ಚಿತ್ತಾಪುರ: ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು 'ವಿಷಕಾರಿ ಹಾವುಗಳು' ಎಂದು ಹೋಲಿಸಿರುವ ಹೇಳಿಕೆಯನ್ನು ಬಿಜೆಪಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಬ್ರಾಹಿಂ ದಿಗ್ಗಾಂವ್ ಬಲವಾಗಿ ಖಂಡಿಸಿದ್ದಾರೆ.
ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆಯವರ ಹೇಳಿಕೆಯು ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವಂತದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ "ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ವಿಷಕಾರಿ ಹಾವುಗಳೆಂದು ಕರೆದು ಅವುಗಳನ್ನು ಹೊಡೆದು ಕೊಲ್ಲಬೇಕು ಎನ್ನುವ ಹೇಳಿಕೆ ಹಿಂದೂ ನಂಬಿಕೆ ಮತ್ತು ಸಂಪ್ರದಾಯಗಳಿಗೆ ಮಾಡಿದ ಅವಮಾನವಾಗಿದೆ. ಇಸ್ಲಾಂ ಧರ್ಮದ ಕುರಾನ್‌ನಲ್ಲಿ ನಮಾಜ್ ಮಾಡುವಾಗ ಹಾವು ಬಂದರೆ ಸಾಯಿಸಿ ಎಂದು ಹೇಳಲಾಗಿದೆ, ಆದರೆ ರಾಜಕೀಯ ಪಕ್ಷಗಳನ್ನು ಹಾವಿಗೆ ಹೋಲಿಸಿ ಕೊಲ್ಲಲು ಪ್ರಚೋದನೆ ನೀಡುವುದು ಅಕ್ಷಮ್ಯ ಅಪರಾಧ," ಎಂದು ಹೇಳಿದರು.
"ಖರ್ಗೆಯವರ ರಾಜಕೀಯ ಅನುಭವದಷ್ಟು ನನಗೆ ವಯಸ್ಸಾಗಿಲ್ಲದಿರಬಹುದು, ಆದರೆ ನಮ್ಮ ಸಮುದಾಯಕ್ಕೆ ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದಲ್ಲಿ ವಿಷ ಬಿತ್ತುವುದು ತಪ್ಪು. ಮುಸ್ಲಿಂ ಸಮುದಾಯವನ್ನು ಇಂತಹ ಮಾತುಗಳ ಮೂಲಕ ದಾರಿ ತಪ್ಪಿಸಬಾರದು," ಎಂದು ಎಚ್ಚರಿಸಿದರು. "ಕಾಂಗ್ರೆಸ್ ಪಕ್ಷ ಕಳೆದ 70 ವರ್ಷಗಳಿಂದ ಮುಸ್ಲಿಂ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. ಇದುವರೆಗೆ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡುವ ಸೌಜನ್ಯ ತೋರಿಲ್ಲ. ಆದರೆ ಬಿಜೆಪಿ ಸರ್ಕಾರವು ಎ.ಪಿ.ಜೆ ಅಬ್ದುಲ್ ಕಲಾಂ ಅವರಂತಹ ಮಹಾನ್ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡುವ ಮೂಲಕ ಸಮುದಾಯಕ್ಕೆ ಗೌರವ ನೀಡಿದೆ," ಎಂದು ತಿಳಿಸಿದರು.
"ಆರ್‌ಎಸ್‌ಎಸ್ ಮತ್ತು ಬಿಜೆಪಿ ನಿಜವಾಗಿಯೂ ವಿಷಕಾರಿಯಾಗಿದ್ದರೆ ಅಬ್ದುಲ್ ಕಲಾಂ ಅಂತಹವರು ದೇಶದ ಅತ್ಯುನ್ನತ ಸ್ಥಾನಕ್ಕೇರಲು ಸಾಧ್ಯವಾಗುತ್ತಿರಲಿಲ್ಲ. ಖರ್ಗೆಯವರ ಹೇಳಿಕೆಗಳು ಕೇವಲ ರಾಜಕೀಯ ಪ್ರೇರಿತ ಮತ್ತು ಅಪಾಯಕಾರಿ."
— ಇಬ್ರಾಹಿಂ ದಿಗ್ಗಾಂವ್, ಅಧ್ಯಕ್ಷರು, ಬಿಜೆಪಿ ಅಲ್ಪಸಂಖ್ಯಾತ ಘಟಕ ಚಿತ್ತಾಪುರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ