌನ್ ಮುಂದೆ ಕಾದು ಪರದಾಡುವಂತಾಯಿತು.

ಪಟ್ಟಣದ ಒಂಟಿ ಕಮಾನ್ ಹತ್ತಿರವಿರುವ ಗ್ಯಾಸ್ ಗೋಡೌನ್ ಮುಂದೆ ಬೆಳಿಗ್ಗೆಯಿಂದಲೇ ನೂರಾರು ಗ್ರಾಹಕರು ಖಾಲಿ ಸಿಲಿಂಡರ್‌ಗಳೊಂದಿಗೆ ಜಮಾಯಿಸಿದ್ದರು. 43 ಡಿಗ್ರಿ ಸುಡುವ ಬಿಸಿಲನ್ನೂ ಲೆಕ್ಕಿಸದೆ, ಹಣಿಕೆರಾ ತಾಂಡಾ ಹಾಗೂ ಭಂಕಲಗಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಬಂದ ಜನರು ರಾತ್ರಿಯಾದರೂ ಸಿಲಿಂಡರ್ ಸಿಗದೆ ಪರದಾಡಿದರು.

"ನಾನು ದೃಷ್ಟಿಹೀನನಾಗಿದ್ದು, ಬೆಳಿಗ್ಗೆ 10 ಗಂಟೆಯಿಂದ ಕಾಯುತ್ತಿದ್ದೇನೆ. ಟೋಕನ್ ನೀಡಿ ಮಧ್ಯಾಹ್ನ ಬರುತ್ತದೆ ಎಂದು ಹೇಳಿದವರು ಈಗ ರಾತ್ರಿಯಾದರೂ ವಿತರಿಸಿಲ್ಲ. ಇಷ್ಟು ಹೊತ್ತಿನಲ್ಲಿ ಖಾಲಿ ಸಿಲಿಂಡರ್ ಹಿಡಿದು ಊರಿಗೆ ಹೇಗೆ ಹೋಗಲಿ?" ಎಂದು ಭಂಕಲಗಿಯ ನಿವಾಸಿ ಶಾಂತಕುಮಾರ್ ರೆಡ್ಡಿ ಕಣ್ಣೀರು ಹಾಕಿದರು.

ಏಜೆನ್ಸಿಯ ಸಿಬ್ಬಂದಿಗಳು ಫೋನ್ ಕರೆ ಸ್ವೀಕರಿಸುತ್ತಿಲ್ಲ, ಕೇಳಲು ಹೋದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಗ್ರಾಹಕರು ಕರೆ ಮಾಡಿದರೆ ಏಜೆನ್ಸಿಯ ಫೋನ್‌ಗಳು ಸ್ವಿಚ್ ಆಫ್ ಇರುತ್ತವೆ, ಮನೆಗೆ ತಲುಪಿಸುವ ಬದಲಿಗೆ "ನಾವೇ ನಿಮ್ಮ ಮನೆಗೆ ಬರಬೇಕೇ?" ಎಂಬ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಹಕರು ದೂರಿದ್ದಾರೆ, ಸಮಸ್ಯೆ ಬಗೆಹರಿಯದಿದ್ದರೆ ಏಜೆನ್ಸಿ ಮುಂದೆ ಕಟ್ಟಿಗೆ ತಂದು ಅಡುಗೆ ಮಾಡುವ ಮೂಲಕ ಪ್ರತಿಭಟನೆ ನಡೆಸುವುದಾಗಿ ಜನರು ಎಚ್ಚರಿಸಿದ್ದಾರೆ.

ಹಿಂದೆ ಯುದ್ಧದಂತಹ ಕಠಿಣ ಕಾಲದಲ್ಲೂ ಮನೆಬಾಗಿಲಿಗೆ ಸಿಲಿಂಡರ್ ತಲುಪಿಸುತ್ತಿದ್ದ ಏಜೆನ್ಸಿ, ಈಗ ಸಾಮಾನ್ಯ ದಿನಗಳಲ್ಲೇ ವಿತರಣೆಯಲ್ಲಿ ವಿಫಲವಾಗಿದೆ ಎಂದು ಧಾರನಾಯಕ ಪಿ. ರಾಥೋಡ್ ಅಸಮಾಧಾನ ವ್ಯಕ್ತಪಡಿಸಿದರು.

ಈ ಕೂಡಲೇ ಕ್ಷೇತ್ರದ ಶಾಸಕರಾದ ಗುರು ಇಂಡೇನ್ ಗ್ಯಾಸ್ ಏಜೆನ್ಸಿ ಅವ್ಯವಸ್ಥೆ; ಗ್ರಾಹಕರ ಆಕ್ರೋಶ. ಅವರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಧ್ಯಪ್ರವೇಶಿಸಿ, ಗುರು ಇಂಡೇನ್ ಗ್ಯಾಸ್ ಏಜೆನ್ಸಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಮನೆಮನೆಗೆ ಸರಿಯಾದ ವಿತರಣೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಚಿತ್ತಾಪುರಕ್ಕೆ ಸುಮಂತ ಮದಗುಂಟಿ ಪ್ರಥಮ:ಸ್ವಾಮಿ ವಿವೇಕಾನಂದ ಸಂಸ್ಥೆಗೆ ಸತತ 8ನೇ ಬಾರಿ ನೂರಕ್ಕೆ ನೂರು ಫಲಿತಾಂಶ.

ಚಿತ್ತಾಪುರ: ಗುಣಮಟ್ಟದ ಶಿಕ್ಷಣ ಮತ್ತು ಶಿಸ್ತಿನ ನೆಲೆಬೀಡಾಗಿರುವ ಇಲ್ಲಿನ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಸಂಚಾಲಿತ ವಿದ್ಯಾನಿಕೇತನ ಪ್ರೌಢ ಶಾಲೆಯು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಶಾಲೆಯು ಸತತ 8ನೇ ವರ್ಷವೂ ಶೇ. 100ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ತನ್ನ ವಿಜಯಯಾತ್ರೆಯನ್ನು ಮುಂದುವರೆಸಿದೆ.

ಶಾಲೆಯ ವಿದ್ಯಾರ್ಥಿ ಸುಮಂತ ಮದಗುಂಟಿ ಒಟ್ಟು 625 ಅಂಕಗಳಿಗೆ 614 ಅಂಕಗಳನ್ನು (ಶೇ. 98.24) ಪಡೆಯುವ ಮೂಲಕ ಇಡೀ ಚಿತ್ತಾಪುರ ತಾಲೂಕಿಗೆ ಪ್ರಥಮ ಸ್ಥಾನ ಅಲಂಕರಿಸಿದ್ದಾನೆ. ಗ್ರಾಮೀಣ ಭಾಗದ ಈ ವಿದ್ಯಾರ್ಥಿಯ ಸಾಧನೆಗೆ ಇಡೀ ತಾಲೂಕು ಹೆಮ್ಮೆ ವ್ಯಕ್ತಪಡಿಸಿದೆ.

ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 68 ವಿದ್ಯಾರ್ಥಿಗಳೂ ಯಶಸ್ವಿಯಾಗಿ ಉತ್ತೀರ್ಣರಾಗಿದ್ದು, ಫಲಿತಾಂಶದ ವಿವರದಲ್ಲಿ ಅತ್ಯುನ್ನತ ಶ್ರೇಣಿ (Distinction): 40 ವಿದ್ಯಾರ್ಥಿಗಳು,ಪ್ರಥಮ ಶ್ರೇಣಿ (First Class): 26 ವಿದ್ಯಾರ್ಥಿಗಳು,ಒಟ್ಟಾರೆ ಶೇ. 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದು ಶಾಲೆಯ ಬೋಧನಾ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.ಸತತ 8 ವರ್ಷಗಳಿಂದ 100% ಫಲಿತಾಂಶ ಕಾಯ್ದುಕೊಳ್ಳುವುದು ದೊಡ್ಡ ಮೈಲಿಗಲ್ಲಾಗಿದೆ. ಈ ಯಶಸ್ಸಿನ ಹಿಂದೆ ಶಾಲೆಯ ಮುಖ್ಯ ಗುರುಗಳಾದ ರಮೇಶ ಯಾದವಾಡ ಹಾಗೂ ಬೋಧಕ ಸಿಬ್ಬಂದಿಯ ಹಗಲಿರುಳಿನ ಶ್ರಮವಿದೆ. ವಿಶೇಷ ತರಗತಿಗಳು ಮತ್ತು ವೈಯಕ್ತಿಕ ಮಾರ್ಗದರ್ಶನ ಇಂದು ಶಾಲೆಯನ್ನು ಜಿಲ್ಲೆಯಲ್ಲೇ ಮಾದರಿಯಾಗಿಸಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀನಿವಾಸ ಪೇಂದು ಹಾಗೂ ಮಂಡಳಿಯ ಸರ್ವ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ. "ನಮ್ಮ ಶಾಲೆಯು ಕೇವಲ ಅಂಕಗಳಿಕೆಯನ್ನಷ್ಟೇ ಅಲ್ಲದೆ, ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಇದು ಶಿಕ್ಷಕರ ಮತ್ತು ಪೋಷಕರ ಸಹಕಾರಕ್ಕೆ ಸಂದ ಜಯ," ಎಂದು ಅವರು ತಿಳಿಸಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಮತ್ತು ಶಾಲಾ ತಂಡವನ್ನು ಪಟ್ಟಣದ ಗಣ್ಯರು ಹಾಗೂ ಸಾರ್ವಜನಿಕರು ಅಭಿನಂದಿಸಿದ್ದಾರೆ.

ಅದ್ಧೂರಿ ‘ಶ್ರೀ ಭಗೀರಥ ಮಹರ್ಷಿ ಜಯಂತಿ’ ಆಚರಣೆ.

​ಚಿತ್ತಾಪುರ: ಪಟ್ಟಣದ ಪ್ರಜಾ ಸೌಧದಲ್ಲಿ ಗುರುವಾರ ಮಾನ್ಯ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಶ್ರೀ ಭಗೀರಥ ಮಹರ್ಷಿ ಅವರ ಜಯಂತಿಯನ್ನು ಅತ್ಯಂತ ಸಡಗರ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.

​ಕಾರ್ಯಕ್ರಮದ ಕುರಿತು ಪ್ರಮುಖರಾದ ಅಂಬರೀಶ ಸುಲೇಗಾಂವ ಅವರು ಪ್ರಾಸ್ತವಿಕವಾಗಿ ಮಾತನಾಡಿ, "ತಮ್ಮ ಕಠಿಣ ತಪಸ್ಸಿನ ಮೂಲಕ ಗಂಗೆಯನ್ನು ಭೂಮಿಗೆ ತಂದ ಭಗೀರಥ ಮಹರ್ಷಿಗಳು ದೃಢ ಸಂಕಲ್ಪದ ಸಂಕೇತ. ಅವರ ಜೀವನ ಮತ್ತು ಸಾಧನೆ ಇಂದಿನ ಪೀಳಿಗೆಗೆ ಮಾದರಿಯಾಗಿದೆ," ಎಂದು ತಿಳಿಸಿದರು.

​ಅಧ್ಯಕ್ಷತೆಯ ನುಡಿಗಳನ್ನಾಡಿದ ತಹಸೀಲ್ದಾರ ನಾಗಯ್ಯ ಹಿರೇಮಠ ಮಹರ್ಷಿಗಳ ಜೀವನ ಸಂದೇಶವನ್ನು ಸ್ಮರಿಸುತ್ತಾ, ಸಮಾಜದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಅತ್ಯಗತ್ಯ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಹಳ್ಳಿ, ಪ್ರಮುಖ ಮುಖಂಡರಾದ ಲಕ್ಷ್ಮಣ ಟಳ್ಳಿ, ಮಲ್ಲಿಕಾರ್ಜುನ ಉಪ್ಪಾರ, ಗೋವಿಂದಪ್ಪ ಜಡಿ, ಭೀಮರಾಯ ಉಪ್ಪಾರ, ಹಾಗೂ ಶರಣಪ್ಪ ಬೀಮನಹಳ್ಳಿ ಸೇರಿದಂತೆ ಸಮಾಜದ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಗುರುವಾರ, ಏಪ್ರಿಲ್ 23, 2026

ನಿಗಮದ ಅಧ್ಯಕ್ಷರಾಗಿ ಡಾ. ಶ್ರೀನಿವಾಸ್ ವೇಲು ಪದಗ್ರಹಣ: ಸಿಎಂಗೆ ಅಭಿನಂದನೆ ಸಲ್ಲಿಸಿದ ಸಮುದಾಯದ ಮುಖಂಡರು

ಬೆಂಗಳೂರು: ಕರ್ನಾಟಕ ರಾಜ್ಯ ಕುಂಬಾರ ಜನಾಂಗ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಡಾ. ಶ್ರೀನಿವಾಸ್ ವೇಲು ಅವರನ್ನು ನೇಮಕ ಮಾಡಿದ ಹಿನ್ನೆಲೆಯಲ್ಲಿ, ಸಮಸ್ತ ಕುಂಬಾರ ಸಮುದಾಯದ ಪರವಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೆಂಗಳೂರಿನ ಅವರ ಅಧಿಕೃತ ಗೃಹ ಕಚೇರಿ 'ಕಾವೇರಿ'ಯಲ್ಲಿ ಭೇಟಿ ಮಾಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಾನ್ಯ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿಯವರು ಉಪಸ್ಥಿತರಿದ್ದು, ಸಮುದಾಯದ ಮುಖಂಡರೊಂದಿಗೆ ಶುಭ ಕೋರಿದರು. ತದನಂತರ ಸಂಜೆ ಬೆಂಗಳೂರಿನ ಡಿ. ದೇವರಾಜ ಅರಸು ಭವನದಲ್ಲಿ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕುಂಬಾರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಆರ್. ಶ್ರೀನಿವಾಸ್, ಕೆ.ಎಸ್.ಆರ್.ಟಿ.ಸಿ ನಿರ್ದೇಶಕಿ ಗಾಯಿತ್ರಿ (IAS), ಅಖಿಲ ಭಾರತ ಕರ್ನಾಟಕ ಕುಂಬಾರ ಮಹಾಸಭಾದ ಅಧ್ಯಕ್ಷರಾದ ಶಿವಕುಮಾರ ಚೌಡ ಶೆಟ್ಟಿ, ಗೌರವಾಧ್ಯಕ್ಷರಾದ ಗುರುರಾಜ್, ಮಾಜಿ ಹೆಚ್ಚುವರಿ ಅಡ್ವಕೇಟ್ ಜನರಲ್ ದೇವದಾಸ್, ವಕೀಲರಾದ ಅನುಸೂಯಾ, ಡಾ. ಹೇಮಾವತಿ ಶ್ರೀನಿವಾಸ್ ವೇಲು ಹಾಗೂ ಸಮುದಾಯದ ಮುಖಂಡರಾದ ಸಂಗಮೇಶ, ಚಿಕ್ಕ ವೀರಯ್ಯ ಟಿ.ಎನ್, ವಿಠಲ್ ಶಂಕರ್ ಸೇರಿದಂತೆ ಹಲವು ಹಿತೈಷಿಗಳು ಭಾಗವಹಿಸಿದ್ದರು.

"ಅನಿವಾರ್ಯ ಕಾರಣಗಳಿಂದಾಗಿ ಬೆಂಗಳೂರಿನಲ್ಲಿ ನಡೆದ ನಮ್ಮ ಹೆಮ್ಮೆಯ ಸಮುದಾಯದ ನಾಯಕರಾದ ಡಾ. ಶ್ರೀನಿವಾಸ್ ವೇಲು ರವರ ಪದಗ್ರಹಣ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸಲು ಸಾಧ್ಯವಾಗಿಲ್ಲ. ನಮ್ಮ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಡಾ. ಶ್ರೀನಿವಾಸ್ ವೇಲು ರವರಿಗೆ ಈ ಜವಾಬ್ದಾರಿ ಸಿಕ್ಕಿರುವುದು ಅತ್ಯಂತ ಸಂತೋಷದ ವಿಷಯ. ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಅವರ ನೇತೃತ್ವದಲ್ಲಿ ಕುಂಬಾರ ನಿಗಮವು ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಂತಾಗಲಿ ಎಂದು ಆಶಿಸುತ್ತೇನೆ. ಈ ನೇಮಕಾತಿ ಮಾಡಿದ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಬೆಂಬಲವಾಗಿ ನಿಂತ ಸಾರಿಗೆ ಸಚಿವರಿಗೆ ಧನ್ಯವಾದಗಳು."

ಜಗದೇವ ಎಸ್. ಕುಂಬಾರ,
ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ,ಅಖಿಲ ಭಾರತ ಕುಂಬಾರ ಮಹಾಸಭಾ ಬೆಂಗಳೂರ.

ಬುಧವಾರ, ಏಪ್ರಿಲ್ 22, 2026

ಸಮಾಜಕ್ಕಾಗಿ ಬದುಕಿದಾಗ ಮಾತ್ರ ಜೀವನ ಸಾರ್ಥಕ: ಹಿರೇಮಠ.

ಚಿತ್ತಾಪುರ: ನಮ್ಮ ಜೀವನವನ್ನು ಕೇವಲ ಸ್ವಂತಕ್ಕಾಗಿ ಸೀಮಿತಗೊಳಿಸದೆ ಸಮಾಜಕ್ಕಾಗಿ ಮುಡಿಪಾಗಿಟ್ಟಾಗ ಮಾತ್ರ ಅದು ಸಾರ್ಥಕತೆ ಪಡೆಯುತ್ತದೆ ಎಂದು ತಹಸೀಲ್ದಾ‌ರ್ ನಾಗಯ್ಯ ಹಿರೇಮಠ ಅವರು ಅಭಿಪ್ರಾಯಪಟ್ಟರು.

ಪಟ್ಟಣದ ಪ್ರಜಾ ಸೌಧದ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು "ನಾವು ಪ್ರತಿನಿತ್ಯ ಸ್ವಾರ್ಥಕ್ಕಾಗಿ ಬದುಕುತ್ತಿದ್ದೇವೆ. ಆದರೆ ಹಿಂದಿನ ಮಹಾಪುರುಷರು ಸಂಸಾರ ಮತ್ತು ಸಂಬಂಧಗಳನ್ನು ಬದಿಗಿಟ್ಟು ಸಮಾಜ ಹಾಗೂ ಧರ್ಮದ ಉಳಿವಿಗಾಗಿ ಶ್ರಮಿಸಿದ್ದಾರೆ. ತಮ್ಮ ಜೀವನವನ್ನೇ ಧಾರೆ ಎರೆದ ಕಾರಣಕ್ಕೆ ಇಂದು ನಾವು ಅವರ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸುತ್ತಿದ್ದೇವೆ. ಅವರ ತತ್ವ ಸಿದ್ಧಾಂತಗಳನ್ನು ಪಾಲಿಸುವ ಮೂಲಕ ನಾವು ಕೂಡ ಸಮಾಜಮುಖಿಯಾಗಿ ಬದುಕಬೇಕು," ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕುಮಾರಿ ಅಕ್ಷತಾ ಜಾನೀಬ್ ಅವರು ಶಂಕರಾಚಾರ್ಯರ ಜೀವನ ಚರಿತ್ರೆಯ ಕುರಿತು ಉಪನ್ಯಾಸ ನೀಡಿದರು. ವಿಪ್ರ ಸಮಾಜದ ಕೋಶಾಧ್ಯಕ್ಷ ಜಯಂತ ಮಾಲಗತ್ತಿ ಅವರು ಮಾತನಾಡಿ, ಶಂಕರಾಚಾರ್ಯರ ಕೊಡುಗೆಯನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ಅಶ್ವತ್ಥ ನಾರಾಯಣ ಕುಲಕರ್ಣಿ, ಉಪ ನೋಂದಣಾಧಿಕಾರಿ ಆನಂದರಾವ್ ಕುಲಕರ್ಣಿ ಸೇರಿದಂತೆ
ತಾಲೂಕು ಗೌರವ ಅಧ್ಯಕ್ಷ ದೇವಿದಾಸ್ ಕುಲಕರ್ಣಿ, ತಾಲೂಕು ಅಧ್ಯಕ್ಷರು ಗಿರೀಶ್ ಜಾನೀಬ್, ಉಪಾಧ್ಯಕ್ಷ ವಿಶ್ವನಾಥ ಅಫಜಲಪುರಕರ್, ಹಣಮೇಶ್ ಆಚಾರ್ಯ, ಭೀಮರಾವ್ ಅಫಜಲಪುರಕರ್, ಗೌತಮ್ ನಾಯಕ್, ಗೋಪಾಲ್ ಹಾಗೂ ವಿಪ್ರ ಸಮಾಜದ ಮಹಿಳಾ ಮುಖಂಡರಾದ ಸರೋಜಾ ಅಫಜಲಪುರಕರ್, ಶೃತಿ ಜಾನೀಬ್, ಸಕ್ಕುಬಾಯಿ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮಂಗಳವಾರ, ಏಪ್ರಿಲ್ 21, 2026

ವೀರಶೈವ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅಡಿಗಲ್ಲು; ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ.

ಚಿತ್ತಾಪುರ: ಪಟ್ಟಣದ ಸ್ಟೇಷನ್‌ ರಸ್ತೆಯಲ್ಲಿರುವ ವೀರಶೈವ ಸಮಾಜದ ನಿವೇಶನದಲ್ಲಿ ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸುಸಜ್ಜಿತ ಹಾಗೂ ಹವಾನಿಯಂತ್ರಿತ (AC) ವೀರಶೈವ ಕಲ್ಯಾಣ ಮಂಟಪದ ಅಡಿಗಲ್ಲು ಸಮಾರಂಭ ಸೋಮವಾರ ಅದ್ಧೂರಿಯಾಗಿ ನೆರವೇರಿತು.

ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಅಡಿಗಲ್ಲು ನೆರವೇರಿಸಿ ಮಾತನಾಡಿ, "ಜಿಲ್ಲೆಯಲ್ಲೇ ಚಿತ್ತಾಪುರ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ಸಂಘಟನೆ ಅತ್ಯಂತ ಬಲಿಷ್ಠವಾಗಿದೆ. ಈ ಭಾಗದಲ್ಲಿ ಸಮಾಜದ ಬಾಂಧವರಿಗಾಗಿ ಸುಸಜ್ಜಿತ ಕಲ್ಯಾಣ ಮಂಟಪ ಹಾಗೂ ವಿದ್ಯಾರ್ಥಿ ವಸತಿ ನಿಲಯದ ಅವಶ್ಯಕತೆ ಇತ್ತು. ಈ ಕಾರ್ಯಕ್ಕೆ ವೈಯಕ್ತಿಕವಾಗಿ ಹಾಗೂ ಜಿಲ್ಲಾ ಘಟಕದ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಲ್ಲದೆ, ಯೋಜನೆಯ ಯಶಸ್ಸಿಗೆ ಬೆನ್ನೆಲುಬಾಗಿ ನಿಲ್ಲುತ್ತೇನೆ," ಎಂದು ಭರವಸೆ ನೀಡಿದರು.

ಬಸವ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ರಮೇಶ್ ಮರಗೋಳ ಮಾತನಾಡಿ, "ಸಮಾಜದ ಮುಖಂಡರ ಆಶಯದಂತೆ ಈ ಸುಸಜ್ಜಿತ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗುತ್ತಿದೆ. ಇದಕ್ಕೆ ಬೇಕಾಗುವ 2 ಕೋಟಿ ರೂ. ಹಣವನ್ನು ಸಮಾಜದ ಮುಖಂಡರು ಮತ್ತು ದಾನಿಗಳಿಂದ ಸಂಗ್ರಹಿಸಲಾಗುವುದು. ಈಗಾಗಲೇ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಅವರು 5 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಅನೇಕ ದಾನಿಗಳು ಸಹಾಯಕ್ಕೆ ಮುಂದೆ ಬಂದಿದ್ದು, ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ," ಎಂದರು.

ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿ, "ಪಟ್ಟಣದ ಹೃದಯ ಭಾಗದಲ್ಲಿ ಸಮಾಜಕ್ಕಾಗಿ ನಿವೇಶನ ಕಾಯ್ದಿರಿಸಿದ ಶಿವರಾವ್‌ ಪಾಟೀಲ ಬೆಳಗುಂಪಾ ಅವರ ಕಾರ್ಯ ಶ್ಲಾಘನೀಯ. ಸಮಾಜದ ಹಿತದೃಷ್ಟಿಯಿಂದ ರಾಜಕೀಯ ಪಕ್ಷಪಾತ ಮರೆತು ಎಲ್ಲರೂ ಒಗ್ಗೂಡಿರುವುದು ಸಂತಸದ ವಿಷಯ. ಈ ಭವನ ನಿರ್ಮಾಣವಾದ ನಂತರ ಬಡವರಿಗೂ ಕೈಗೆಟುಕುವ ದರದಲ್ಲಿ ಇದರ ಪ್ರಯೋಜನ ಸಿಗುವಂತಾಗಲಿ," ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ಮುಖಂಡರಾದ ವೀರಣ್ಣಗೌಡ ಪರಸರೆಡ್ಡಿ, ಶಿವಾನಂದ ಪಾಟೀಲ ಮರತೂರ, ಚಂದ್ರಶೇಖರ ಅವಂಟಿ, ಭೀಮಣ್ಣ ಸಾಲಿ ಮಾತನಾಡಿದರು.

ವೇದಿಕೆಯಲ್ಲಿ ತಾಲೂಕು ಗೌರವಾಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ಬಸವ ಜಯಂತಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಬೆಳಗುಂಪಾ, ಡಾ.ಪ್ರಭುರಾಜ ಕಾಂತಾ, ಸೋಮಶೇಖರ ಪಾಟೀಲ ಬೆಳಗುಂಪಾ, ರಾಜಶೇಖ‌ರ್ ತಿಮ್ಮನಾಯಕ ಸೇರಿದಂತೆ ಸಮಾಜದ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಶಾಂತಣ್ಣ ಚಾಳೀಕಾರ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿನಿ ನಿಲಯಕ್ಕೆ ಅಡಿಗಲ್ಲು: ಮುಂದಿನ ವರ್ಷ ಉದ್ಘಾಟನೆ.

​ಚಿತ್ತಾಪುರ: ಪಟ್ಟಣದ ರಾವೂರ ರಸ್ತೆಯಲ್ಲಿ ಶ್ರೀ ಬಸವೇಶ್ವರ ಚಾರಿಟೇಬಲ್‌ ಟ್ರಸ್ಟ್ ವತಿಯಿಂದ ನಿರ್ಮಿಸಲಾಗುತ್ತಿರುವ ಬಸವ ಭವನ ಹಾಗೂ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ವಸತಿ ನಿಲಯದ ಕಾಮಗಾರಿಗಳಿಗೆ ಬಸವ ಜಯಂತಿಯ ಶುಭ ದಿನದಂದು ಅಡಿಗಲ್ಲು ಹಾಕಲಾಗಿದ್ದು, ಮುಂದಿನ ವರ್ಷದೊಳಗೆ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ತಿಳಿಸಿದರು.

​ಸೋಮವಾರ ಹಮ್ಮಿಕೊಂಡಿದ್ದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಅವರು, "ಸಮಾಜದ ಹಿತದೃಷ್ಟಿಯಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ಕೆ ಈಗಾಗಲೇ ಹತ್ತು ಜನ ದಾನಿಗಳು ತಲಾ ಒಂದು ಕೊಠಡಿಯ ನಿರ್ಮಾಣಕ್ಕೆ ಧನಸಹಾಯ ನೀಡಲು ಮುಂದೆ ಬಂದಿದ್ದಾರೆ. ವಚನ ನೀಡಿದಂತೆ ಆಯಾ ಕೊಠಡಿಗಳಿಗೆ ದಾನಿಗಳ ಹೆಸರನ್ನೇ ಇಡಲಾಗುವುದು. ಶೀಘ್ರದಲ್ಲೇ ದಾನಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗುವುದು," ಎಂದು ಮಾಹಿತಿ ನೀಡಿದರು.

​ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅಡಿಗಲ್ಲು ನೆರವೇರಿಸಿದ ಕಂಬಳೇಶ್ವರದ ಶ್ರೀ ಸೋಮಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿ, "ಹುಟ್ಟು ಸಾವಿನ ನಡುವಿನ ಬದುಕಿನಲ್ಲಿ ಸಮಾಜಕ್ಕಾಗಿ ಉತ್ತಮ ಕಾರ್ಯ ಮಾಡುವುದು ಶ್ರೇಷ್ಠವಾದುದು. ಚಿತ್ತಾಪುರದಲ್ಲಿ ನಿರ್ಮಾಣವಾಗುತ್ತಿರುವ ಈ ಭವನ ಮತ್ತು ವಸತಿ ನಿಲಯಗಳು ಇಡೀ ಜಿಲ್ಲೆಗೆ ಮಾದರಿಯಾಗಲಿವೆ. ಸಮಾಜದ ಪ್ರತಿಯೊಬ್ಬರೂ ಈ ಕಾರ್ಯಕ್ಕೆ ಕೈಜೋಡಿಸಬೇಕು," ಎಂದು ಕರೆ ನೀಡಿದರು.

​ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ.ಪ್ರಭುರಾಜ ಕಾಂತಾ, ಅಣ್ಣಾರಾವ್ ಪಾಟೀಲ ಮುಡಬೂಳ, ಚಂದ್ರಶೇಖರ ಸಾತನೂರ, ಅಶೋಕ ನಿಪ್ಪಾಣಿ, ಮಲ್ಲಿಕಾರ್ಜುನರೆಡ್ಡಿ ಇಜಾರ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

​ಟ್ರಸ್ಟ್ ಕಾರ್ಯದರ್ಶಿ ನಾಗರಾಜ ಭಂಕಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬರೀಷ್ ಸುಲೇಗಾಂವ ಕಾರ್ಯಕ್ರಮ ನಿರೂಪಿಸಿದರೆ, ಅನಿಲ್ ವಡ್ಡಡಗಿ ವಂದಿಸಿದರು. ಚಂದ್ರುಗೌಡ ಬೆಳಗುಂಪಾ, ಎಸ್.ಎನ್.ಪಾಟೀಲ, ಶಾಂತಕುಮಾರ್ ಹತ್ತಿ, ಕುಂಬಾರ ಸಮಾಜದ ಅಧ್ಯಕ್ಷ ವಿಶ್ವನಾಥ ಕುಂಬಾರ, ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ಯಶಸ್ವಿ ಉಚಿತ ಆರೋಗ್ಯ ತಪಾಸಣಾ ಶಿಬಿರ.

ಚಿತ್ತಾಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿತ್ತಾಪುರ ಹಾಗೂ ಬಸವ ಜಯಂತಿ ಉತ್ಸವ ಆಚರಣೆ ಸಮಿತಿ ವತಿಯಿಂದ 893 ನೇ ಬಸವ ಜಯಂತಿ ಉತ್ಸವದ ಅಂಗವಾಗಿ ಸೋಮವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.

ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಶಿಬಿರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಜಯಂತಿಯ ಅಂಗವಾಗಿ ಇಂತಹ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಬಡವರು ಹಾಗೂ ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮೆಡಿಕೇ‌ರ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಮುಖ್ಯಸ್ಥ ಡಾ.ಸುರೇಶ್ ಪಾಟೀಲ ಅವರ ಸಹಕಾರದೊಂದಿಗೆ ನಡೆದ ಈ ಶಿಬಿರದಲ್ಲಿ ಸುಮಾರು 15 ರಿಂದ 20 ನುರಿತ ವೈದ್ಯರ ತಂಡ ಭಾಗವಹಿಸಿತ್ತು. ಶಿಬಿರದಲ್ಲಿ ಲಭ್ಯವಿದ್ದ ಪ್ರಮುಖ ಸೇವೆಗಳು:

ಮೂಳೆ ತಜ್ಞರು, ಲ್ಯಾಪರೋಸ್ಕೋಪಿಕ್, ಜನರಲ್ ಮೆಡಿಸಿನ್ ಹಾಗೂ ಮಹಿಳಾ ತಜ್ಞರು. ಕೀಲು ನೋವು, ಮಕ್ಕಳ ತಜ್ಞರು, ಕಿವಿ ಪರೀಕ್ಷೆ ಹಾಗೂ ಚರ್ಮ ರೋಗ ತಪಾಸಣೆ. ಮಧುಮೇಹ (Sugar), ರಕ್ತದ ಒತ್ತಡ (BP), ಕಣ್ಣಿನ ಪರೀಕ್ಷೆ ಹಾಗೂ ಸೀಳು ತುಟಿಗಳ ತಪಾಸಣೆ. ವೈದ್ಯರ ತಂಡವು ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದರ ಜೊತೆಗೆ ಉಚಿತವಾಗಿ ಔಷಧಿಗಳನ್ನು ವಿತರಿಸುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಿತು.

ಬಸವ ಜಯಂತಿ ಸಮಿತಿ ವತಿಯಿಂದ ಶಿಬಿರಕ್ಕೆ ಬಂದ ಸಾರ್ವಜನಿಕರಿಗೆ ತಂಪಾದ ಕುಡಿಯುವ ನೀರು ಹಾಗೂ ಪ್ರಸಾದದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ನೂರಾರು ಜನರು ಶಿಬಿರದ ಲಾಭ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಜಯಂತಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಬೆಳಗುಂಪಾ, ಡಾ.ಸುರೇಶ್ ಪಾಟೀಲ, ಡಾ.ಸಂತೋಷ ಪಾಟೀಲ ಹೆಬ್ಬಾಳ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಗೌರವಾಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ಅಧ್ಯಕ್ಷ ನಾಗರಾಜ ಭಂಕಲಗಿ ಉಪಸ್ಥಿತರಿದ್ದರು.

ಪ್ರಮುಖರಾದ ಸೋಮಶೇಖರ ಪಾಟೀಲ ಬೆಳಗುಂಪಾ, ನಾಗರೆಡ್ಡಿ ಪಾಟೀಲ ಕರದಾಳ, ರಮೇಶ್ ಮರಗೋಳ, ಶಿವಾನಂದ ಪಾಟೀಲ, ವೀರಣ್ಣಗೌಡ ಪರಸರೆಡ್ಡಿ, ಭೀಮಣ್ಣ ಸಾಲಿ, ಮಲ್ಲಿಕಾರ್ಜುನ ಕಾಳಗಿ, ಕುಂಬಾರ ಸಮಾಜದ ಅಧ್ಯಕ್ಷ ವಿಶ್ವನಾಥ ಕುಂಬಾರ, ರಮೇಶ ಕಾಳನೂರ. ಸೇರಿದಂತೆ ಅನೇಕ ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು.

ಬಸವ ಜಯಂತಿ ಸಂಭ್ರಮ: 70 ಜೋಡಿ ಎತ್ತುಗಳೊಂದಿಗೆ ಅದ್ದೂರಿ ಮೆರವಣಿಗೆ.

​ಚಿತ್ತಾಪುರ: ತಾಲೂಕು ಆಡಳಿತ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಬಸವ ಜಯಂತಿ ಉತ್ಸವ ಆಚರಣೆ ಸಮಿತಿ ಸಹಯೋಗದಲ್ಲಿ ಜಗಜ್ಯೋತಿ ಬಸವೇಶ್ವರರ 893ನೇ ಜಯಂತ್ಯುತ್ಸವವನ್ನು ಸೋಮವಾರ ಪಟ್ಟಣದಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದ ಪ್ರಜಾ ಸೌಧದಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ವಿಶೇಷ ಪೂಜೆ ನೆರವೇರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಸವಣ್ಣನವರ ತತ್ವಗಳು ಇಂದಿಗೂ ಸಾರ್ವಕಾಲಿಕವಾಗಿದ್ದು, ಸಮಾಜದಲ್ಲಿ ಸಮಾನತೆ ತರುವಲ್ಲಿ ಅವರ ಕೊಡುಗೆ ಅಪಾರ ಎಂದರು.

ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಾಗಿತು. ಬಸವೇಶ್ವರರ ಭಾವಚಿತ್ರದೊಂದಿಗೆ ಸುಮಾರು 70 ಜೋಡಿ ಅಲಂಕೃತ ಎತ್ತುಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಮೆರವಣಿಗೆಯುದ್ದಕ್ಕೂ ಬಸವಣ್ಣನವರ ಪರ ಜೈಘೋಷಗಳು ಮೊಳಗಿದವು. ಮೆರವಣಿಗೆಯು ಬಸವೇಶ್ವರ ವೃತ್ತಕ್ಕೆ ತಲುಪಿದ ನಂತರ ಸಮಾಪ್ತಿಗೊಂಡಿತು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ತಾಪಂ ಇಒ ಮಹ್ಮದ್ ಅಕ್ರಂ ಪಾಷಾ, ಸಿಪಿಐ ಎಸ್.ಸಿ.ಪಾಟೀಲ, ಪಿಎಸ್‌ಐ ಮಂಜುನಾಥ ರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಕೃಷಿ ಅಧಿಕಾರಿ ಸಂಜೀವಕುಮಾರ ಮಾನಕರೆ ಹಾಗೂ ಪಶು ವೈದ್ಯಾಧಿಕಾರಿ ಡಾ. ಶಂಕರ ಕಣ್ಣಿ ಉಪಸ್ಥಿತರಿದ್ದರು.
​ಜಯಂತಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಬೆಳಗುಂಪಾ, ಮಹಾಸಭಾ ತಾಲೂಕು ಗೌರವಾಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ಅಧ್ಯಕ್ಷ ನಾಗರಾಜ ಭಂಕಲಗಿ ಸೇರಿದಂತೆ ಮುಖಂಡರಾದ ಸೋಮಶೇಖರ ಪಾಟೀಲ ಬೆಳಗುಂಪಾ, ನಾಗರೆಡ್ಡಿ ಪಾಟೀಲ ಕರದಾಳ, ರಮೇಶ್ ಮರಗೋಳ, ಶಿವಾನಂದ ಪಾಟೀಲ, ಜಗಣ್ಣಗೌಡ ರಾಮತೀರ್ಥ, ವೀರಣ್ಣಗೌಡ ಪರಸರೆಡ್ಡಿ, ಭೀಮಣ್ಣ ಸಾಲಿ, ರವೀಂದ್ರ ಸಜ್ಜನಶೆಟ್ಟಿ, ಮಲ್ಲಿಕಾರ್ಜುನ ಕಾಳಗಿ, ಅಣ್ಣಾರಾವ ಪಾಟೀಲ ಮುಡಬೂಳ, ಕುಂಬಾರ ಸಮಾಜದ ಅಧ್ಯಕ್ಷ, ವಿಶ್ವನಾಥ ಕುಂಬಾರ ಹಾಗೂ ಸಾವಿರಾರು ಭಕ್ತಾದಿಗಳು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಶುಕ್ರವಾರ, ಏಪ್ರಿಲ್ 17, 2026

ಕುಂಬಾರ ಮಹಾಸಭಾದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಅದ್ಧೂರಿ ಸನ್ಮಾನ.

ಚಿತ್ತಾಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಅಖಿಲ ಭಾರತ ಕುಂಬಾರ ಮಹಾಸಭಾದ ತಾಲ್ಲೂಕು ಘಟಕದ ಸಭೆಯಲ್ಲಿ, ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಹಾಗೂ ವಿವಿಧ ಪದಾಧಿಕಾರಿಗಳಿಗೆ ಕುಂಬಾರ ಸಮಾಜದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.​ಅಖಿಲ ಭಾರತ ಕುಂಬಾರ ಮಹಾಸಭಾದ ತಾಲೂಕು ಅಧ್ಯಕ್ಷರಾಗಿ ನೇಮಕಗೊಂಡ ವಿಶ್ವನಾಥ ಎಸ್. ಕುಂಬಾರ ಅವರಿಗೆ ಸಮಾಜದ ಮುಖಂಡರು ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ ಶುಭ ಹಾರೈಸಿದರು.
​ಅಧ್ಯಕ್ಷರ ಜೊತೆಗೆ ಸಂಘದ ವಿವಿಧ ಜವಾಬ್ದಾರಿಗಳಿಗೆ ಆಯ್ಕೆಯಾದ ಈ ಕೆಳಗಿನ ಪ್ರಮುಖರನ್ನು ಸಹ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು ​ಗೌರವ ಅಧ್ಯಕ್ಷರಾಗಿ ಮಹಾದೇವ ಕುಂಬಾರ ಅಲ್ಲೂರ, ಮೋಗಲಪ್ಪ ಕುಂಬಾರ ಚಿತ್ತಾಪುರ, ಮಹಾದೇವ ಕುಂಬಾರ.​ಉಪಾಧ್ಯಕ್ಷರಾಗಿ ಆನಂದ ಕುಂಬಾರ ಚಿತ್ತಾಪುರ.​ಸಹ ಕಾರ್ಯದರ್ಶಿ ಬಸವರಾಜ ಕುಂಬಾರ. ನೇಮಕಗೊಂಡಿದ್ದಾರೆ.

​ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ವಿಶ್ವನಾಥ ಕುಂಬಾರ ಅವರು, ಸಮಾಜ ಬಾಂಧವರು ತನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು, ತಾಲ್ಲೂಕಿನಲ್ಲಿ ಕುಂಬಾರ ಸಮಾಜದ ಏಳಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.

​ಅಖಿಲ ಭಾರತ ಕುಂಬಾರ ಮಹಾಸಭಾ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಜಗದೇವ ಕುಂಬಾರ ಮಾತನಾಡಿ, ಸಂಘಟನೆಯ ಶಕ್ತಿ ಒಗ್ಗಟ್ಟಿನಲ್ಲಿದೆ. ಪದಾಧಿಕಾರಿಗಳು ಸಮಾಜದ ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.

​ಈ ಸಮಾರಂಭದಲ್ಲಿ ಶ್ರೀಮಂತ ಕುಂಬಾರ, ಮಹಾದೇವ ಕುಂಬಾರ, ಬಸವರಾಜ ಕುಂಬಾರ, ಶರಣಪ್ಪ ಕುಂಬಾರ ಕರದಾಳ, ಶರಣಪ್ಪ ಕುಂಬಾರ, ಸಂಗಮೇಶ ಕುಂಬಾರ, ಆನಂದ ಮುಡಬೂಳಕರ್ ಕುಂಬಾರ, ರಾಜು ಕುಂಬಾರ, ಅಂಬರೀಶ್ ಕುಂಬಾರ, ರವಿ ಕುಂಬಾರ, ಮಲ್ಲಿಕಾರ್ಜುನ ಕುಂಬಾರ ಅಲ್ಲೂರ, ಮಲ್ಲಿಕಾರ್ಜುನ ಕುಂಬಾರ, ಸಿದ್ದಣ್ಣ ಕುಂಬಾರ, ಸುಭಾಷ ಕುಂಬಾರ, ಜಗದೀಶ್ ಕುಂಬಾರ, ಬಂಡೆಪ್ಪ ಕುಂಬಾರ, ಶರಣಪ್ಪ ಕುಂಬಾರ, ಶರಣಪ್ಪ ಎನ್. ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ದಶರಥ್ ಕುಂಬಾರ, ಕಾಶಿನಾಥ್ ಕುಂಬಾರ ಬೆಣ್ಣೂರ, ಗುರುರಾಜ್ ಕುಂಬಾರ ಸೇರಿದಂತೆ ಸಮಾಜದ ನೂರಾರು ಕುಲಬಾಂಧವರು ಪಾಲ್ಗೊಂಡಿದ್ದರು.

ಕುಂಬಾರರ ಮಹಾಸಭಾದ ಅಧ್ಯಕ್ಷರಾಗಿ ವಿಶ್ವನಾಥ್ ಕುಂಬಾರ ನೇಮಕ

ಚಿತ್ತಾಪುರ: ಅಖಿಲ ಭಾರತ ಕುಂಬಾರರ ಮಹಾಸಭಾದ ಕರ್ನಾಟಕ ರಾಜ್ಯ ಘಟಕದ ವತಿಯಿಂದ ಚಿತ್ತಾಪುರ ತಾಲ್ಲೂಕು ಘಟಕಕ್ಕೆ ನೂತನ ಅಧ್ಯಕ್ಷರನ್ನಾಗಿ ಸಮಾಜ ಸೇವಕ ವಿಶ್ವನಾಥ್ ಎಸ್. ಕುಂಬಾರ ಅವರನ್ನು ನೇಮಕ ಮಾಡಲಾಗಿದೆ.

ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವಿಶ್ವನಾಥ್ ಅವರ ಬದ್ಧತೆ ಮತ್ತು ಕಾರ್ಯವೈಖರಿಯನ್ನು ಪರಿಗಣಿಸಿ, ಮಹಾಸಭಾದ ರಾಜ್ಯ ಅಧ್ಯಕ್ಷರಾದ ನಿತ್ಯಾಭರಣ ಚೌಡಶೆಟ್ಟಿ ಅವರು ಈ ನೇಮಕಾತಿ ಆದೇಶ ಹೊರಡಿಸಿದ್ದಾರೆ. ಸಂಘಟನೆಯ ನಿಯಮಾವಳಿಗಳಿಗೆ ಬದ್ಧರಾಗಿ, ಶಿಸ್ತಿನಿಂದ ಸಮಾಜದ ಹಿತರಕ್ಷಣೆಗಾಗಿ ಕೆಲಸ ಮಾಡುವಂತೆ ಅವರಿಗೆ ಸೂಚಿಸಲಾಗಿದೆ.

ನೂತನ ಅಧ್ಯಕ್ಷರಿಗೆ ಸಂಘಟನೆಯು ಈ ಕೆಳಗಿನ ಪ್ರಮುಖ ಹೊಣೆಗಾರಿಕೆಗಳನ್ನು ನೀಡಿದೆ ತಾಲ್ಲೂಕು ಮಟ್ಟದಲ್ಲಿ ಕುಂಬಾರ ಸಮಾಜದ ಚಟುವಟಿಕೆಗಳನ್ನು ಮುನ್ನಡೆಸುವುದು. ಸಮಾಜದ ಯುವಶಕ್ತಿ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವುದು. ತಾಲ್ಲೂಕು ವ್ಯಾಪ್ತಿಯಲ್ಲಿ ಅರ್ಹ ಮತ್ತು ಸಂಘಟನೆಗೆ ಬದ್ಧರಾಗಿರುವ ಸದಸ್ಯರನ್ನು ಆಯ್ಕೆ ಮಾಡಿ ಬಲಿಷ್ಠ ಸಮಿತಿಯನ್ನು ರಚಿಸುವುದು. ರಾಜ್ಯ ಮತ್ತು ರಾಷ್ಟ್ರೀಯ ನಾಯಕತ್ವದ ಮಾರ್ಗದರ್ಶನದಲ್ಲಿ ಸಂಘಟನೆಯನ್ನು ಸಂಘಟಿಸುವುದು.

"ವಿಶ್ವನಾಥ್ ಅವರ ನೇಮಕವು ತಾಲ್ಲೂಕಿನಲ್ಲಿ ಸಮಾಜದ ಸಂಘಟನೆಗೆ ಹೆಚ್ಚಿನ ಶಕ್ತಿ ನೀಡಲಿದೆ. ಅವರ ನೇತೃತ್ವದಲ್ಲಿ ಸಮಾಜದ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯಲಿ," ಎಂದು ಸಮಾಜದ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಶ್ವನಾಥ್ ಎಸ್. ಕುಂಬಾರ ಅವರ ನೇಮಕಾತಿಗೆ ಸಮಾಜದ ವಿವಿಧ ಮುಖಂಡರು, ಯುವ ಮುಖಂಡರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದು, ಅವರ ಮುಂದಿನ ಸಮಾಜಮುಖಿ ಕಾರ್ಯಗಳಿಗೆ ಶುಭ ಹಾರೈಸಿದ್ದಾರೆ.

ಗುರುವಾರ, ಏಪ್ರಿಲ್ 16, 2026

ಶ್ರೀಮತಿ ಮಹಾದೇವಮ್ಮ ಬಿ. ಪಾಟೀಲ್ ಸ್ಮಾರಕ ಸಿ.ಬಿ.ಎಸ್.ಇ ಶಾಲೆಗೆ ಶೇ. 99 ರಷ್ಟು ಫಲಿತಾಂಶ: ಶೈಕ್ಷಣಿಕ ಕ್ಷೇತ್ರದಲ್ಲಿ ಮೈಲಿಗಲ್ಲು

ಚಿತ್ತಾಪುರ: ಪಟ್ಟಣದ ವಿಶ್ವರು ಶಿಕ್ಷಣ ಹಾಗೂ ಕಲ್ಯಾಣ ಸಂಸ್ಥೆಯ ಶ್ರೀಮತಿ ಮಹಾದೇವಮ್ಮ ಬಿ. ಪಾಟೀಲ್ ಸ್ಮಾರಕ ಸಿ.ಬಿ.ಎಸ್.ಇ ಶಾಲೆಯು 2025-26ನೇ ಸಾಲಿನ ಸಿ.ಬಿ.ಎಸ್.ಇ 10ನೇ ತರಗತಿಯ ಪರೀಕ್ಷೆಯಲ್ಲಿ ಶೇ. 99 ರಷ್ಟು ಅತ್ಯುತ್ತಮ ಫಲಿತಾಂಶ ದಾಖಲಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಶಾಲೆಯ ವಿದ್ಯಾರ್ಥಿಗಳು ವೈಯಕ್ತಿಕ ಸಾಧನೆಯಲ್ಲೂ ಗಮನ ಸೆಳೆದಿದ್ದು, ಅಗ್ರಸ್ಥಾನ ಪಡೆದವರ ವಿವರ ಈ ಕೆಳಗಿನಂತಿದೆ ಪ್ರಥಮ ಸ್ಥಾನ: ಪ್ರೇಮ್ ತಂದೆ ಕಪಿಲ್ ಜಿತುರೆ (ಶೇ. 94.40) ದ್ವಿತೀಯ ಸ್ಥಾನ: ಚೇತನ್ ತಂದೆ ಬಸವರಾಜ (ಶೇ. 93)

ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 56 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು, ಶಾಲೆಯು ಶೇ. 100 ರಷ್ಟು ತೇರ್ಗಡೆ ಪ್ರಮಾಣವನ್ನು ಕಾಯ್ದುಕೊಂಡಿದೆ. ವರ್ಗೀಕೃತ ಫಲಿತಾಂಶ ಇಂತಿದೆ, ಅತ್ಯುನ್ನತ ಶ್ರೇಣಿ (Distinction): 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ (First Class): 19 ವಿದ್ಯಾರ್ಥಿಗಳು,ದ್ವಿತೀಯ ಶ್ರೇಣಿ (Second Class): 16 ವಿದ್ಯಾರ್ಥಿಗಳು,ತೃತೀಯ ಶ್ರೇಣಿ (Pass Class): 02 ವಿದ್ಯಾರ್ಥಿಗಳು.

ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿರುವ ಅವರು, ವಿದ್ಯಾರ್ಥಿಗಳ ಮುಂದಿನ ಉನ್ನತ ಶಿಕ್ಷಣ ಹಾಗೂ ಭವಿಷ್ಯದ ಹಾದಿಗೆ ಶುಭ ಹಾರೈಸಿದ್ದಾರೆ.

ಬುಧವಾರ, ಏಪ್ರಿಲ್ 15, 2026

ಅಂಬೇಡ್ಕರ್ ಜಯಂತಿಗೆ ಅಧಿಕಾರಿಗಳ ಗೈರು: ದಲಿತ ಮುಖಂಡರ ತೀವ್ರ ಆಕ್ರೋಶ, ಕ್ರಮಕ್ಕೆ ಆಗ್ರಹ.

ಚಿತ್ತಾಪುರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆಯಂತಹ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮಕ್ಕೆ ತಾಲೂಕು ಮಟ್ಟದ ಉನ್ನತ ಅಧಿಕಾರಿಗಳೇ ಗೈರಾಗಿರುವುದು ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಕರ್ತವ್ಯ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬುಧವಾರ ದಲಿತ ಮುಖಂಡರು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ಏಪ್ರಿಲ್ 14ರಂದು ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಅಧಿಕೃತ ಜಯಂತೋತ್ಸವ ಕಾರ್ಯಕ್ರಮಕ್ಕೆ ಹಲವು ಇಲಾಖೆಗಳ ಮುಖ್ಯಸ್ಥರು ಉದ್ದೇಶಪೂರ್ವಕವಾಗಿ ಗೈರಾಗಿದ್ದಾರೆ ಎಂದು ಮುಖಂಡರು ಆರೋಪಿಸಿದ್ದಾರೆ. ಈ ಕುರಿತು ಮಾತನಾಡಿದ ದಲಿತ ಮುಖಂಡ ಮಲ್ಲಿಕಾರ್ಜುನ ಮುಡಬೂಳಕರ್, "ಬಾಬಾ ಸಾಹೇಬರು ದೇಶಕ್ಕೆ ನೀಡಿದ ಸಂವಿಧಾನದಿಂದಲೇ ಅಧಿಕಾರ ಅನುಭವಿಸುತ್ತಿರುವ ಅಧಿಕಾರಿಗಳು, ಅವರ ಜಯಂತಿಗೇ ಗೈರಾಗಿರುವುದು ರಾಷ್ಟ್ರನಾಯಕನಿಗೆ ಮಾಡಿದ ಅಪಮಾನವಾಗಿದೆ. ಇದು ಅಂಬೇಡ್ಕರ್ ಅನುಯಾಯಿಗಳ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಆಡಳಿತದ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಹಾಜರಿರಬೇಕಿದ್ದರೂ ಗೈರಾದ ಪ್ರಮುಖ ಅಧಿಕಾರಿಗಳ ಪಟ್ಟಿಯನ್ನು ಮುಖಂಡರು ತಹಶೀಲ್ದಾರರ ಮುಂದಿಟ್ಟಿದ್ದಾರೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ರಾಜಕುಮಾರ್, ವೈದ್ಯಾಧಿಕಾರಿಗಳು ವಿಶ್ವನಾಥ್ ಕನಕ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಸಂಜೀವಕುಮಾರ್ ಮಾನಕರ್,ಇವರೊಂದಿಗೆ ಇನ್ನುಳಿದ ಕೆಲವು ಇಲಾಖೆಗಳ ಅಧಿಕಾರಿಗಳು ಸಹ ಗೈರಾಗಿದ್ದು, ಇವರೆಲ್ಲರೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

"ಸರ್ಕಾರಿ ಕಾರ್ಯಕ್ರಮ ಎಂದರೆ ಕೇವಲ ಔಪಚಾರಿಕತೆಯಲ್ಲ, ಅದು ದೇಶದ ಅಸ್ಮಿತೆ. ಇಂತಹ ಕಾರ್ಯಕ್ರಮಗಳಿಗೆ ಗೈರಾಗುವ ಮೂಲಕ ಅಧಿಕಾರಿಗಳು ತಮ್ಮ ಸಂವಿಧಾನ ವಿರೋಧಿ ಧೋರಣೆಯನ್ನು ಪ್ರದರ್ಶಿಸಿದ್ದಾರೆ. ತಕ್ಷಣ ಇವರ ವಿರುದ್ಧ ಕ್ರಮವಾಗದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು."

-ಶ್ರೀಕಾಂತ್ ಶಿಂಧೆ, ದಲಿತ ಮುಖಂಡರು 

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಕಾಳಗಿ, ಮಲ್ಲಿಕಾರ್ಜುನ ಬೆಣ್ಣೂರಕರ್, ಜಗನ್ನಾಥ ಮುಡಬೂಳಕರ್, ಸೂರಜ್ ಕಲ್ಲಕ್, ಶಿವಕುಮಾರ್ ಆರಬೋಳ, ಬಸವರಾಜ ಮುಡಬೂಳಕರ್, ಸಾಬಣ್ಣ ಹಲಗಿ, ಶಿವಕುಮಾರ್ ಯಾದಗಿರಿ, ರೋಹಿತ್ ಮುದಡಗಿ ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.

ತಹಶೀಲ್ದಾರ್ ಅವರು ಮನವಿಯನ್ನು ಸ್ವೀಕರಿಸಿದ್ದು, ಗೈರಾದ ಅಧಿಕಾರಿಗಳ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಏಪ್ರಿಲ್ 20ಕ್ಕೆ ಬಸವ ಜಯಂತಿ ಸಂಭ್ರಮ: ಆರೋಗ್ಯ ಸೇವೆಯೊಂದಿಗೆ ಅರ್ಥಪೂರ್ಣ ಆಚರಣೆಗೆ ಸಜ್ಜು.

ಚಿತ್ತಾಪುರ: ಪಟ್ಟಣದ ಬಸವೇಶ್ವರ ವೃತ್ತ ಹಾಗೂ ಎಪಿಎಂಸಿ ಆವರಣದಲ್ಲಿ ಏಪ್ರಿಲ್ 20ರಂದು ಹಮ್ಮಿಕೊಳ್ಳಲಾಗಿರುವ 893ನೇ ಬಸವ ಜಯಂತಿ ಉತ್ಸವದ ಪೂರ್ವಭಾವಿಯಾಗಿ ಇಂದು ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ, ಪ್ರಚಾರದ ವಾಹನಕ್ಕೆ ಚಾಲನೆ ನೀಡಲಾಯಿತು.

ಜಯಂತೋತ್ಸವದ ಅಂಗವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಕಲ್ಬುರ್ಗಿಯ ಮೆಡಿಕೇರ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರಾದ ಬಸವರಾಜ್ ಪಾಟೀಲ್ ಬೆಳಗುಂಪ, "ಶಿಬಿರದಲ್ಲಿ ಮೂಳೆ ತಜ್ಞರು, ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು ಸೇರಿದಂತೆ ವಿವಿಧ ವಿಭಾಗದ ವೈದ್ಯರು ಲಭ್ಯವಿರುತ್ತಾರೆ. ಕೀಲು ನೋವು, ಮಧುಮೇಹ, ರಕ್ತದೊತ್ತಡ, ಕಣ್ಣು ಮತ್ತು ಕಿವಿ ಪರೀಕ್ಷೆ ಹಾಗೂ ಸೀಳು ತುಟಿಗಳ ತಪಾಸಣೆ ನಡೆಸಿ ಉಚಿತವಾಗಿ ಔಷಧಿ ವಿತರಿಸಲಾಗುವುದು. ತಾಲೂಕಿನ ಸಮಸ್ತ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು" ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ನಾಗರಾಜ್ ಭಂಕಲಗಿ ಅವರು ಮಾತನಾಡಿ "ಜಗಜ್ಯೋತಿ ಬಸವಣ್ಣನವರ ತತ್ವಗಳು ಕೇವಲ ಒಂದು ಜಾತಿಗೆ ಸೀಮಿತವಲ್ಲ, ಅವು ವಿಶ್ವಮಾನ್ಯವಾದವುಗಳು. ಶ್ರಮ ಸಂಸ್ಕೃತಿ ಮತ್ತು ಸಮಾನತೆಯ ಸಂದೇಶ ಸಾರಿದ ಬಸವಣ್ಣನವರ ಜಯಂತಿಯನ್ನು ಈ ಬಾರಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಕೇವಲ ಮೆರವಣಿಗೆಗೆ ಸೀಮಿತವಾಗದೆ, ಬಡವರಿಗೆ ಮತ್ತು ಅಸಹಾಯಕರಿಗೆ ಆರೋಗ್ಯ ಸೇವೆಯಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಪ್ರತಿಯೊಬ್ಬರೂ ಬಸವಣ್ಣನವರ 'ಕಾಯಕವೇ ಕೈಲಾಸ' ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು," ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಅಶೋಕ್ ನಿಪ್ಪಾಣಿ, ಆನಂದ್ ಪಾಟೀಲ ನರಬೂಳ, ಚಂದ್ರಶೇಖರ್ ಉಟಗೋರು, ಅನಿಲ್ ಕುಮಾರ್ ವಡ್ಡಡಗಿ, ಶ್ರೀಮಂತ್ ಕುಂಬಾರ್, ವಿಶ್ವರಾಧ್ಯ ಪಾಟೀಲ್ ಕರದಾಳ, ನೆಹಲ್ ಪಾಟೀಲ್, ಅಂಬರೀಶ್ ಸುಲೆಗಾಂವ್, ಮಹಾದೇವ ಅಂಗಡಿ, ರಾಚು ಬೊಮ್ನಳ್ಳಿ, ಬಸವರಾಜ್ ಸಂಕನೂರ್, ರಮೇಶ್ ಕಾಳನೂರ ಸೇರಿದಂತೆ ಬಸವ ಜಯಂತಿ ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಮಂಗಳವಾರ, ಏಪ್ರಿಲ್ 14, 2026

ಅನ್ನದಾನಕ್ಕಿಂತ ರಕ್ತದಾನ ಶ್ರೇಷ್ಠ: ಭೀಮಣ್ಣ ಸಾಲಿ

ಚಿತ್ತಾಪುರ: ಪಟ್ಟಣದ ಪ್ರಮುಖ ಕೇಂದ್ರವಾದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತೋತ್ಸವವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಈ ಸುಸಂದರ್ಭದಲ್ಲಿ ಸಮಾಜ ಸೇವಕ ಪೃಥ್ವಿರಾಜ್ ಸಾಗರ ಅಭಿಮಾನಿಗಳ ಬಳಗದ ವತಿಯಿಂದ ಸತತ 6ನೇ ವರ್ಷದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪಿಎಲ್ ಡಿ ಬ್ಯಾಂಕ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭಿಮಣ್ಣ ಸಾಲಿ ಅವರು, "ಬಾಬಾ ಸಾಹೇಬರ ಜಯಂತೋತ್ಸವವು ತಾಲೂಕಿನಲ್ಲಿ ಅತ್ಯಂತ ಅದ್ದೂರಿಯಾಗಿ ಜರುಗುತ್ತಿದೆ. ಜೀವನದಲ್ಲಿ ಅನ್ನದಾನಕ್ಕಿಂತ ರಕ್ತದಾನವು ಅತ್ಯಂತ ಶ್ರೇಷ್ಠವಾದುದು. ತುರ್ತು ಸಂದರ್ಭದಲ್ಲಿ ರೋಗಿಗಳ ಜೀವ ಉಳಿಸಲು ರಕ್ತದ ಅವಶ್ಯಕತೆ ಇರುತ್ತದೆ. ಪೃಥ್ವಿರಾಜ್ ಸಾಗರ ಅಭಿಮಾನಿ ಬಳಗವು ಸತತವಾಗಿ ಇಂತಹ ಜನಪದ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪುರಸಭೆಯ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ಕಾಶಿ ಅವರು ಮಾತನಾಡಿ, ಯುವ ಸಮೂಹವು ಅಂಬೇಡ್ಕರ್ ಅವರ ತತ್ವಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದು ರಕ್ತದಾನ ಶಿಬಿರ ಆಯೋಜಿಸಿದವರನ್ನು ಕೊಂಡಾಡಿದರು.

ಶಿಬಿರದಲ್ಲಿ ಒಟ್ಟು 22 ಜನ ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಸಂಗ್ರಹಿಸಲಾದ ರಕ್ತವನ್ನು ಕಲಬುರ್ಗಿ ಜಿಲ್ಲಾ ಜೇಮ್ಸ್ (GIMS) ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳಾದ ಡಾ. ಪೂಜಾ, ಸುಜ್ಞಾನಿ ಪಾಟೀಲ್, ಯಲ್ಲಪ್ಪ ವಾರಿ ಹಾಗೂ ತಂಡದವರು ರಕ್ತ ಸಂಗ್ರಹಣಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಅಣದೂರ ಬುದ್ಧ ವಿಹಾರದ ಮಾತಾಜಿ ಅರ್ಚಸ್ಮತಿ,ತಹಸೀಲ್ದಾರ್ ನಾಗಯ್ಯ ಹೀರೆಮಠ, ಗ್ರೇಡ್-2 ತಹಸಿಲ್ದಾರ್ ರಾಜಕುಮಾರ್ ಮರತೂರ, ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚೇತನ್ ಗುರಿಕಾರ್, ಪುರಸಭೆ ಮುಖ್ಯ ಅಧಿಕಾರಿ ಶ್ರೀಮತಿ ಭಾರತಿ ದಂಡೋತಿ, ಸಿಪಿಐ ಎಸ್.ಸಿ. ಪಾಟೀಲ್, ಪಿಎಸ್ಐ ಮಂಜುನಾಥ ರೆಡ್ಡಿ, ತಾಪಂ ಇಓ ಮಹಮ್ಮದ್ ಅಕ್ರಂ ಪಾಶಾ, ಅರಣ್ಯ ಅಧಿಕಾರಿ ವಿಜಯಕುಮಾರ್ ಬಡಿಗೇರ್ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಅಂಬೇಡ್ಕರ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್ ಬೆಣ್ಣೂರಕರ್, ಶಿವಕಾಂತ ಬೆಣ್ಣೂರಕರ್,  ಮಲ್ಲಿಕಾರ್ಜುನ ಕಾಳಗಿ, ಜಗದೀಶ್ ಚವ್ಹಾಣ್, ಗೂಪಸೇನ್ ರೆಡ್ಡಿ, ದೇವಿಂದ್ರಪ್ಪ ಅಣಕಲ್, ಉದಯಕುಮಾರ್ ಸಾಗರ್, ಶ್ರೀಕಾಂತ್ ಶಿಂಧೆ, ಮಲ್ಲಿಕಾರ್ಜುನ್ ಮುಡಬೂಳಕರ್, ಜಗನ್ನಾಥ ಮುಡಬೂಳಕರ್, ನಾಗೇಶ್ ಹಲಗಿ, ಸುರಾಜ್ ಕಲ್ಲಕ, ರಾಜು ಬುಳಕರ್, ಶರಣು ತಲಾಟಿ, ವಿಕಾಸ್ ಮತ್ತಿಮೂಡ, ಸಾಗರ ಚಿಟ್ಟೆಕರ್, ಕಾರ್ತಿಕ್ ಕಲ್ಲಾಕ್, ನಾಗಾರ್ಜುನ ಮೂಡಬುಳ್ಕರ್, ನಿತಿನ್, ಮಲ್ಲಿಕಾರ್ಜುನ್ ಕಲ್ಮೇರಿ, ಉಸನಪ್ಪ, ಸಂದೀಪ್ ಗಾಯಕ್ವಾಡ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.

ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ, ಹಕ್ಕು ಸಿಗಲಿ": ನಾಗಯ್ಯ ಹೀರೆಮಠ.


ಅಂಬೇಡ್ಕರ್ 135ನೇ ಜಯಂತೋತ್ಸವ ಸಡಗರದ ಆಚರಣೆ.

ಚಿತ್ತಾಪುರ: ಅಂಬೇಡ್ಕರ್ ಅವರು ಬಾಲ್ಯದಲ್ಲಿ ಅನುಭವಿಸಿದ ನೋವು ಮತ್ತು ಕಷ್ಟಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಅನುಭವಿಸಬಾರದು ಎಂಬ ಏಕೈಕ ಉದ್ದೇಶದಿಂದ ಭಾರತಕ್ಕೆ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ ಎಂದು ಚಿತ್ತಾಪುರ ತಹಸೀಲ್ದಾರ್ ನಾಗಯ್ಯ ಹೀರೆಮಠ ಅವರು ಅಭಿಪ್ರಾಯಪಟ್ಟರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಬಾಬಾ ಸಾಹೇಬರ 135ನೇ ಜಯಂತೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು "ಅಂಬೇಡ್ಕರ್ ಅವರು ಪ್ರತಿಪಾದಿಸಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂರು ಮಂತ್ರಗಳು ಇಂದಿಗೂ ಪ್ರಸ್ತುತ. ಶಿಕ್ಷಣದಿಂದ ಮಾತ್ರ ಮನುಷ್ಯನ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಅಂಬೇಡ್ಕರ್ ಅವರು ಕಂಡ ಸಮಾನ ಸಮಾಜದ ಕನಸು ನನಸಾಗಬೇಕಾದರೆ ನಾವೆಲ್ಲರೂ ಸಂವಿಧಾನದ ದಾರಿಯಲ್ಲಿ ನಡೆಯಬೇಕು. ಸಮಾಜದ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಮತ್ತು ಅವಕಾಶಗಳು ಸಿಗುವಂತಾಗಬೇಕು," ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿದ್ದ ಸೇಡಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಮುಖ್ಯಸ್ಥ ಪ್ರೊ. ವಿಷ್ಣುವರ್ಧನ್ ಮುಲಿಮನಿ ಅವರು ಅಂಬೇಡ್ಕರ್ ಅವರ ಬದುಕು ಮತ್ತು ಸಂವಿಧಾನದ ರಚನೆಯ ಹಾದಿಯ ಬಗ್ಗೆ ಸುದೀರ್ಘವಾಗಿ ಮಾತನಾಡುತ್ತಾ "ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡುವಾಗ ಎದುರಿಸಿದ ದೈಹಿಕ ಶ್ರಮ ಮತ್ತು ಸಾಮಾಜಿಕ ವಿರೋಧಗಳು ಸಾಮಾನ್ಯವಾದುದಲ್ಲ. ಅಸಂಖ್ಯಾತ ಗ್ರಂಥಗಳನ್ನು ಓದಿ, ಜಗತ್ತಿನ ವಿವಿಧ ಸಂವಿಧಾನಗಳನ್ನು ಅಭ್ಯಾಸ ಮಾಡಿ ಭಾರತದಂತಹ ವೈವಿಧ್ಯಮಯ ದೇಶಕ್ಕೆ ಹೊಂದುವಂತಹ ಕಾನೂನು ರೂಪಿಸಿದರು."

"ಸಂವಿಧಾನ ಕೇವಲ ಒಂದು ದಾಖಲೆಯಲ್ಲ, ಅದು ಈ ದೇಶದ ಪ್ರತಿಯೊಬ್ಬ ನಾಗರಿಕನ ಆತ್ಮಗೌರವದ ಸಂಕೇತ. ಬಾಬಾ ಸಾಹೇಬರ ಸಂಕಷ್ಟದ ಹಾದಿಯನ್ನು ಅರ್ಥಮಾಡಿಕೊಂಡಾಗ ಮಾತ್ರ ನಾವು ಸಂವಿಧಾನವನ್ನು ಗೌರವಿಸಲು ಸಾಧ್ಯ," ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಕಲಾ, ಕಾಮರ್ಸ್ ಮತ್ತು ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ರಕ್ತದಾನ ಶಿಬಿರದ ಮೂಲಕ ಸಮಾಜಮುಖಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ವೇದಿಕೆಯಲ್ಲಿ ಅಣದೂರ ಬುದ್ಧ ವಿಹಾರದ ಮಾತಾಜಿ ಅರ್ಚಸ್ಮತಿ, ಅಂಬೇಡ್ಕರ್ ಜಯಂತೋತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್, ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಭೀಮಣ್ಣ ಸಾಲಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶಿವಕಾಂತ ಬೇಣ್ಣೂರಕರ್, ದೇವಿಂದ್ರ ಕುಮಸಿ, ಗೋಫಸೇನ್ ರೆಡ್ಡಿ, ರಾಮಲಿಂಗ ಬಾನರ್, ಜಗದೀಶ ಚವ್ಹಾಣ್, ದೇವಿಂದ್ರಪ್ಪ ಅಣಕಲ್, ಶ್ರೀಕಾಂತ್ ಸಿಂಧೆ, ಮಲ್ಲಿಕಾರ್ಜುನ ಮೂಡಬುಳಕರ್, ಉದಯಕುಮಾರ್ ಸಾಗರ, ನಾಗೇಂದ್ರ ಬುರ್ಲಿ, ತಾಲೂಕು ಮಟ್ಟದ ಅಧಿಕಾರಿಗಳಾದ ಗ್ರೇಡ್- 2 ತಹಸೀಲ್ದಾರ್ ರಾಜಕುಮಾರ್ ಮರತೂರ, ಸಿಪಿಐ ಎಸ್ ಸಿ ಪಾಟೀಲ್, ತಾಪಂ ಇಓ ಮಹ್ಮದ್ ಆಕ್ರಂ ಪಾಶಾ, ಸಮಾಜ ಕಲ್ಯಾಣ ಇಲಾಖೆ ಚೇತನ್ ಗುರಿಕಾರ್,  ಅರಣ್ಯ ಅಧಿಕಾರಿ ವಿಜಯಕುಮಾರ ಬಡಿಗೇರ್, ಪಿಎಸ್ಐ ಮಂಜುನಾಥ ರೆಡಿ, ಎಪಿಎಂಸಿ ಕಾರ್ಯದರ್ಶಿ ನರಸಿಂಹಲು, ಬಿಸಿಎಂ ಇಲಾಖೆ ಶ್ರೀಮತಿ ಸುನಿತಾ, ಸಿಡಿಪಿಒ ಇಲಾಖೆ ಶ್ರೀಮತಿ ಆರತಿ ತುಪ್ಪದ, ಅಬಕಾರಿ ಇಲಾಖೆ ವನೀತಾ ಸೀತಾಳೆ, ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಭಾರತಿ ದಂಡೋತಿ, ಸೇರಿದಂತೆ ಅನೇಕ ಮುಖಂಡರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ್ ಕಣ್ಣಿ ಕಾರ್ಯಕ್ರಮ ನಿರೂಪಿಸಿದರೆ, ಶಿವಶರಣಪ್ಪ ಮಟ್ಟಾಳೆ ವಂದಿಸಿದರು.

ಸೋಮವಾರ, ಏಪ್ರಿಲ್ 13, 2026

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕೆ ಅದಾಮಾ (ADAMA) ಕಂಪನಿಯಿಂದ ಹೊಸ ಮೂಲಸೌಕರ್ಯ ಲೋಕಾರ್ಪಣೆ

ಕಲಬುರಗಿ: ಈ ಭಾಗದ ವಿಶೇಷ ಶಿಕ್ಷಣದ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ, ಜಾಗತಿಕ ಮಟ್ಟದ ಬೆಳೆ ಸಂರಕ್ಷಣಾ ಸಂಸ್ಥೆಯಾದ ಅದಾಮಾ (ADAMA), ಇಲ್ಲಿನ ಅಫಜಲಪುರ ರಸ್ತೆಯಲ್ಲಿರುವ ಬೌದ್ಧಿಕ ವಿಕಲಚೇತನ ಮಕ್ಕಳ ಶಾಲೆಯಾದ ಪರಿವರ್ತನಾ ಮಂದಿರದಲ್ಲಿ 1,800 ಚದರ ಅಡಿಯ ನೂತನ ತರಬೇತಿ ಬ್ಲಾಕ್ ಅನ್ನು ಉದ್ಘಾಟಿಸಿದೆ.

ದೀರ್ಘಕಾಲದವರೆಗೆ ಸುಸಜ್ಜಿತ ಕಟ್ಟಡದ ಕೊರತೆ ಅನುಭವಿಸುತ್ತಿದ್ದ ಈ ಶಾಲೆಗೆ, ಅದಾಮಾ ಕಂಪನಿಯು ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಅಡಿಯಲ್ಲಿ ಹೈದರಾಬಾದ್ ಮೂಲದ 'ನಿರ್ಮಾಣ್ ಆರ್ಗನೈಸೇಶನ್' ಸ್ವಯಂಸೇವಾ ಸಂಸ್ಥೆಯ ಸಹಯೋಗದೊಂದಿಗೆ ಈ ಯೋಜನೆಯನ್ನು ಪೂರ್ಣಗೊಳಿಸಿದೆ.

ನೂತನ ಕಟ್ಟಡವು ಸುಸಜ್ಜಿತ ತರಗತಿ ಕೊಠಡಿ, ವೃತ್ತಿಪರ ತರಬೇತಿ ಕೊಠಡಿ, ಆಡಳಿತ ಕಚೇರಿ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ಹೊಂದಿದೆ. ಇದರೊಂದಿಗೆ ಶಾಲಾ ಪೀಠೋಪಕರಣಗಳು, RO ಕುಡಿಯುವ ನೀರಿನ ಘಟಕ, ಗ್ರೀನ್ ಬೋರ್ಡ್‌ಗಳು, ಅಲ್ಮಿರಾಗಳು ಮತ್ತು ಮಕ್ಕಳಿಗೆ ಆಟದ ಸಾಮಗ್ರಿಗಳನ್ನು ಅದಾಮಾ ಸಂಸ್ಥೆ ಒದಗಿಸಿದೆ. ಪ್ರಸ್ತುತ 65 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಭವಿಷ್ಯದಲ್ಲಿ 300ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡಲು ಇದು ಸಹಕಾರಿಯಾಗಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅದಾಮಾ ಇಂಡಿಯಾದ ಮಾರಾಟ ವಿಭಾಗದ ನಿರ್ದೇಶಕ ರಮೇಶ್ ರೆಡ್ಡಿ ಅವರು, "ಅದಾಮಾ ಕಂಪನಿಯು ಕೇವಲ ಕೃಷಿ ಕ್ಷೇತ್ರಕ್ಕೆ ಸೀಮಿತವಾಗದೆ, ಸಮಾಜದ ಸರ್ವಾಂಗೀಣ ಪ್ರಗತಿಗೆ ಬದ್ಧವಾಗಿದೆ. ಈ ವಿಶೇಷ ಚೇತನ ಮಕ್ಕಳಿಗೆ ಗೌರವಯುತ ಕಲಿಕಾ ಪರಿಸರ ಒದಗಿಸುವುದು ನಮ್ಮ ಆಶಯವಾಗಿದೆ," ಎಂದರು.
ವಿನಾಯಕ ಎಜುಕೇಶನಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಶ್ರೀಮಂತ ರೇವೂರ ಮಾತನಾಡಿ, "ಸ್ಥಳಾವಕಾಶದ ಕೊರತೆಯೇ ನಮಗೆ ದೊಡ್ಡ ಸವಾಲಾಗಿತ್ತು. ಈಗ ಲಭ್ಯವಾಗಿರುವ ಈ ಮೂಲಸೌಕರ್ಯದಿಂದ ಮಕ್ಕಳಿಗೆ ಉತ್ತಮ ಪಠ್ಯಕ್ರಮ ಮತ್ತು ಜೀವನೋಪಾಯದ ತರಬೇತಿ ನೀಡಲು ಸಾಧ್ಯವಾಗಲಿದೆ," ಎಂದು ಕೃತಜ್ಞತೆ ಸಲ್ಲಿಸಿದರು.

ಈ ನೂತನ ಕೇಂದ್ರದಲ್ಲಿ ಮಕ್ಕಳಿಗೆ ಸ್ವಯಂ ನಿರ್ವಹಣೆ ಕೌಶಲಗಳ ಜೊತೆಗೆ ಪೇಪರ್ ಪ್ಲೇಟ್ ತಯಾರಿಕೆ, ಮೇಣದಬತ್ತಿ ತಯಾರಿಕೆ, ಲಕೋಟೆ (ಎನ್ವಲಪ್), ಜೂಟ್ ಬ್ಯಾಗ್ ಮತ್ತು ರಾಖಿ ಹಾಗೂ ಹಣತೆಗಳಿಗೆ ಬಣ್ಣ ಹಚ್ಚುವಂತಹ ವೃತ್ತಿಪರ ತರಬೇತಿಗಳನ್ನು ನೀಡಲಾಗುತ್ತದೆ. ಇದು ಮಕ್ಕಳು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದರು.

ಭಾನುವಾರ, ಏಪ್ರಿಲ್ 12, 2026

ಗ್ರಾಮೀಣಾಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅನನ್ಯ: ನಾಗವೇಣಿ ಅಭಿಮತ.

ಚಿತ್ತಾಪುರ: "ಗ್ರಾಮೀಣ ಭಾಗದ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದಿದೆ. ಹೀಗಾಗಿ ಗ್ರಾಮೀಣಾಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅನನ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ನಾಗವೇಣಿ ಅಭಿಮತ ವ್ಯಕ್ತಪಡಿಸಿದರು.

 ಪಟ್ಟಣದ ಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ ರೇವಣಸಿದ್ದಪ್ಪ ಕಾಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಹಾಗೂ ಸಂಶೋಧನಾ ಕೇಂದ್ರ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ (NSS) ವಾರ್ಷಿಕ ವಿಶೇಷ ಶಿಬಿರದ 4ನೇ ದಿನದ ಗ್ರಾಮೀಣ ಅಭಿವೃದ್ಧಿಯಲ್ಲಿ ಸ್ತ್ರೀಶಕ್ತಿಯ ಪಾತ್ರ' ಎಂಬ ವಿಷಯದ ಕುರಿತು ನಡೆದ ವಿಶೇಷ ಉಪನ್ಯಾಸ ಮಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ತ್ರೀಶಕ್ತಿ ಸಂಘಗಳ ಮೂಲಕ ಮಹಿಳೆಯರು ಇಂದು ಸ್ವಾವಲಂಬಿಗಳಾಗುತ್ತಿದ್ದು, ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಶಕ್ತಿಯಾಗಿ ನಿಂತಿದ್ದಾರೆ," ಎಂದು ತಿಳಿಸಿದರು.
ಮತ್ತೊಬ್ಬ ಮುಖ್ಯ ಅತಿಥಿ, ಉದಯಕಾಲ ವರದಿಗಾರ ಜಗದೇವ ಕುಂಬಾರ ಅವರು ಮಾತನಾಡಿ, "ಗ್ರಾಮೀಣಾಭಿವೃದ್ಧಿ ಎಂದರೆ ಕೇವಲ ರಸ್ತೆ, ಚರಂಡಿ ನಿರ್ಮಾಣವಲ್ಲ; ಅದು ಮಹಿಳೆಯರ ಬೌದ್ಧಿಕ ಮತ್ತು ಆರ್ಥಿಕ ಸುಧಾರಣೆಯನ್ನೂ ಒಳಗೊಂಡಿದೆ. ಸ್ತ್ರೀಶಕ್ತಿ ಗುಂಪುಗಳು ಗ್ರಾಮೀಣ ಭಾಗದ ಅರ್ಥವ್ಯವಸ್ಥೆಯ ಬೆನ್ನೆಲುಬಾಗಿವೆ," ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸಕ ನರಸಪ್ಪ ಚಿನ್ನಕಟ್ಟಿ ಅವರು ವಿಶೇಷ ಉಪನ್ಯಾಸ ನೀಡಿ, ಶಿಬಿರಾರ್ಥಿಗಳಿಗೆ ಗ್ರಾಮೀಣಾಭಿವೃದ್ಧಿಯಲ್ಲಿ ಯುವಜನತೆ ಮತ್ತು ಸ್ತ್ರೀಶಕ್ತಿ ಹೇಗೆ ಕೈಜೋಡಿಸಬಹುದು ಎಂಬ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಸೂಗುರೇಶ್ವರ ವಹಿಸಿದ್ದರು. ವೇದಿಕೆಯಲ್ಲಿ ಅಗ್ನಿಶಾಮಕ ದಳದ ಠಾಣಾಧಿಕಾರಿ ನಾಗರಾಜ್, ಅಗ್ನಿಶಾಮಕ ಸಿಬ್ಬಂದಿಗಳಾದ ಕಾಶಿನಾಥ್, ಮಹಮ್ಮದ್ ಸಲೀಂ ಹಾಗೂ ಉಪನ್ಯಾಸಕ ರುದ್ರ ಕುಮಾರ್ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಅಧಿಕಾರಿಗಳಾದ ಉಪನ್ಯಾಸಕ ಮರೆಪ್ಪ ಮೇತ್ರಿ, ಮಲ್ಲಪ್ಪ ಮಾನೆಗರ್, ಡಾ. ಶಶಿಧರ್ ಯಡ್ರಾಮಿ, ಇದ್ದರು.

ಪೂಜಾ ಕಾರ್ಯಕ್ರಮವನ್ನು ನಿರೂಪಿಸಿದರು, ತುಳಸಿ ಸ್ವಾಗತಿಸಿದರು ಮತ್ತು ಗೌರಮ್ಮ ವಂದನಾರ್ಪಣೆ ಮಾಡಿದರು. ಶಿಬಿರದಲ್ಲಿ ನೂರಾರು ಎನ್‌ಎಸ್‌ಎಸ್ ಸ್ವಯಂಸೇವಕರು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಖರ್ಗೆ ಹೇಳಿಕೆ ಹಿಂದೂ ಸಂಪ್ರದಾಯಕ್ಕೆ ಅವಮಾನ: ಇಬ್ರಾಹಿಂ ದಿಗ್ಗಾಂವ್ ಕಿಡಿ.

ಚಿತ್ತಾಪುರ: ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅನ್ನು 'ವಿಷಕಾರಿ ಹಾವುಗಳು' ಎಂದು ಹೋಲಿಸಿರುವ ಹೇಳಿಕೆಯನ್ನು ಬಿಜೆಪಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಬ್ರಾಹಿಂ ದಿಗ್ಗಾಂವ್ ಬಲವಾಗಿ ಖಂಡಿಸಿದ್ದಾರೆ.

ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆಯವರ ಹೇಳಿಕೆಯು ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವಂತದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ "ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅನ್ನು ವಿಷಕಾರಿ ಹಾವುಗಳೆಂದು ಕರೆದು ಅವುಗಳನ್ನು ಹೊಡೆದು ಕೊಲ್ಲಬೇಕು ಎನ್ನುವ ಹೇಳಿಕೆ ಹಿಂದೂ ನಂಬಿಕೆ ಮತ್ತು ಸಂಪ್ರದಾಯಗಳಿಗೆ ಮಾಡಿದ ಅವಮಾನವಾಗಿದೆ. ಇಸ್ಲಾಂ ಧರ್ಮದ ಕುರಾನ್‌ನಲ್ಲಿ ನಮಾಜ್ ಮಾಡುವಾಗ ಹಾವು ಬಂದರೆ ಸಾಯಿಸಿ ಎಂದು ಹೇಳಲಾಗಿದೆ, ಆದರೆ ರಾಜಕೀಯ ಪಕ್ಷಗಳನ್ನು ಹಾವಿಗೆ ಹೋಲಿಸಿ ಕೊಲ್ಲಲು ಪ್ರಚೋದನೆ ನೀಡುವುದು ಅಕ್ಷಮ್ಯ ಅಪರಾಧ," ಎಂದು ಹೇಳಿದರು.

"ಖರ್ಗೆಯವರ ರಾಜಕೀಯ ಅನುಭವದಷ್ಟು ನನಗೆ ವಯಸ್ಸಾಗಿಲ್ಲದಿರಬಹುದು, ಆದರೆ ನಮ್ಮ ಸಮುದಾಯಕ್ಕೆ ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದಲ್ಲಿ ವಿಷ ಬಿತ್ತುವುದು ತಪ್ಪು. ಮುಸ್ಲಿಂ ಸಮುದಾಯವನ್ನು ಇಂತಹ ಮಾತುಗಳ ಮೂಲಕ ದಾರಿ ತಪ್ಪಿಸಬಾರದು," ಎಂದು ಎಚ್ಚರಿಸಿದರು. "ಕಾಂಗ್ರೆಸ್ ಪಕ್ಷ ಕಳೆದ 70 ವರ್ಷಗಳಿಂದ ಮುಸ್ಲಿಂ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. ಇದುವರೆಗೆ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡುವ ಸೌಜನ್ಯ ತೋರಿಲ್ಲ. ಆದರೆ ಬಿಜೆಪಿ ಸರ್ಕಾರವು ಎ.ಪಿ.ಜೆ ಅಬ್ದುಲ್ ಕಲಾಂ ಅವರಂತಹ ಮಹಾನ್ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡುವ ಮೂಲಕ ಸಮುದಾಯಕ್ಕೆ ಗೌರವ ನೀಡಿದೆ," ಎಂದು ತಿಳಿಸಿದರು.

"ಆರ್‌ಎಸ್‌ಎಸ್ ಮತ್ತು ಬಿಜೆಪಿ ನಿಜವಾಗಿಯೂ ವಿಷಕಾರಿಯಾಗಿದ್ದರೆ ಅಬ್ದುಲ್ ಕಲಾಂ ಅಂತಹವರು ದೇಶದ ಅತ್ಯುನ್ನತ ಸ್ಥಾನಕ್ಕೇರಲು ಸಾಧ್ಯವಾಗುತ್ತಿರಲಿಲ್ಲ. ಖರ್ಗೆಯವರ ಹೇಳಿಕೆಗಳು ಕೇವಲ ರಾಜಕೀಯ ಪ್ರೇರಿತ ಮತ್ತು ಅಪಾಯಕಾರಿ."

— ಇಬ್ರಾಹಿಂ ದಿಗ್ಗಾಂವ್, ಅಧ್ಯಕ್ಷರು, ಬಿಜೆಪಿ ಅಲ್ಪಸಂಖ್ಯಾತ ಘಟಕ ಚಿತ್ತಾಪುರ.

ಗುರುವಾರ, ಏಪ್ರಿಲ್ 9, 2026

ರೈತರ ಅಭ್ಯುದಯಕ್ಕೆ ಕಾಂಗ್ರೆಸ್ ಸರ್ಕಾರ ಬದ್ಧ: ಸಚಿವ ಪ್ರಿಯಾಂಕ್ ಖರ್ಗೆ.

ಚಿತ್ತಾಪುರ: ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ಹಾಗೂ ತೋಟಗಾರಿಕೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ತರಕಾರಿ ಬೀಜಗಳ ಕಿಟ್ ವಿತರಿಸಿ ಮಾತನಾಡಿದ ಅವರು
"ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರಿಗಾಗಿ ಒಟ್ಟು ₹2,590 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ ₹656 ಕೋಟಿ ಬೆಳೆ ವಿಮೆಯೂ ಸೇರಿದೆ. ಇಷ್ಟೊಂದು ಬೃಹತ್ ಮೊತ್ತದ ಪರಿಹಾರ ಪಡೆದ ಜಿಲ್ಲೆ ರಾಜ್ಯದಲ್ಲೇ ಮತ್ತೊಂದಿಲ್ಲ," ಎಂದು ಸಚಿವರು ಹೆಮ್ಮೆಯಿಂದ ಹೇಳಿದರು. ಹಿಂದೆ ಜಿಲ್ಲೆಯಲ್ಲಿ ತೊಗರಿ ಬೆಳೆಗೆ ನೆಟೆ ರೋಗ ತಗುಲಿ 2 ಲಕ್ಷ ಹೆಕ್ಟೇರ್ ಹಾನಿಯಾದಾಗ ₹182 ಕೋಟಿ ಬಿಡುಗಡೆ ಮಾಡಲಾಗಿತ್ತು. ಆದರೆ, ಈ ಹಿಂದೆ ಬಿಜೆಪಿ ಸರ್ಕಾರ ಬರ ಮತ್ತು ನೆರೆಯ ಸಂದರ್ಭದಲ್ಲಿ ಜಿಲ್ಲೆಗೆ ಕೇವಲ ₹22 ಕೋಟಿ ನೀಡಿತ್ತು ಎಂದು ಅವರು ಹೋಲಿಕೆ ಮಾಡಿದರು.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, "ಕೇಂದ್ರ ಸರ್ಕಾರ ರೈತ ವಿರೋಧಿ ನಿಲುವು ತಳೆದು ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ತಡೆಹಿಡಿದಿತ್ತು. ಇದಕ್ಕಾಗಿ ರಾಜ್ಯ ಸಚಿವ ಸಂಪುಟವೇ ದೆಹಲಿಯಲ್ಲಿ ಪ್ರತಿಭಟನೆ ನಡೆಸಬೇಕಾಯಿತು. ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯವೊಂದು ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಸುಪ್ರೀಂ ಕೋರ್ಟ್ ಚೀಮಾರಿ ಹಾಕಿದ ನಂತರವಷ್ಟೇ ಕೇಂದ್ರ ಅನುದಾನ ಬಿಡುಗಡೆ ಮಾಡಿತು. ಇದು ನಮ್ಮ ರೈತಪರ ಬದ್ಧತೆಗೆ ಸಾಕ್ಷಿ," ಎಂದರು.

ರೈತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಕೋಲ್ಡ್ ಸ್ಟೋರೇಜ್‌ (ಶೀತಲೀಕರಣ ಘಟಕ) ನಿರ್ಮಾಣ ಮತ್ತು ಪಲ್ಸ್ ಪ್ರೋಟೀನ್ ಹಬ್‌ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು. ಈಗಾಗಲೇ ಡ್ರೋನ್ ಮೂಲಕ ಕೀಟನಾಶಕ ಸಿಂಪಡಿಸುವ ತಂತ್ರಜ್ಞಾನ ಪರಿಚಯಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಿತ ಯಂತ್ರೋಪಕರಣಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಿಎಪಿ ಗೊಬ್ಬರದ ಬದಲಿಗೆ ಸಾವಯವ ಗೊಬ್ಬರ ಬಳಸುವ ಕುರಿತಾದ ಮಾಹಿತಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಎಂಎಲ್ಸಿ ಜಗದೇವ ಗುತ್ತೇದಾರ ಮಾತನಾಡಿ, ಪ್ರಿಯಾಂಕ್ ಖರ್ಗೆ ಬಂದ ಮೇಲೆ ಚಿತ್ತಾಪುರ ಹಾಗೂ ಕಲಬುರಗಿ ಚಿತ್ರಣವೇ ಬದಲಾಗಿದೆ, ಮಲ್ಲಿಕಾರ್ಜುನ ಖರ್ಗೆ 371ಜೆ ಕಲಂ ನೀಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ, ಅದೇ ರೀತಿ ಪ್ರಿಯಾಂಕ್ ಖರ್ಗೆ ತಂದೆಗೆ ತಕ್ಕ ಮಗನಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ವಿಧಾನಸಭಾ ಮತ್ತು ವಿಧಾನ ಪರಿಷತ್ ನಲ್ಲಿ ಹಾಗೂ ವಿರೋಧ ಪಕ್ಷಗಳಿಗೆ ತಕ್ಕ ಉತ್ತರ ನೀಡುವ ಏಕೈಕ ನಾಯಕ ಪ್ರಿಯಾಂಕ್ ಖರ್ಗೆ ಎಂದು ಬಣ್ಣಿಸಿದರು.

ತೊಗರಿ ಮಂಡಳಿ ಅಧ್ಯಕ್ಷ ಸೈಯದ್ ಮಹೆಮೂದ್ ಚಿಸ್ತಿ ಸಾಹೇಬ್, ಕೆಕೆಆರ್‌'ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಇಒ ಭಂವರ್ ಸಿಂಗ್ ಮೀನಾ, ಎಸ್ ಪಿ ಅತ್ತೂರು ಶ್ರೀನಿವಾಸಲು, ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್, ಎಸಿ ಪ್ರಭು ರೆಡ್ಡಿ, ತಹಸೀಲ್ದಾ‌ರ್ ನಾಗಯ್ಯ ಹಿರೇಮಠ, ತಾಪಂ ಇಒ ಮಹ್ಮದ್ ಅಕ್ರಂ ಪಾಷಾ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಕೃಷಿ ಅಧಿಕಾರಿ ಸಂಜೀವ್ ಮಾನಕರೆ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಪಿಎಲ್ಲಿ ಬ್ಯಾಂಕ್‌ ಅಧ್ಯಕ್ಷ ಭೀಮಣ್ಣ ಸಾಲಿ, ಡಾ.ಮಹಾಂತಗೌಡ ಪಾಟೀಲ, ದೇವಿಂದ್ರ ಯಾಬಾಳ, ಸಂಜಯ್ ಬುಳಕರ್‌ ಸೇರಿದಂತೆ ಇತರರು ಇದ್ದರು.ಜಿಲ್ಲಾ ತೋಟಗಾರಿಕೆ ಜಂಟಿ ನಿರ್ದೇಶಕರಾದ ಸಂತೋಷ ಇನಾಮದಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕರಾದ ರಾಜಕುಮಾ‌ರ್ ಗೋವಿನ್ ವಂದಿಸಿದರು.

ಏ. 11ಕ್ಕೆ ಸೂಗೂರ (ಎನ್) ಗ್ರಾಮಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ: ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಜುಮ್ಮಣ್ಣ ಪೂಜಾರಿ ಕರೆ

ಚಿತ್ತಾಪುರ: ತಾಲೂಕಿನ ಸೂಗೂರ (ಎನ್) ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಭೋಜಲಿಂಗೇಶ್ವರ ದೇವಸ್ಥಾನದ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ, ಬೆಳ್ಳಿ ರಥೋತ್ಸವ ಹಾಗೂ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭವು ಏಪ್ರಿಲ್ 11ರಂದು ಅದ್ದೂರಿಯಾಗಿ ಜರುಗಲಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕುರುಬ ಸಮಾಜದ ಹಿರಿಯ ಮುಖಂಡ ಜುಮ್ಮಣ್ಣ ಪೂಜಾರಿ ಅವರು ಮನವಿ ಮಾಡಿದರು.

ಗುರುವಾರ ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಶ್ರೀ ಭೋಜಲಿಂಗೇಶ್ವರ ಸಿದ್ದ ಸಂಸ್ಥಾನ ಮಠವು ಸರ್ವ ಜನಾಂಗದವರ ಆರಾಧ್ಯ ಕೇಂದ್ರವಾಗಿದೆ. ಈ ಭಾಗದ ಸಾವಿರಾರು ಭಕ್ತರ ಶ್ರದ್ಧಾ ಕೇಂದ್ರವಾಗಿರುವ ಈ ಮಠದ ನೂತನ ದೇವಸ್ಥಾನದ ಲೋಕಾರ್ಪಣೆ ಸಮಾರಂಭವು ಅತ್ಯಂತ ಸಂಭ್ರಮದಿಂದ ನಡೆಯಲಿದೆ" ಎಂದು ತಿಳಿಸಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾದ ಭೀಮಣ್ಣ ಸಾಲಿ ಮಾತನಾಡಿ, "ಸ್ಥಳೀಯ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿಶೇಷ ಆಸಕ್ತಿ ಮತ್ತು ನೇತೃತ್ವದಲ್ಲಿ ಈ ಬೃಹತ್ ಕಾರ್ಯಕ್ರಮ ಸಂಘಟಿತವಾಗಿದೆ. ರಾಜ್ಯದ ಮುಖ್ಯಮಂತ್ರಿಗಳು ಆಗಮಿಸುತ್ತಿರುವುದು ಇಡೀ ತಾಲೂಕಿಗೆ ಹೆಮ್ಮೆಯ ವಿಷಯ. ಹೀಗಾಗಿ ಸಾರ್ವಜನಿಕರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು" ಎಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಅಲ್ಪಸಂಖ್ಯಾತರ ಅಧ್ಯಕ್ಷ ಮುಕ್ತಾರ್ ಪಟೇಲ್, ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಪೂಜಾರಿ, ಮುಖಂಡರಾದ ಶಿವರಾಜ್ ಕಲಗುರ್ತಿ, ಮನ್ಸೂರ್ ಪಟೇಲ್, ರಸೂಲ್ ಮುಸ್ತಫಾ, ಈರಪ್ಪ ಭೋವಿ, ಶಿವುಕುಮಾರ ಸುಲ್ತಾನಪೂರ, ಮಲ್ಲಿಕಾರ್ಜುನ ಬೆಣ್ಣೂರಕರ್, ಮಲ್ಲಿಕಾರ್ಜುನ ಹಣಿಕೇರಿ, ಶಿವಯೋಗಿ ಸಾಹು ಗುಂಡಗುರ್ತಿ, ಭೋಜು ಶೇರಿ, ಸಂಜಯ್ ಬುಳಕ‌ರ್, ಪ್ರದೀಪ್ ಕದ್ದರಗಿ, ದೇವು ನಾಲವಾರ, ಬೀರು ಪೂಜಾರಿ, ನಿಂಗು ಕಡಬೂರ, ನಾಗು ಗಂಗಾಣಿ, ಸೇರಿದಂತೆ ಇತರರು ಇದ್ದರು. ಉದಯಕುಮಾ‌ರ್ ಸಾಗರ ಸ್ವಾಗತಿಸಿದರು, ಸಂತೋಷ ಪೂಜಾರಿ ನಿರೂಪಿಸಿದರು.

ಬುಧವಾರ, ಏಪ್ರಿಲ್ 8, 2026

ತರಕಾರಿ ಬೀಜಗಳ ಕಿಟ್ ವಿತರಣಾ ಕಾರ್ಯಕ್ರಮ: ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ.

ಚಿತ್ತಾಪುರ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಹಾಗೂ ತೋಟಗಾರಿಕೆ ಇಲಾಖೆ ಕಲಬುರ್ಗಿ ಇವರ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 9ರಂದು ಮಧ್ಯಾಹ್ನ 1 ಗಂಟೆಗೆ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ "ತರಕಾರಿ ಬೀಜಗಳ ಕಿಟ್ ವಿತರಣಾ ಕಾರ್ಯಕ್ರಮ"ವನ್ನು ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕರಾದ ರಾಜಕುಮಾರ್ ಗೋವಿನ್ ಅವರು ತಿಳಿಸಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಎಂ. ಖರ್ಗೆ ಅವರು ವಹಿಸಲಿದ್ದಾರೆ. ಜೂತೆಗೆ  ವೈದ್ಯಕೀಯ ಶಿಕ್ಷಣ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು.ಡಾ. ಶರಣಪ್ರಕಾಶ್ ಪಾಟೀಲ್,  ತೋಟಗಾರಿಕೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ಕೆಕೆಆರ್ಡಿಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರು.ಡಾ. ಅಜಯಸಿಂಗ್,ಆಳಂದ್ ಶಾಸಕರಾದ ಬಿ.ಆರ್. ಪಾಟೀಲ್,  ಕಲಬುರ್ಗಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಖನೀಜಾ ಫಾತಿಮಾ, ಇವರೊಂದಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ತೋಟಗಾರಿಕೆ ಜಂಟಿ ನಿರ್ದೇಶಕರಾದ ಸಂತೋಷ್ ಇನಾಮದಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರ್ ಶ್ರೀನಿವಾಸಲು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಹಿರಿಯ ನಿರ್ದೇಶಕ ರಾಜಕುಮಾರ್ ಗೋವಿನ್ ಅವರು, "ಸ್ಥಳೀಯವಾಗಿ ತರಕಾರಿ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ರೈತರಿಗೆ ನೆರವಾಗಲು ಈ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ರೈತರು, ಸಾರ್ವಜನಿಕರು ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು," ಎಂದು ವಿನಂತಿಸಿದ್ದಾರೆ.

ಮಂಗಳವಾರ, ಏಪ್ರಿಲ್ 7, 2026

ಅರಿವಿನ ಗವಿಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹ: ಸಿಎಂಗೆ ಮನವಿ.

ಚಿತ್ತಾಪುರ: ಬೀದರ್ ಜಿಲ್ಲೆಯ ಬಸವಕಲ್ಯಾಣದ ತ್ರಿಪುರಾಂತಕ ಕೆರೆ ಬಳಿಯಿರುವ ಹನ್ನೆರಡನೇ ಶತಮಾನದ ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಅಕ್ರಮವಾಗಿ ಬೇರೆ ಮೂರ್ತಿ ಪ್ರತಿಷ್ಠಾಪಿಸಿರುವುದನ್ನು ಖಂಡಿಸಿ, ಅಲ್ಲಿ ಪುನಃ ಅಪ್ಪಣ್ಣನವರ ಮೂರ್ತಿಯನ್ನೇ ಪ್ರತಿಷ್ಠಾಪಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ತಹಸೀಲ್ದಾರ್ ನಾಗಯ್ಯ ಹಿರೇಮಠ್ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ರವಾನಿಸಿದ ಸಂಘಟನೆಯು, ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರ ಐತಿಹಾಸಿಕ ಅರಿವಿನ ಗವಿಗೆ ಧಕ್ಕೆಯಾಗಿರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು.

ಬಸವಕಲ್ಯಾಣದ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಸಮೀಪ ಅನೇಕ ಬಸವಾದಿ ಶರಣರ ಅರಿವಿನ ಗವಿಗಳಿವೆ. ಇವುಗಳಲ್ಲಿ ಹಡಪದ ಅಪ್ಪಣ್ಣನವರ ಗವಿಯೂ ಒಂದು. ಆದರೆ, ಬಸವೇಶ್ವರ ದೇವಸ್ಥಾನದ ಪಂಚ ಕಮಿಟಿಯವರು ಈ ಗವಿಯನ್ನು ಅಕ್ರಮವಾಗಿ ಹಸ್ತಕ್ಷೇಪ ಮಾಡಿ, ಅಲ್ಲಿ ಅನ್ಯ ಶರಣರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ಸಮಾಜದ ಮುಖಂಡರು ಆರೋಪಿಸಿದ್ದಾರೆ. ಇದರಿಂದ ಹಡಪದ ಅಪ್ಪಣ್ಣನವರ ಇತಿಹಾಸದ ಮೌಲ್ಯಕ್ಕೆ ಧಕ್ಕೆಯಾಗಿದ್ದು, ಸಮುದಾಯದ ಭಕ್ತರ ಭಾವನೆಗಳಿಗೆ ತೀವ್ರ ಅನ್ಯಾಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅಕ್ರಮವಾಗಿ ಮೂರ್ತಿ ಬದಲಿಸಿದ ಪಂಚ ಕಮಿಟಿ ಮತ್ತು ಅದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಗವಿಯನ್ನು ಮೊದಲಿನ ಸ್ಥಿತಿಗೆ ತಂದು, ಅಲ್ಲಿ ಹಡಪದ ಅಪ್ಪಣ್ಣನವರ ಮೂರ್ತಿಯನ್ನೇ ಮರು ಪ್ರತಿಷ್ಠಾಪಿಸಬೇಕು. ಸದರಿ ಅರಿವಿನ ಗವಿಯನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಪ್ಪಿಸಿ, ಸರ್ಕಾರವೇ ಅದರ ಸಮರ್ಪಕ ಅಭಿವೃದ್ಧಿಗೆ ಕ್ರಮ ವಹಿಸಬೇಕು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾಧ್ಯಕ್ಷ ರಮೇಶ್ ಕೂಲ್ಲೂರ, "ನಮ್ಮ ಶರಣರ ಇತಿಹಾಸ ಮತ್ತು ಅರಿವಿನ ಗವಿಯನ್ನು ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಈಗಾಗಲೇ ಅನೇಕ ಮಠಾಧೀಶರು ಹಾಗೂ ಸಮಾಜದ ನಾಯಕರು ಹೋರಾಟ ನಡೆಸಿದ್ದರೂ ಇನ್ನೂ ನ್ಯಾಯ ಸಿಕ್ಕಿಲ್ಲ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ನಮಗೆ ನ್ಯಾಯ ಒದಗಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು," ಎಂದು ಎಚ್ಚರಿಸಿದರು.

ಮನವಿ ಸಲ್ಲಿಕೆಯ ಸಂದರ್ಭದಲ್ಲಿ ಉಪಾಧ್ಯಕ್ಷ ಶೇಷಣ್ಣ ದಂಡಗುಂಡ, ನಗರ ಅಧ್ಯಕ್ಷ ಮುರಳಿಕುಮಾರ ಸಾತನೂರ, ಸಿದ್ದು ಗುಂಡಗುರ್ತಿ, ಚೇತನ್ ಚಿತ್ತಾಪುರ, ಭೀಮಾಶಂಕರ,ಹಣಮಂತರಾಯ ಮುಗಟಾ, ಸಮಾಜದ ಮುಖಂಡರು, ಭಕ್ತರು ಹಾಗೂ ಹಡಪದ ಅಪ್ಪಣ್ಣ ಸಮಾಜದ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಕ್ಕಳೇ ಶಾಲೆಯ ಆಸ್ತಿ: ಆರಾಧನಾ ಶಾಲೆಯ ಸಂಭ್ರಮದ ವಾರ್ಷಿಕೋತ್ಸವ

ಚಿತ್ತಾಪುರ: ಪಟ್ಟಣದ ಆರಾಧನಾ ಪೂರ್ವ ಪ್ರಾಥಮಿಕ ಶಾಲೆಯ 7ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನವು ಮಂಗಳವಾರ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ಅನ್ನಪೂರ್ಣ ಎನ್. ಕಲ್ಲಕ್ ಅವರು, "ಮಕ್ಕಳ ಬಾಲ್ಯದ ಶಿಕ್ಷಣವು ಅವರ ಭವಿಷ್ಯದ ಅಡಿಪಾಯವಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿನ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಯಾಗುತ್ತವೆ," ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿ.ಆರ್.ಪಿ. ತಮ್ಮನ್ನ ಮಾತನಾಡಿ, "ಆರಾಧನಾ ಶಾಲೆಯ ಶಿಕ್ಷಕರು ಪ್ರತಿಯೊಂದು ಮಗುವನ್ನು ತಮ್ಮ ಸ್ವಂತ ಮಗುವಿನಂತೆ ಪ್ರೀತಿಸುತ್ತಾರೆ. ಮಕ್ಕಳ ಬುದ್ಧಿಮಟ್ಟವನ್ನು ಅರಿತು, ಅದಕ್ಕೆ ಅನುಗುಣವಾಗಿ ಪಾಠ ಮಾಡುವುದು ಇಲ್ಲಿನ ವಿಶೇಷ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಈ ಶಾಲೆ ಹೆಚ್ಚಿನ ಒತ್ತು ನೀಡುತ್ತಿರುವುದು ಶ್ಲಾಘನೀಯ," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ನಮಿತಾ ಗೋಪಸೇನ್ ಅವರು ಮಾತನಾಡಿ, "2019ರಲ್ಲಿ ಕೇವಲ 17 ಮಕ್ಕಳೊಂದಿಗೆ ಆರಂಭವಾದ ನಮ್ಮ ಸಂಸ್ಥೆಯಲ್ಲಿ ಇಂದು ನೂರಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಈ ಯಶಸ್ಸಿಗೆ ಪೋಷಕರ ನಿರಂತರ ಬೆಂಬಲ ಮತ್ತು ಪ್ರೋತ್ಸಾಹವೇ ಕಾರಣ," ಎಂದು ನೆನಪಿಸಿಕೊಂಡರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಶಾಲೆಯ ಅಭಿವೃದ್ಧಿಗೆ ಮತ್ತು ಮಕ್ಕಳ ಕಲಿಕೆಗೆ ಬೆಂಬಲ ನೀಡುತ್ತಿರುವ 100 ಜನ ಪೋಷಕರನ್ನು ಶಾಲೆಯ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ಪ್ರತಿಯೊಬ್ಬ ಪೋಷಕರಿಗೆ ಗೌರವದ ಸಂಕೇತವಾಗಿ ಒಂದು 'ದಾಸವಾಳ ಗಿಡ'ವನ್ನು ನೀಡಿ, ಮನೆಯಲ್ಲಿ ಪರಿಸರವನ್ನು ಬೆಳೆಸುವಂತೆ ಪ್ರೇರೇಪಿಸಲಾಯಿತು. ಇದು ಪೋಷಕರು ಮತ್ತು ಶಾಲೆಯ ನಡುವಿನ ಬಾಂಧವ್ಯವನ್ನು ಎತ್ತಿ ತೋರಿಸಿತು.

ಇದೇ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಮರಿಯಪ್ಪ ಬೊಮ್ಮನಹಳ್ಳಿಕರ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.

ಕಾರ್ಯಕ್ರಮದಲ್ಲಿ ರಕ್ಷಿತಾ ಸಿಂಪಿ ಸ್ವಾಗತಿಸಿದರು, ರಕ್ಷಿತಾ ಹುಳಗೋಳಕ  ಕಾರ್ಯಕ್ರಮ ನಿರೂಪಿಸಿದರು ಮತ್ತು ನಸರ ವಂದನಾರ್ಪಣೆ ಮಾಡಿದರು. ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರ ಕಣ್ಮನ ಸೆಳೆದವು.

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಟೀಕೆ: ಮಣಿಕಂಠ ರಾಠೋಡ್ ನಡೆಗೆ ಜಗದೀಶ ಚವ್ಹಾಣ ತೀವ್ರ ಆಕ್ರೋಶ

ಚಿತ್ತಾಪುರ: ಸಮಾಜ ಸೇವೆಯ ಹೆಸರಿನಲ್ಲಿ ಮೋಜು-ಮಸ್ತಿ ಮಾಡುತ್ತಾ, ಸಮುದಾಯಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿರುವ ಮಣಿಕಂಠ ರಾಠೋಡ್ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಯುವ ಮುಖಂಡ ಜಗದೀಶ ಚವ್ಹಾಣ ಕಿಡಿಕಾರಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಣಿಕಂಠ ರಾಠೋಡ್ ಅವರ ನಡೆಯನ್ನು ಕಟುವಾಗಿ ಟೀಕಿಸಿ ಮಾತನಾಡಿದ ಅವರು  ಚುನಾವಣೆಯ ಮುಂಚೆ ಚಿತ್ತಾಪುರದಲ್ಲಿ ಅನೇಕ ಮಂದಿರಗಳನ್ನು ಕಟ್ಟಿಸಿಕೊಡುತ್ತೇನೆ ಎಂದು ನಂಬಿಸಿದ ಮಣಿಕಂಠ, ಇದ್ದ ಮಂದಿರಗಳನ್ನೇ ಬೀಳಿಸಿ ಇಂದಿಗೂ ಅವು ಹಾಳಾಗಿ ಬಿದ್ದಿರುವಂತೆ ಮಾಡಿದ್ದಾರೆ. ಇವರ ಮಾತನ್ನು ನಂಬಿ ದೇವಸ್ಥಾನದ ಪೂಜಾರಿಗಳು ಹಾಗೂ ಭಕ್ತರು ಇಂದು ಮೋಸ ಹೋಗಿದ್ದಾರೆ.

ಕನಿಷ್ಠ ಒಬ್ಬ ಗ್ರಾಮ ಪಂಚಾಯತಿ ಸದಸ್ಯನನ್ನು ಸೋಲಿಸುವ ಯೋಗ್ಯತೆ ಇಲ್ಲದ ಇವರು ಪ್ರಧಾನಿಯಾಗುವ ಮಾತುಗಳನ್ನಾಡುತ್ತಿದ್ದಾರೆ. ಸಂವಿಧಾನದ ಅರಿವಾಗಲಿ ಅಥವಾ ಮೀಸಲಾತಿಯ ಬಗ್ಗೆ ಗೌರವವಾಗಲಿ ಇವರಿಗಿಲ್ಲ. ಯಾವ ಮೀಸಲಾತಿಯಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದರೋ, ಅದೇ ಮೀಸಲಾತಿಯನ್ನು ರದ್ದುಪಡಿಸುತ್ತೇನೆ ಎಂದು ಹೇಳುವುದು ಇವರ ಅಜ್ಞಾನಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಇವರ ನಡವಳಿಕೆಯಿಂದಾಗಿ ಇವರನ್ನು 'ತಡಿಪಾರ್' ಮಾಡಲಾಗಿತ್ತು. ಇಂತಹ ವ್ಯಕ್ತಿ ಇಂದು ಪ್ರಬುದ್ಧ ರಾಜಕಾರಣಿ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ.

ಸಚಿವ ಪ್ರಿಯಾಂಕ್ ಖರ್ಗೆ ಅವರು ಜ್ಞಾನ ಭಂಡಾರವುಳ್ಳ, ಸಂವಿಧಾನವನ್ನು ಅರಿತ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕರು. ರಾಜ್ಯದ ಮೂರು ಪ್ರಮುಖ ಖಾತೆಗಳನ್ನು ನಿಭಾಯಿಸುತ್ತಿರುವ ಅವರ ಜೊತೆ ಚಿತ್ತಾಪುರ ಮತ್ತು ಕಲಬುರಗಿಯ ಸಮಸ್ತ ಪ್ರಜ್ಞಾವಂತ ಮತದಾರರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸದಾ ಇರುತ್ತಾರೆ ಎಂದು ಜಗದೀಶ ಚವ್ಹಾಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಣಿಜ್ಯ ಸಿಲಿಂಡರ್, ಔಷಧ ಬೆಲೆ ಏರಿಕೆ: ಎಸ್‌ಯುಸಿಐ (ಸಿ) ತೀವ್ರ ವಿರೋಧ

ವಾಡಿ: ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆಯ ಅಡುಗೆ ಅನಿಲ ಹಾಗೂ ಜೀವ ರಕ್ಷಕ ಔಷಧಿಗಳ ಬೆಲೆಯನ್ನು ಸತತವಾಗಿ ಏರಿಕೆ ಮಾಡುತ್ತಿರುವುದನ್ನು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ವಾಡಿ ಸಮಿತಿ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಸ್ಥಳೀಯ ಕಾರ್ಯದರ್ಶಿ ಶರಣು ಹೇರೂರ್, ಕೇಂದ್ರದ ಬಿಜೆಪಿ ಸರ್ಕಾರವು ಸಾಮಾನ್ಯ ಜನರನ್ನು ಬೆಲೆ ಏರಿಕೆಯ ಸುಳಿಯಿಂದ ರಕ್ಷಿಸುವ ಬದಲು ಕಾರ್ಪೊರೇಟ್ ಹಿತಾಸಕ್ತಿಗೆ ಪೂರಕವಾಗಿ ನಡೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರಗಳಿಂದ ಜನ ಸಾಮಾನ್ಯರ ಮೇಲೆ ಬಿದ್ದಿರುವ ಹೊರೆಗಳಾದ ಕೇವಲ 25 ದಿನಗಳ ಅಂತರದಲ್ಲಿ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 218 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಏಪ್ರಿಲ್ 1 ರಿಂದ ಇದರ ಮಾರುಕಟ್ಟೆ ಬೆಲೆ 2208 ರೂಪಾಯಿ ಆಗಿದೆ.

ಕಳೆದ ತಿಂಗಳಷ್ಟೇ ಗೃಹಬಳಕೆಯ ಎಲ್‌ಪಿಜಿ ಬೆಲೆಯನ್ನು 60 ರೂ. ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 114.50 ರೂ. ಹೆಚ್ಚಿಸಲಾಗಿತ್ತು. ಸುಮಾರು 700 ರಿಂದ 900 ಅಗತ್ಯ ಔಷಧಿಗಳ ಬೆಲೆಯನ್ನು ಏರಿಕೆ ಮಾಡಿರುವುದು ರೋಗಿಗಳು ಮತ್ತು ಬಡ ಕುಟುಂಬಗಳಿಗೆ ಮರಣ ಶಾಸನವಾದಂತಿದೆ.

"ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಈಗಾಗಲೇ ತತ್ತರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಡುಗೆ ಅನಿಲ ಮತ್ತು ಔಷಧಗಳ ಬೆಲೆ ಏರಿಸಿರುವುದು ಬಿಜೆಪಿ ಸರ್ಕಾರದ ಜನವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ."

— ಶರಣು ಹೇರೂರ್, ಸ್ಥಳೀಯ ಕಾರ್ಯದರ್ಶಿ, SUCI(C)

ಈ ಕೂಡಲೇ ಏರಿಸಲಾದ ಬೆಲೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿರುವ ಅವರು, ಸರ್ಕಾರದ ಈ ಜನವಿರೋಧಿ ಧೋರಣೆಯ ವಿರುದ್ಧ ಸಾರ್ವಜನಿಕರು ಸಂಘಟಿತರಾಗಿ ಧ್ವನಿ ಎತ್ತಬೇಕು ಮತ್ತು ಪ್ರತಿಭಟನೆಯ ಹಾದಿ ಹಿಡಿಯಬೇಕು ಎಂದು ಕರೆ ನೀಡಿದ್ದಾರೆ.

ಪ್ರಿಯಾಂಕ್ ಖರ್ಗೆ ಸೋಲಿಸುವುದೇ ನನ್ನ ಅಜೆಂಡಾ: ಮಣಿಕಂಠ.

ಚಿತ್ತಾಪುರ: ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ನನಗೆ ಟಿಕೆಟ್ ನೀಡುವ ಸಂಪೂರ್ಣ ಭರವಸೆ ಇದೆ. ಒಂದು ವೇಳೆ ಪಕ್ಷ ಬೇರೆಯವರಿಗೆ ಟಿಕೆಟ್ ನೀಡಿದರೂ ಸಹ, ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಆದರೆ, ಈ ಬಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸುವುದೇ ನನ್ನ ಏಕೈಕ ಗುರಿಯಾಗಿದೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಘೋಷಿಸಿದರು.

ಪಟ್ಟಣದ ಲಾಡ್ಡಿಂಗ್ ಕ್ರಾಸ್ ಬಳಿ ರಾತ್ರಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ತಮ್ಮ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಮಾತನಾಡಿದ ಅವರು ಕಳೆದ ಚುನಾವಣೆಯಲ್ಲಿ 26 ವರ್ಷದ ಸಣ್ಣ ವಯಸ್ಸಿನಲ್ಲೇ ಬಿಜೆಪಿ ನನಗೆ ಟಿಕೆಟ್ ನೀಡಿ ಆಶೀರ್ವದಿಸಿತ್ತು. ಚಿತ್ತಾಪುರ ಇತಿಹಾಸದಲ್ಲೇ ಬಿಜೆಪಿಗೆ ಅತಿ ಹೆಚ್ಚು ಅಂದರೆ 67,683 ಮತಗಳು ಲಭಿಸಿವೆ. ನಮ್ಮ ಕುಟುಂಬದಲ್ಲಿ ಯಾರೊಬ್ಬರೂ ಗ್ರಾಪಂ ಸದಸ್ಯರೂ ಆಗಿಲ್ಲದ ಕಾರಣ, ರಾಜಕೀಯ ಅನುಭವದ ಕೊರತೆ ಹಾಗೂ ಪ್ರಿಯಾಂಕ್ ಖರ್ಗೆ ಅವರ ಷಡ್ಯಂತ್ರದಿಂದಾಗಿ ಅಲ್ಪ ಮತಗಳ ಅಂತರದಿಂದ ಸೋಲಬೇಕಾಯಿತು. ಗಡ್ಡ ಬಿಟ್ಟುಕೊಂಡು ಕುಟುಂಬದ ಹೆಸರಿನಲ್ಲಿ ಅವರು ರಾಜಕೀಯ ನಾಟಕವಾಡಿದರು ಎಂದು ಟೀಕಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರ ಹಗರಣಗಳನ್ನು ಬಯಲಿಗೆ ತರುವುದು ಹಾಗೂ ಕ್ಷೇತ್ರದಲ್ಲಿ ಅವರ ಬೆಂಬಲಿಗರ ದಾದಾಗಿರಿ ಮತ್ತು ಗುಂಡಾಗಿರಿಯನ್ನು ಮಟ್ಟಹಾಕುವುದೇ ನನ್ನ ಪ್ರಮುಖ ಉದ್ದೇಶವಾಗಿದೆ. ಸುಳ್ಳು ಕೇಸುಗಳನ್ನು ಹಾಕಿ ನನ್ನನ್ನು 2024ರ ಡಿಸೆಂಬರ್‌ನಲ್ಲಿ ಗಡಿಪಾರು ಮಾಡಿಸಲಾಯಿತು. ಇದರಿಂದ ಕ್ಷೇತ್ರಕ್ಕೆ ಬರಲು ಅಡ್ಡಿಯಾಯಿತು. ಆದರೆ ಚಿತ್ತಾಪುರದ ಜನತೆ ನೀಡಿದ ಶಕ್ತಿಯಿಂದ ನಾನು ಮತ್ತೆ ಎದ್ದು ನಿಂತಿದ್ದೇನೆ.ಎಂದರು.

"ಇತ್ತೀಚೆಗೆ ತಂದೆ-ಮಗ (ಖರ್ಗೆ ಕುಟುಂಬ) ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡಿದರೂ ಹಣ ಕೊಟ್ಟು ಜನರನ್ನು ಕರೆಯಿಸುವ ಪರಿಸ್ಥಿತಿ ಬಂದಿದೆ. ಆದರೆ ನಾನು ಹೋದ ಕಡೆಯಲ್ಲೆಲ್ಲ ಜನ ಸ್ವಯಂಪ್ರೇರಿತರಾಗಿ ಡೊಳ್ಳು, ಬಾಜಾ-ಭಜಂತ್ರಿಯೊಂದಿಗೆ ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದಾರೆ. ಕ್ಷೇತ್ರದ ಜನರು ನನ್ನನ್ನು ಮಗನಂತೆ ಕಾಣುತ್ತಿದ್ದಾರೆ," ಎಂದು ಭಾವುಕರಾದರು.

ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಬೇರೆ ಆಕಾಂಕ್ಷಿಗಳು ಬಂದರೆ ಪಕ್ಷ ಬಲಿಷ್ಠವಾಗುತ್ತದೆ ಹೊರತು ಅದಕ್ಕೆ ಯಾರೂ ಗೊಂದಲಕ್ಕೀಡಾಗುವ ಅಗತ್ಯವಿಲ್ಲ ಎಂದು ಅವರು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅಶ್ವಥ್ ರಾಠೋಡ, ಶ್ರೀಕಾಂತ್ ಸುಲೇಗಾಂವ, ಜಿ.ಎಸ್.ಹಿರೇಮಠ, ಶಂಭುಲಿಂಗ ವಿಶ್ವಕರ್ಮ, ಸುನೀಲ್ ಚವ್ಹಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಭಾನುವಾರ, ಏಪ್ರಿಲ್ 5, 2026

ಸಮಾಜಮುಖಿ ಕಾರ್ಯಗಳಿಂದ ಜನ್ಮದಿನಕ್ಕೆ ಸಾರ್ಥಕತೆ: ಕಂಬಳೇಶ್ವರ ಶ್ರೀ.

ಚಿತ್ತಾಪುರ: ಜನ್ಮದಿನೋತ್ಸವವು ಕೇವಲ ಆಚರಣೆಯಾಗದೆ, ಬಡವರು, ದೀನದಲಿತರಿಗೆ ಹಾಗೂ ಸಮಾಜಕ್ಕೆ ಅನುಕೂಲವಾದಾಗ ಮಾತ್ರ ಅದಕ್ಕೊಂದು ಅರ್ಥ ಬರಲಿದೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ತಿಳಿಸಿದರು.

ಪಟ್ಟಣದ ಕಂಬಳೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ತಮ್ಮ 59ನೇ ಜನ್ಮ ದಿನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಜನ್ಮದಿನದ ಅಂಗವಾಗಿ ಭಕ್ತರು ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ಸಂಪತ್ತನ್ನು ಸತ್ಕಾರ್ಯಕ್ಕೆ ಬಳಸಿದಾಗ ಮಾತ್ರ ನಿಜವಾದ ತುಲಾಭಾರಕ್ಕೆ ಬೆಲೆ ಬರುತ್ತದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಹಾನಗಲ್ಲ ಕುಮಾರೇಶ್ವರರ ವಾಣಿಯಂತೆ, ಭಕ್ತರ ದೇಣಿಗೆ ಹಾಗೂ ಸರ್ಕಾರದ ಅನುದಾನದ ಸದ್ಬಳಕೆ ಮಾಡಿಕೊಂಡು ಶಿಥಿಲವಾಗಿದ್ದ ಮಠವನ್ನು ಇಂದು ಮಾದರಿಯಾಗಿ ಕಟ್ಟಲಾಗಿದೆ ಎಂದು ಸ್ಮರಿಸಿದರು.
ದಿಗಾಂವದ ಶ್ರೀ ಸಿದ್ದವೀರ ಶಿವಾಚಾರ್ಯರು ಮಾತನಾಡಿ, ಸೋಮಶೇಖರ ಶ್ರೀಗಳು ಕಲ್ಯಾಣ ಕರ್ನಾಟಕದ ಅತ್ಯುತ್ತಮ ವಾಗ್ಮಿಗಳು ಎಂದು ಬಣ್ಣಿಸಿದರು. ಸೇಡಂನ ಶ್ರೀ ಶಿವಶಂಕರ ಶಿವಾಚಾರ್ಯರು ಸೇರಿದಂತೆ ಹಲವು ಮಠಾಧೀಶರು ಶ್ರೀಗಳ ಜನಪರ ಕಾರ್ಯಗಳನ್ನು ಕೊಂಡಾಡಿದರು.

ಇದೇ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದ ಮಾಲಗತ್ತಿಯ ಶ್ರೀ ಚನ್ನಬಸವ ಶರಣರು ಹಾಗೂ ಶಿವಶರಣಯ್ಯ ಪುರದಯ್ಯನಮಠ ಅವರನ್ನು ಸನ್ಮಾನಿಸಲಾಯಿತು.

 ಕಾರ್ಯಕ್ರಮದಲ್ಲಿ ನದಿಶಿನ್ನೂರು ಶ್ರೀ ಗುರುರಾಜೇಂದ್ರ ಮಹಾಶಿವಯೋಗಿಗಳು, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ನಾಗರೆಡ್ಡಿ ಗೋಪಸೇನ್, ನಾಗರಾಜ ರೇಷ್ಮೆ ಸೇರಿದಂತೆ ನೂರಾರು ಭಕ್ತರು ಹಾಗೂ ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು. ಜಗದೇವ ದಿಗ್ಗಾಂವಕರ್ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಅಧ್ಯಕ್ಷರಾಗಿ ಉದ್ಯಮಿ ಬಸವರಾಜ ಪಾಟೀಲ ಬೆಳಗುಂಪಾ ಆಯ್ಕೆ.

ಚಿತ್ತಾಪುರ: ಪಟ್ಟಣದ ಶರಣಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ನಡೆದ ಬಸವ ಜಯಂತಿ ಪೂರ್ವಭಾವಿ ಸಭೆಯಲ್ಲಿ, ಉದ್ಯಮಿ ಬಸವರಾಜ ಪಾಟೀಲ ಬೆಳಗುಂಪಾ ಅವರನ್ನು ಬಸವ ಜಯಂತಿ ಸಮಿತಿಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷರಾದ ನಾಗರಾಜ ಭಂಕಲಗಿ ಅವರು ಈ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಪಾಟೀಲ ಅವರನ್ನು ಸಮಾಜದ ವತಿಯಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಜಯಂತಿಯ ಅಂಗವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದ ನಾಗರಾಜ ಭಂಕಲಗಿ ಅವರು, "ಏಪ್ರಿಲ್ 20 ರಂದು ಬೆಳಿಗ್ಗೆ 10 ಗಂಟೆಗೆ ತಹಸೀಲ್ ಕಚೇರಿಯಿಂದ ಬಸವೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ಆರಂಭವಾಗಲಿದೆ," ಎಂದು ತಿಳಿಸಿದರು.

ಮೆರವಣಿಗೆ ಮಾರ್ಗ: ತಹಸೀಲ್ ಕಚೇರಿ, ಸ್ಟೇಷನ್ ರಸ್ತೆ,ನಾಗಾವಿ ವೃತ್ತ,ಜನತಾ ವೃತ್ತ, ಚಿತ್ತಾವಲಿ ವೃತ್ತ, ಮತ್ತು ಹೋಳಿಕಟ್ಟಿ ಬಡಾವಣೆಯ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ. ನಂತರ ಪಾಲಪ್ ಗಲ್ಲಿ, ಕೇಳಗೇರಿ ರಸ್ತೆ, ಭುವನೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆಯ ಮೂಲಕ ಬಸವೇಶ್ವರ ವೃತ್ತಕ್ಕೆ ತಲುಪಿ, ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಯು ಸಂಪನ್ನಗೊಳ್ಳಲಿದೆ.

ಬಸವ ಜಯಂತಿಯನ್ನು ಅತ್ಯಂತ ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು, ಸಮಾಜದ ಮುಖಂಡರು, ಬಸವ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಗಿದೆ.

ಈ ಪೂರ್ವಭಾವಿ ಸಭೆಯಲ್ಲಿ ಮಹಾಸಭಾದ ಗೌರವಾಧ್ಯಕ್ಷ ಲಿಂಗಾರೆಡ್ಡಿ ಬಾಸಾರೆಡ್ಡಿ ನಾಲವಾರ, ನಗರಾಧ್ಯಕ್ಷ ಚಂದ್ರಶೇಖರ ಉಟಗೂರ್, ಯುವ ಅಧ್ಯಕ್ಷ ಅನಿಲ್‌ ವಡ್ಡಡಗಿ, ಸಮಾಜದ ಹಿರಿಯ ಮುಖಂಡರಾದ ನಾಗರೆಡ್ಡಿ ಪಾಟೀಲ ಕರದಾಳ, ಸೋಮಶೇಖ‌ರ್ ಪಾಟೀಲ ಬೆಳಗಂಪಾ, ಚಂದ್ರಶೇಖ‌ರ್ ಟೆಂಗಳಿ, ಡಾ. ಪ್ರಭುರಾಜ ಕಾಂತಾ, ಅಣ್ಣಾರಾವ್ ಪಾಟೀಲ, ವೀರಣ್ಣಗೌಡ ಪರಸರೆಡ್ಡಿ, ಮಲ್ಲರೆಡ್ಡಿ ಗೋಪಸೇನ್, ಓಂಕಾರ ರೇಷ್ಮೆ, ರವೀಂದ್ರ ಸಜ್ಜನಶೆಟ್ಟಿ, ಶಾಂತಪ್ಪ ಚಾಳಿಕಾರ, ಆನಂದ್ ಪಾಟೀಲ ನರಿಬೋಳ ಸೇರಿದಂತೆ ಹಲವು ಮುಖಂಡರು ಹಾಗೂ ಯುವಕರು ಭಾಗವಹಿಸಿದ್ದರು.ಕಾರ್ಯಕ್ರಮವನ್ನು ಸಂತೋಷ ಹಾವೇರಿ ಅವರು ನಿರೂಪಿಸಿದರು.

ರಾಜೋಳ್ಳಾದಲ್ಲಿ ಏ. 7 ರಿಂದ ಹಜರತ್ ರಾಜಾಭಾಗಸವಾರರ ಜಾತ್ರಾ ಮಹೋತ್ಸವ.

ಚಿತ್ತಾಪುರ: ತಾಲೂಕಿನ ರಾಜೋಳ್ಳಾ ಗ್ರಾಮದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಸಹ ಹಜರತ್ ರಾಜಾಭಾಗಸವಾರ ರಹೇಮತ್ ಉಲ್ ಅಲೈ ರವರ ಜಾತ್ರಾ ಮಹೋತ್ಸವವು ಏಪ್ರಿಲ್ 7 ರಿಂದ ಮೂರು ದಿನಗಳ ಕಾಲ ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ ಎಂದು ದರ್ಗಾದ ಪೂಜ್ಯ ಶ್ರೀ ಅಬ್ದುಲ್ ರಜಾಕ್ ಸಾಹೇಬ ಖಾದ್ರಿ ತಿಳಿಸಿದ್ದಾರೆ.

ಏಪ್ರಿಲ್ 7 (ಸಂಜೆ) ಗಂಧ (ಸಂದಲ್) ಮೆರವಣಿಗೆ. ರಾತ್ರಿ 8.45 ಕ್ಕೆ ಶೇಖ್ ಇಮಾಮ್ ಸಾಬ್ ಮಹೇಬುಬ್ ಅಲಿ ಶೇಖಸಿಂದಿ ಅವರ ಮನೆಯಿಂದ ಗಂಧವು ಸಕಲ ವಾದ್ಯಗೋಷ್ಠಿಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮರುದಿನ ಬೆಳಿಗ್ಗೆ 4 ಗಂಟೆಗೆ ದರ್ಗಾ ತಲುಪಲಿದೆ.
ಏಪ್ರಿಲ್ 8 ದೀಪೋತ್ಸವ (ಚಿರಾಗ್) ಹಾಗೂ ರಾತ್ರಿ 8.45 ರಿಂದ ಖ್ಯಾತ ಕಲಾವಿದರಿಂದ ಖವ್ವಾಲಿ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ 9 ಜೀಯಾರತ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

ಪೂಜ್ಯ ಶ್ರೀ ಅಬ್ದುಲ್ ರಜಾಕ್ ಸಾಹೇಬ್ ಬಖಾದ್ರಿ (ಸಜ್ಜಾದ ಸಶಿನ) ಅವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಅವರ ಅಮೃತ ಹಸ್ತದಿಂದ ಈ ಎಲ್ಲ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

"ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತನು-ಮನ-ಧನದಿಂದ ಸೇವೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗಬೇಕು" ಎಂದು ಶೇಖ್ ಅಬ್ದುಲ್ ರಜಾಕ್ ಸಾಹೇಬ ಖಾದ್ರಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.

ಮೋದಿ-ಷಾ ಅಬ್ಬರಕ್ಕೆ ಬಂಗಾಳದ ಸರ್ವಾಧಿಕಾರಿ ಸರ್ಕಾರ ಧೂಳಿಪಟ; ಮಣಿಕಂಠ ರಾಠೋಡ.

ಚಿತ್ತಾಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರ ದಕ್ಷ ನಾಯಕತ್ವದ ಅಬ್ಬರಕ್ಕೆ ಪಶ್ಚಿಮ ಬಂಗಾಳದಲ್ಲಿ ಸರ್ವಾಧಿಕಾರಿಯಂತೆ ಮೆರೆಯುತ್ತಿದ...