ಚಿತ್ತಾಪುರ: ಬೀದರ್ ಜಿಲ್ಲೆಯ ಬಸವಕಲ್ಯಾಣದ ತ್ರಿಪುರಾಂತಕ ಕೆರೆ ಬಳಿಯಿರುವ ಹನ್ನೆರಡನೇ ಶತಮಾನದ ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಅಕ್ರಮವಾಗಿ ಬೇರೆ ಮೂರ್ತಿ ಪ್ರತಿಷ್ಠಾಪಿಸಿರುವುದನ್ನು ಖಂಡಿಸಿ, ಅಲ್ಲಿ ಪುನಃ ಅಪ್ಪಣ್ಣನವರ ಮೂರ್ತಿಯನ್ನೇ ಪ್ರತಿಷ್ಠಾಪಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ತಹಸೀಲ್ದಾರ್ ನಾಗಯ್ಯ ಹಿರೇಮಠ್ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ರವಾನಿಸಿದ ಸಂಘಟನೆಯು, ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರ ಐತಿಹಾಸಿಕ ಅರಿವಿನ ಗವಿಗೆ ಧಕ್ಕೆಯಾಗಿರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ಬಸವಕಲ್ಯಾಣದ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಸಮೀಪ ಅನೇಕ ಬಸವಾದಿ ಶರಣರ ಅರಿವಿನ ಗವಿಗಳಿವೆ. ಇವುಗಳಲ್ಲಿ ಹಡಪದ ಅಪ್ಪಣ್ಣನವರ ಗವಿಯೂ ಒಂದು. ಆದರೆ, ಬಸವೇಶ್ವರ ದೇವಸ್ಥಾನದ ಪಂಚ ಕಮಿಟಿಯವರು ಈ ಗವಿಯನ್ನು ಅಕ್ರಮವಾಗಿ ಹಸ್ತಕ್ಷೇಪ ಮಾಡಿ, ಅಲ್ಲಿ ಅನ್ಯ ಶರಣರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ಸಮಾಜದ ಮುಖಂಡರು ಆರೋಪಿಸಿದ್ದಾರೆ. ಇದರಿಂದ ಹಡಪದ ಅಪ್ಪಣ್ಣನವರ ಇತಿಹಾಸದ ಮೌಲ್ಯಕ್ಕೆ ಧಕ್ಕೆಯಾಗಿದ್ದು, ಸಮುದಾಯದ ಭಕ್ತರ ಭಾವನೆಗಳಿಗೆ ತೀವ್ರ ಅನ್ಯಾಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಕ್ರಮವಾಗಿ ಮೂರ್ತಿ ಬದಲಿಸಿದ ಪಂಚ ಕಮಿಟಿ ಮತ್ತು ಅದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಗವಿಯನ್ನು ಮೊದಲಿನ ಸ್ಥಿತಿಗೆ ತಂದು, ಅಲ್ಲಿ ಹಡಪದ ಅಪ್ಪಣ್ಣನವರ ಮೂರ್ತಿಯನ್ನೇ ಮರು ಪ್ರತಿಷ್ಠಾಪಿಸಬೇಕು. ಸದರಿ ಅರಿವಿನ ಗವಿಯನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಪ್ಪಿಸಿ, ಸರ್ಕಾರವೇ ಅದರ ಸಮರ್ಪಕ ಅಭಿವೃದ್ಧಿಗೆ ಕ್ರಮ ವಹಿಸಬೇಕು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾಧ್ಯಕ್ಷ ರಮೇಶ್ ಕೂಲ್ಲೂರ, "ನಮ್ಮ ಶರಣರ ಇತಿಹಾಸ ಮತ್ತು ಅರಿವಿನ ಗವಿಯನ್ನು ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಈಗಾಗಲೇ ಅನೇಕ ಮಠಾಧೀಶರು ಹಾಗೂ ಸಮಾಜದ ನಾಯಕರು ಹೋರಾಟ ನಡೆಸಿದ್ದರೂ ಇನ್ನೂ ನ್ಯಾಯ ಸಿಕ್ಕಿಲ್ಲ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ನಮಗೆ ನ್ಯಾಯ ಒದಗಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು," ಎಂದು ಎಚ್ಚರಿಸಿದರು.
ಮನವಿ ಸಲ್ಲಿಕೆಯ ಸಂದರ್ಭದಲ್ಲಿ ಉಪಾಧ್ಯಕ್ಷ ಶೇಷಣ್ಣ ದಂಡಗುಂಡ, ನಗರ ಅಧ್ಯಕ್ಷ ಮುರಳಿಕುಮಾರ ಸಾತನೂರ, ಸಿದ್ದು ಗುಂಡಗುರ್ತಿ, ಚೇತನ್ ಚಿತ್ತಾಪುರ, ಭೀಮಾಶಂಕರ,ಹಣಮಂತರಾಯ ಮುಗಟಾ, ಸಮಾಜದ ಮುಖಂಡರು, ಭಕ್ತರು ಹಾಗೂ ಹಡಪದ ಅಪ್ಪಣ್ಣ ಸಮಾಜದ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ