ಭಾನುವಾರ, ಏಪ್ರಿಲ್ 26, 2026

ಅಂಬೇಡ್ಕರ್ ವಿಚಾರಧಾರೆ ಜಗತ್ತಿನ ಶೋಷಿತರ ಏಳಿಗೆಯ ದಾರಿದೀಪ: ಸುರೇಶ್ ಮೆಂಗನ್.

ಚಿತ್ತಾಪುರ: "ಪ್ರಬುದ್ಧ ಭಾರತ ನಿರ್ಮಾಣವಾಗಲು ಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ಹೇಗೆ ಭದ್ರ ಬುನಾದಿಯಾಗಿದೆಯೋ, ಅದೇ ರೀತಿ ಅವರ ಉದಾತ್ತ ವಿಚಾರಧಾರೆಯು ಇಡೀ ಜಗತ್ತಿನ ಶೋಷಿತ ಸಮುದಾಯಗಳ ಏಳಿಗೆಗೆ ದಾರಿದೀಪವಾಗಿದೆ," ಎಂದು ದಲಿತ ಹಿರಿಯ ಮುಖಂಡ ಸುರೇಶ್ ಮೆಂಗನ್ ಅಭಿಪ್ರಾಯಪಟ್ಟರು.

ಪಟ್ಟಣದ ಬಜಾಜ್ ಮಿನಿ ಸಭಾಂಗಣದಲ್ಲಿ ಶನಿವಾರ ದಲಿತ ಸಂಘರ್ಷ ಸಮಿತಿ (ಬಿ.ಕೃಷ್ಣಪ್ಪ ಬಣ) ಹಾಗೂ ಕರ್ನಾಟಕ ರಾಜ್ಯ ಕಾರ್ಮಿಕ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರನ್ನು ಸ್ಮರಿಸಿದ ಮೆಂಗನ್ ಅವರು, "ಭಾರತದ ಸಂವಿಧಾನ ಶಿಲ್ಪಿ ಕೇವಲ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಅಸ್ಪೃಶ್ಯತೆ ನಿವಾರಣೆ, ಸಾಮಾಜಿಕ ಸಮಾನತೆ ಮತ್ತು ಶೋಷಿತರ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ಮಾನವತಾವಾದಿ. ಅವರ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯ," ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡೆಕ್ಕನ್ ಬಿಇಡಿ ಕಾಲೇಜಿನ ಉಪನ್ಯಾಸಕ ಡಾ. ಅನೀಲಕುಮಾರ ತೆಂಗಳಿ ಮಾತನಾಡಿ, ಇಂದಿನ ಯುವ ಪೀಳಿಗೆಯ ವೈಚಾರಿಕತೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

"ಇಂದಿನವರಿಗೆ ಬರವಣಿಗೆಯ ಅಂಬೇಡ್ಕರ್ ಬೇಕಾಗಿಲ್ಲ, ಮೆರವಣಿಗೆಯ ಅಂಬೇಡ್ಕರ್ ಬೇಕಾಗಿದ್ದಾರೆ. ಪುಸ್ತಕದ ಅಂಬೇಡ್ಕರ್ ಅವರಿಗಿಂತ ಪುತ್ತಳಿಯ ಅಂಬೇಡ್ಕರ್ ಮೇಲೆ ಹೆಚ್ಚು ಮೋಹ ಬೆಳೆಯುತ್ತಿದೆ. ಆದರೆ, ಸಂವಿಧಾನದ ಅಡಿಯಲ್ಲಿ ನಮಗೆ ಸಿಕ್ಕಿರುವ ಸಮಾನತೆ ಮತ್ತು ಅವಕಾಶಗಳನ್ನು ಬಳಸಿಕೊಂಡು ಜ್ಞಾನವಂತರಾಗುವುದು ಇಂದಿನ ಅಗತ್ಯ," ಎಂದು ಕಿವಿಮಾತು ಹೇಳಿದರು.

ಇಂದಿಗೂ ಜಾತಿ ವ್ಯವಸ್ಥೆ ಮತ್ತು ಶೋಷಣೆ ಪೂರ್ಣವಾಗಿ ನಿಂತಿಲ್ಲ, ಇದನ್ನು ಎದುರಿಸಲು ಅಂಬೇಡ್ಕರ್ ಅವರ ಬೌದ್ಧಿಕ ಚಿಂತನೆಗಳೇ ನಮಗೆ ಅಸ್ತ್ರವಾಗಬೇಕು ಎಂದು ಅವರು ತಿಳಿಸಿದರು.

ಅಣದೂರದ ಭಂತೆ ದಮಾನಂದ ಮಹಾತರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಡಿಎಸ್‌ಎಸ್ ಮುಖಂಡ ಜಗದೀಶ್ ಸಾಗರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಎಎಪಿ ಕಾರ್ಯಾಧ್ಯಕ್ಷ ಸೀತಾರಾಮ ಗುಂಡಪ್ಪ ಮೆರವಣಿಗೆಗೆ ಚಾಲನೆ ನೀಡಿದರು. ಡಿಎಸ್ಎಸ್ ಸಂಘಟನಾ ಸಂಚಾಲಕ ಭರತ್ ಧನ್ನಾ ಸಂವಿಧಾನದ ಪೀಠಿಕೆ ಪಠಿಸಿದರು.

ಎಎಪಿ ಮುಖಂಡರಾದ ದರ್ಶನ ಜೈನ, ಸಂಚಿತ್ ಸಹಾನಿ, ಅರ್ಜುನ್ ಹಲಗಿಗೌಡ, ಉಷಾ ಬೆಂಗಳೂರು, ರಾಘವೇಂದ್ರ ಚಿಂಚನಸೂರ, ಅಶೋಕ ಮಲ್ಕಪಗೋಳ್, ಕೀರಣ್ ರಾಠೋಡ, ಎಂ.ಎಂ.ಜಾಗೀರದಾರ್, ನ್ಯಾಯವಾದಿ ಎಸ್.ಪಿ.ಸಾತನೂರಕರ್, ಪರಮೇಶ್ವರ ಝಳಕಿ, ಮಲ್ಲಿಕಾರ್ಜುನ ಪೂಜಾರಿ ಸೇರಿದಂತೆ ಸಂಘಟನೆಯ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.ನರಸಪ್ಪ ಚಿನ್ನಾಕಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕಲಬುರಗಿ ಜಿಲ್ಲೆಗೆ ಚಿತ್ತಾಪುರ ತಾಲೂಕು ದ್ವಿತೀಯ: ಶೇ. 87.89 ಸಾಧನೆ.

ಚಿತ್ತಾಪುರ: ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಚಿತ್ತಾಪುರ ತಾಲೂಕು ಅಭೂತಪೂರ್ವ ಸುಧಾರಣೆ ಕಂಡಿದೆ. ಕಳೆದ ಬಾರಿ ...