ಚಿತ್ತಾಪುರ: ಕ್ಷೇತ್ರದ ಜನಪ್ರಿಯ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆ ನೀಡಬೇಕು ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಹೊಸಳ್ಳಿ ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ.
ಪಟ್ಟಣದ ಕನಕ ಭವನದಲ್ಲಿ ಮಂಗಳವಾರ ಕುರುಬ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು "ಪ್ರಿಯಾಂಕ್ ಖರ್ಗೆ ಅವರು ಸಮಾಜ ಕಲ್ಯಾಣ, ಪ್ರವಾಸೋದ್ಯಮ, ಐಟಿಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಚಿವರಾಗಿ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪಿ.ಎಸ್.ಐ ಹಗರಣ ಮತ್ತು ಬಿಟ್ ಕಾಯಿನ್ ಹಗರಣ ಸೇರಿದಂತೆ ಹಲವು ಭ್ರಷ್ಟಾಚಾರಗಳನ್ನು ಧೈರ್ಯವಾಗಿ ಬಯಲಿಗೆಳೆದ ದಿಟ್ಟ ನಾಯಕ ಇವರಾಗಿದ್ದಾರೆ. ಇವರ ಜನಪರ ಹೋರಾಟದ ಪರಿಣಾಮವಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಹೀಗಾಗಿ ಇವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲೇಬೇಕು" ಎಂದರು.
ಸಮಾಜದ ಹಿರಿಯ ಮುಖಂಡ ಜುಮ್ಮಣ್ಣ ಪೂಜಾರಿ ಮಾತನಾಡಿ, "ಪ್ರಿಯಾಂಕ್ ಖರ್ಗೆ ಅವರು ಎಲ್ಲ ಜಾತಿ ಜನಾಂಗದವರನ್ನು ಸಮಾನವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಕ್ಷೇತ್ರದಲ್ಲಿ ಸ್ಪೋರ್ಟ್ಸ್ ಹಬ್, ಎಜುಕೇಷನ್ ಹಬ್, ಮೃಗಾಲಯ ಹಾಗೂ ಗುಂಡಗುರ್ತಿ ಉದ್ಯಾನವನ ನಿರ್ಮಾಣ ಮಾಡುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ಆಸ್ಪತ್ರೆ, ಶಾಲಾ ಕೋಣೆಗಳು, ಕುಡಿಯುವ ನೀರು, ವಿದ್ಯುತ್, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದ ಪ್ರಾಮಾಣಿಕ ನಾಯಕ ಇವರಾಗಿದ್ದಾರೆ. ಇಂತಹ ಅಭಿವೃದ್ಧಿ ಪರ ಚಿಂತನೆಯುಳ್ಳ ನಾಯಕನನ್ನು ಡಿಸಿಎಂ ಮಾಡಿದರೆ ಎಲ್ಲ ಸಮಾಜದವರು ಸ್ವಾಗತಿಸುತ್ತಾರೆ" ಎಂದರು.
ಈ ಸಂದರ್ಭದಲ್ಲಿ ಕುರುಬ ಸಮಾಜದ ಪ್ರಮುಖ ಮುಖಂಡರಾದ ಯಲ್ಲಾಲಿಂಗ ಪೂಜಾರಿ ಮುಗುಟಾ, ಬಸವರಾಜ ಪೂಜಾರಿ ಮೊಗಲಾ, ಮಲ್ಲಿಕಾರ್ಜುನ ಪೂಜಾರಿ ಮೊಗಲಾ, ಸಂತೋಷ ಪೂಜಾರಿ, ಜಗನ್ನಾಥ ಆಲೂರ, ಯಲ್ಲಾಲಿಂಗ ಇವಣಿ, ನಾಗೇಶ್ ಪೂಜಾರಿ, ಶಿವಶರಣಪ್ಪ ಪೂಜಾರಿ, ದೇವಿಂದ್ರಪ್ಪ ಅಲ್ಲೂರಕರ್, ಬೀರು ಪೂಜಾರಿ, ನಾಗು ಪೂಜಾರಿ, ಸುನೀಲ ಅಮಗೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ