ಚಿತ್ತಾಪುರ: ತಾಲೂಕಿನ ಸಾತನೂರು ಗ್ರಾಮದಲ್ಲಿ ಭಾನುವಾರ ಭೀಕರ ಆಕಸ್ಮಿಕ ಅಗ್ನಿ ಅವಘಡವೊಂದು ಸಂಭವಿಸಿದ್ದು, ಗ್ರಾಮದ ನಿವಾಸಿ ಸುಮಿತ್ರಾ ಬಾಯಿ ಬಡಿಗೇರ್ ಪಂಚಾಳ (ಗಂಡ ಈರಣ್ಣ ವಿಶ್ವಕರ್ಮ) ಎಂಬುವರ ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ದುರಂತದಲ್ಲಿ ಮನೆಯಲ್ಲಿದ್ದ ದವಸ ಧಾನ್ಯಗಳು, ಬಟ್ಟೆಬರೆ ಹಾಗೂ ಮಗನ ಮದುವೆಗಾಗಿ ವರ್ಷಗಳಿಂದ ಕೂಡಿಟ್ಟಿದ್ದ ಸುಮಾರು 4 ರಿಂದ 5 ಲಕ್ಷ ರೂಪಾಯಿ ನಗದು ಹಣ ಸುಟ್ಟು ಕರಕಲಾಗಿದ್ದು, ಇಡೀ ಕುಟುಂಬ ಬೀದಿಗೆ ಬಿದ್ದಿದೆ.
ಈ ದುರಂತವು ಅತ್ಯಂತ ದಾರುಣವಾಗಿದ್ದು, ಬೆಂಕಿಗೆ ತುತ್ತಾದ ಮನೆಯಲ್ಲಿ ವಾಸವಾಗಿರುವ ಮೂವರು ಸದಸ್ಯರು ಅಂಧರಾಗಿದ್ದಾರೆ (ಕುರುಡರು). ಅಲ್ಲದೆ, ಇವರೊಬ್ಬರೇ ಮಗನಿದ್ದು, ಅವರು ಸಹ ಅಂಗವಿಕಲರಾಗಿದ್ದಾರೆ. ದುಡಿದು ಬದುಕಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ ಈ ಕುಟುಂಬ, ತಮಗಿದ್ದ ಅಲ್ಪಸ್ವಲ್ಪ ಆಸರೆಯನ್ನೂ ಕಳೆದುಕೊಂಡು ಪ್ರಸ್ತುತ ಮುಂದೇನು ಮಾಡಬೇಕೆಂದು ತೋಚದೆ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ.
ಮನೆಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಸುತ್ತಮುತ್ತಲಿನ ಮನೆಗಳಿಗೆ ಬೆಂಕಿ ವ್ಯಾಪಿಸುವುದು ತಪ್ಪಿದೆಯಾದರೂ, ಸುಮಿತ್ರಾ ಬಾಯಿ ಅವರ ಮನೆ ಮಾತ್ರ ಸಂಪೂರ್ಣವಾಗಿ ನಾಶವಾಗಿದೆ. ಘಟನಾ ಸ್ಥಳಕ್ಕೆ ಚಿತ್ತಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಸಾತನೂರು ಗ್ರಾಮದ ಮುಖಂಡರಾದ ಮಹೇಶ್ ಸಾತನೂರು ಅವರು ಮಾತನಾಡಿ, "ಈ ಕುಟುಂಬ ಮೊದಲೇ ಅತ್ಯಂತ ಕಷ್ಟದಲ್ಲಿದೆ. ಮನೆಯಲ್ಲಿರುವವರು ಅಂಧರು ಮತ್ತು ಅಂಗವಿಕಲರಾಗಿದ್ದಾರೆ. ಮಗನ ಮದುವೆ ಮಾಡಬೇಕೆಂದು ನಯಾಪೈಸೆ ಕೂಡಿಟ್ಟು ಸಾಕಿ ಸಲುಹಿದ್ದ 4-5 ಲಕ್ಷ ರೂಪಾಯಿ ಹಣ ಈಗ ಬೂದಿಯಾಗಿದೆ. ಇವರ ಕಷ್ಟಕ್ಕೆ ಯಾರೂ ಇಲ್ಲದಂತಾಗಿದೆ," ಎಂದು ಬೇಸರ ವ್ಯಕ್ತಪಡಿಸಿದರು.
ಅಗ್ನಿ ಅವಘಡದಿಂದ ಸರ್ವಸ್ವವನ್ನೂ ಕಳೆದುಕೊಂಡು ದಿಕ್ಕುತೋಚದಂತಾಗಿರುವ ಈ ಬಡ ಅಸಹಾಯಕ ಕುಟುಂಬದ ನೆರವಿಗೆ ಸ್ಥಳೀಯ ಮತಕ್ಷೇತ್ರದ ಸಚಿವರು ಹಾಗೂ ತಾಲೂಕು ದಂಡಾಧಿಕಾರಿಗಳು (ತಹಶೀಲ್ದಾರ್) ತಕ್ಷಣವೇ ಸ್ಪಂದಿಸಬೇಕು. ಸರ್ಕಾರದಿಂದ ಸೂಕ್ತ ಪರಿಹಾರ ಹಾಗೂ ಆಸರೆಯನ್ನು ಒದಗಿಸಿಕೊಡಬೇಕು ಎಂದು ಸಾತನೂರು ಗ್ರಾಮಸ್ಥರು ಅತ್ಯಂತ ಕಳಕಳಿಯಿಂದ ಮನವಿ ಮಾಡಿದ್ದಾರೆ.