ಮಂಗಳವಾರ, ಏಪ್ರಿಲ್ 7, 2026

ವಾಣಿಜ್ಯ ಸಿಲಿಂಡರ್, ಔಷಧ ಬೆಲೆ ಏರಿಕೆ: ಎಸ್‌ಯುಸಿಐ (ಸಿ) ತೀವ್ರ ವಿರೋಧ

ವಾಡಿ: ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆಯ ಅಡುಗೆ ಅನಿಲ ಹಾಗೂ ಜೀವ ರಕ್ಷಕ ಔಷಧಿಗಳ ಬೆಲೆಯನ್ನು ಸತತವಾಗಿ ಏರಿಕೆ ಮಾಡುತ್ತಿರುವುದನ್ನು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ವಾಡಿ ಸಮಿತಿ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಸ್ಥಳೀಯ ಕಾರ್ಯದರ್ಶಿ ಶರಣು ಹೇರೂರ್, ಕೇಂದ್ರದ ಬಿಜೆಪಿ ಸರ್ಕಾರವು ಸಾಮಾನ್ಯ ಜನರನ್ನು ಬೆಲೆ ಏರಿಕೆಯ ಸುಳಿಯಿಂದ ರಕ್ಷಿಸುವ ಬದಲು ಕಾರ್ಪೊರೇಟ್ ಹಿತಾಸಕ್ತಿಗೆ ಪೂರಕವಾಗಿ ನಡೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರಗಳಿಂದ ಜನ ಸಾಮಾನ್ಯರ ಮೇಲೆ ಬಿದ್ದಿರುವ ಹೊರೆಗಳಾದ ಕೇವಲ 25 ದಿನಗಳ ಅಂತರದಲ್ಲಿ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 218 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಏಪ್ರಿಲ್ 1 ರಿಂದ ಇದರ ಮಾರುಕಟ್ಟೆ ಬೆಲೆ 2208 ರೂಪಾಯಿ ಆಗಿದೆ.

ಕಳೆದ ತಿಂಗಳಷ್ಟೇ ಗೃಹಬಳಕೆಯ ಎಲ್‌ಪಿಜಿ ಬೆಲೆಯನ್ನು 60 ರೂ. ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 114.50 ರೂ. ಹೆಚ್ಚಿಸಲಾಗಿತ್ತು. ಸುಮಾರು 700 ರಿಂದ 900 ಅಗತ್ಯ ಔಷಧಿಗಳ ಬೆಲೆಯನ್ನು ಏರಿಕೆ ಮಾಡಿರುವುದು ರೋಗಿಗಳು ಮತ್ತು ಬಡ ಕುಟುಂಬಗಳಿಗೆ ಮರಣ ಶಾಸನವಾದಂತಿದೆ.

"ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಈಗಾಗಲೇ ತತ್ತರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಡುಗೆ ಅನಿಲ ಮತ್ತು ಔಷಧಗಳ ಬೆಲೆ ಏರಿಸಿರುವುದು ಬಿಜೆಪಿ ಸರ್ಕಾರದ ಜನವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ."

— ಶರಣು ಹೇರೂರ್, ಸ್ಥಳೀಯ ಕಾರ್ಯದರ್ಶಿ, SUCI(C)

ಈ ಕೂಡಲೇ ಏರಿಸಲಾದ ಬೆಲೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿರುವ ಅವರು, ಸರ್ಕಾರದ ಈ ಜನವಿರೋಧಿ ಧೋರಣೆಯ ವಿರುದ್ಧ ಸಾರ್ವಜನಿಕರು ಸಂಘಟಿತರಾಗಿ ಧ್ವನಿ ಎತ್ತಬೇಕು ಮತ್ತು ಪ್ರತಿಭಟನೆಯ ಹಾದಿ ಹಿಡಿಯಬೇಕು ಎಂದು ಕರೆ ನೀಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅರಿವಿನ ಗವಿಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹ: ಸಿಎಂಗೆ ಮನವಿ.

ಚಿತ್ತಾಪುರ: ಬೀದರ್ ಜಿಲ್ಲೆಯ ಬಸವಕಲ್ಯಾಣದ ತ್ರಿಪುರಾಂತಕ ಕೆರೆ ಬಳಿಯಿರುವ ಹನ್ನೆರಡನೇ ಶತಮಾನದ ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಅಕ್ರಮವಾಗಿ ...