ಚಿತ್ತಾಪುರ: ತಾಲೂಕಿನಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆಯು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಸಮರ್ಪಕವಾಗಿ ದಾಸ್ತಾನು ಮಾಡಲಾಗಿದೆ. ತಾಲೂಕಿನಲ್ಲಿ ಯಾವುದೇ ರೀತಿಯ ಬೀಜ ಮತ್ತು ರಸಗೊಬ್ಬರದ ಕೊರತೆ ಇರುವುದಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕರಾದ ಸಂಜೀವಕುಮಾರ ಮಾನಕರ್ ಪ್ರಕಟಣೆಗೆ ತಿಳಿಸಿದ್ದಾರೆ.
ಜೂನ್ 1 ರಂದು ಚಿತ್ತಾಪುರದ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಾಯೋಗಿಕವಾಗಿ ರೈತರಿಗೆ ತೊಗರಿ, ಹೆಸರು ಮತ್ತು ಉದ್ದು ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರೈತರು ಇಲಾಖೆಯ ಸೌಲಭ್ಯಗಳನ್ನು ಪಡೆದುಕೊಂಡು, ಆಧುನಿಕ ಕೃಷಿ ಸಲಕರಣೆ ಹಾಗೂ ಉಪಕರಣಗಳನ್ನು ಬಳಸಿ ಆರ್ಥಿಕವಾಗಿ ಯಶಸ್ವಿಯಾಗಬೇಕು ಎಂದು ಕರೆ ನೀಡಿದರು.
ರೈತರಿಗೆ ಕೃಷಿ ಇಲಾಖೆಯ ಪ್ರಮುಖ ಸೂಚನೆಗಳು:
ರೈತರು ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಖರೀದಿಸುವಾಗ ಕಡ್ಡಾಯವಾಗಿ ಅಧಿಕೃತ ರಸೀದಿಯನ್ನು ಪಡೆಯಬೇಕು.ಬಿತ್ತನೆ ಮಾಡುವ ಮುನ್ನ ಕಡ್ಡಾಯವಾಗಿ ಬಿಜೋಪಚಾರ (Seed Treatment) ಮಾಡಿಯೇ ಬಿತ್ತನೆ ಮಾಡಬೇಕು.ಮುಂಗಾರು ಹಂಗಾಮಿನ ಸುರಕ್ಷತೆಗಾಗಿ ರೈತರು ಕಡ್ಡಾಯವಾಗಿ ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಮಾಡಿಸಬೇಕು
ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳ ವಿತರಣೆ ವಿವರ (ಪ್ರತಿ ಕ್ವಿಂಟಾಲ್‌ಗೆ):
ತೊಗರಿ: ಪೂರ್ಣ ದರ ₹13,200. ಸಾಮಾನ್ಯ ರೈತರಿಗೆ ₹2,500 ರಿಯಾಯಿತಿ ಇದ್ದು, ರೈತರು ಪಾವತಿಸಬೇಕಾದ ದರ ₹10,700. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ (SC/ST) ರೈತರಿಗೆ ₹3,750 ರಿಯಾಯಿತಿ ಇದ್ದು, ಪಾವತಿಸಬೇಕಾದ ದರ ₹9,450.
ಹೆಸರು:ಪೂರ್ಣ ದರ ₹12,700. ಸಾಮಾನ್ಯ ರೈತರಿಗೆ ₹2,500 ರಿಯಾಯಿತಿ ಇದ್ದು, ರೈತರು ಪಾವತಿಸಬೇಕಾದ ದರ ₹10,200. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ₹3,750 ರಿಯಾಯಿತಿ ಇದ್ದು, ಪಾವತಿಸಬೇಕಾದ ದರ ₹8,950.
ಉದ್ದು: ಪೂರ್ಣ ದರ ₹11,750. ಸಾಮಾನ್ಯ ರೈತರಿಗೆ ₹2,500 ರಿಯಾಯಿತಿ ಇದ್ದು, ರೈತರು ಪಾವತಿಸಬೇಕಾದ ದರ ₹9,250. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ₹3,750 ರಿಯಾಯಿತಿ ಇದ್ದು, ಪಾವತಿಸಬೇಕಾದ ದರ ₹8,000.ಅರ್ಹ ರೈತರ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಈ ಸೌಲಭ್ಯವನ್ನು ಪಡೆದುಕೊಳ್ಳಲು ಕೋರಲಾಗಿದೆ
ಕಾರ್ಯಕ್ರಮದಲ್ಲಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಕೃಷಿ ಅಧಿಕಾರಿಗಳಾದ ರವಿಕುಮಾರ್, ಬಸವರಾಜ್, ಸಿದ್ದರಾಮ, ಇಲಾಖೆಯ ಸಿಬ್ಬಂದಿಗಳು ಹಾಗೂ ತಾಲೂಕಿನ ಪ್ರಮುಖ ರೈತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ