ಚಿತ್ತಾಪುರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆಯಂತಹ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮಕ್ಕೆ ತಾಲೂಕು ಮಟ್ಟದ ಉನ್ನತ ಅಧಿಕಾರಿಗಳೇ ಗೈರಾಗಿರುವುದು ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಕರ್ತವ್ಯ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬುಧವಾರ ದಲಿತ ಮುಖಂಡರು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ಏಪ್ರಿಲ್ 14ರಂದು ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಅಧಿಕೃತ ಜಯಂತೋತ್ಸವ ಕಾರ್ಯಕ್ರಮಕ್ಕೆ ಹಲವು ಇಲಾಖೆಗಳ ಮುಖ್ಯಸ್ಥರು ಉದ್ದೇಶಪೂರ್ವಕವಾಗಿ ಗೈರಾಗಿದ್ದಾರೆ ಎಂದು ಮುಖಂಡರು ಆರೋಪಿಸಿದ್ದಾರೆ. ಈ ಕುರಿತು ಮಾತನಾಡಿದ ದಲಿತ ಮುಖಂಡ ಮಲ್ಲಿಕಾರ್ಜುನ ಮುಡಬೂಳಕರ್, "ಬಾಬಾ ಸಾಹೇಬರು ದೇಶಕ್ಕೆ ನೀಡಿದ ಸಂವಿಧಾನದಿಂದಲೇ ಅಧಿಕಾರ ಅನುಭವಿಸುತ್ತಿರುವ ಅಧಿಕಾರಿಗಳು, ಅವರ ಜಯಂತಿಗೇ ಗೈರಾಗಿರುವುದು ರಾಷ್ಟ್ರನಾಯಕನಿಗೆ ಮಾಡಿದ ಅಪಮಾನವಾಗಿದೆ. ಇದು ಅಂಬೇಡ್ಕರ್ ಅನುಯಾಯಿಗಳ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಆಡಳಿತದ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಹಾಜರಿರಬೇಕಿದ್ದರೂ ಗೈರಾದ ಪ್ರಮುಖ ಅಧಿಕಾರಿಗಳ ಪಟ್ಟಿಯನ್ನು ಮುಖಂಡರು ತಹಶೀಲ್ದಾರರ ಮುಂದಿಟ್ಟಿದ್ದಾರೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ರಾಜಕುಮಾರ್, ವೈದ್ಯಾಧಿಕಾರಿಗಳು ವಿಶ್ವನಾಥ್ ಕನಕ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಸಂಜೀವಕುಮಾರ್ ಮಾನಕರ್,ಇವರೊಂದಿಗೆ ಇನ್ನುಳಿದ ಕೆಲವು ಇಲಾಖೆಗಳ ಅಧಿಕಾರಿಗಳು ಸಹ ಗೈರಾಗಿದ್ದು, ಇವರೆಲ್ಲರೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
"ಸರ್ಕಾರಿ ಕಾರ್ಯಕ್ರಮ ಎಂದರೆ ಕೇವಲ ಔಪಚಾರಿಕತೆಯಲ್ಲ, ಅದು ದೇಶದ ಅಸ್ಮಿತೆ. ಇಂತಹ ಕಾರ್ಯಕ್ರಮಗಳಿಗೆ ಗೈರಾಗುವ ಮೂಲಕ ಅಧಿಕಾರಿಗಳು ತಮ್ಮ ಸಂವಿಧಾನ ವಿರೋಧಿ ಧೋರಣೆಯನ್ನು ಪ್ರದರ್ಶಿಸಿದ್ದಾರೆ. ತಕ್ಷಣ ಇವರ ವಿರುದ್ಧ ಕ್ರಮವಾಗದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು."
-ಶ್ರೀಕಾಂತ್ ಶಿಂಧೆ, ದಲಿತ ಮುಖಂಡರು
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಕಾಳಗಿ, ಮಲ್ಲಿಕಾರ್ಜುನ ಬೆಣ್ಣೂರಕರ್, ಜಗನ್ನಾಥ ಮುಡಬೂಳಕರ್, ಸೂರಜ್ ಕಲ್ಲಕ್, ಶಿವಕುಮಾರ್ ಆರಬೋಳ, ಬಸವರಾಜ ಮುಡಬೂಳಕರ್, ಸಾಬಣ್ಣ ಹಲಗಿ, ಶಿವಕುಮಾರ್ ಯಾದಗಿರಿ, ರೋಹಿತ್ ಮುದಡಗಿ ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ತಹಶೀಲ್ದಾರ್ ಅವರು ಮನವಿಯನ್ನು ಸ್ವೀಕರಿಸಿದ್ದು, ಗೈರಾದ ಅಧಿಕಾರಿಗಳ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ