ಚಿತ್ತಾಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿತ್ತಾಪುರ ಹಾಗೂ ಬಸವ ಜಯಂತಿ ಉತ್ಸವ ಆಚರಣೆ ಸಮಿತಿ ವತಿಯಿಂದ 893 ನೇ ಬಸವ ಜಯಂತಿ ಉತ್ಸವದ ಅಂಗವಾಗಿ ಸೋಮವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.
ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಶಿಬಿರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಜಯಂತಿಯ ಅಂಗವಾಗಿ ಇಂತಹ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಬಡವರು ಹಾಗೂ ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮೆಡಿಕೇರ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಮುಖ್ಯಸ್ಥ ಡಾ.ಸುರೇಶ್ ಪಾಟೀಲ ಅವರ ಸಹಕಾರದೊಂದಿಗೆ ನಡೆದ ಈ ಶಿಬಿರದಲ್ಲಿ ಸುಮಾರು 15 ರಿಂದ 20 ನುರಿತ ವೈದ್ಯರ ತಂಡ ಭಾಗವಹಿಸಿತ್ತು. ಶಿಬಿರದಲ್ಲಿ ಲಭ್ಯವಿದ್ದ ಪ್ರಮುಖ ಸೇವೆಗಳು:
ಮೂಳೆ ತಜ್ಞರು, ಲ್ಯಾಪರೋಸ್ಕೋಪಿಕ್, ಜನರಲ್ ಮೆಡಿಸಿನ್ ಹಾಗೂ ಮಹಿಳಾ ತಜ್ಞರು. ಕೀಲು ನೋವು, ಮಕ್ಕಳ ತಜ್ಞರು, ಕಿವಿ ಪರೀಕ್ಷೆ ಹಾಗೂ ಚರ್ಮ ರೋಗ ತಪಾಸಣೆ. ಮಧುಮೇಹ (Sugar), ರಕ್ತದ ಒತ್ತಡ (BP), ಕಣ್ಣಿನ ಪರೀಕ್ಷೆ ಹಾಗೂ ಸೀಳು ತುಟಿಗಳ ತಪಾಸಣೆ. ವೈದ್ಯರ ತಂಡವು ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದರ ಜೊತೆಗೆ ಉಚಿತವಾಗಿ ಔಷಧಿಗಳನ್ನು ವಿತರಿಸುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಿತು.
ಬಸವ ಜಯಂತಿ ಸಮಿತಿ ವತಿಯಿಂದ ಶಿಬಿರಕ್ಕೆ ಬಂದ ಸಾರ್ವಜನಿಕರಿಗೆ ತಂಪಾದ ಕುಡಿಯುವ ನೀರು ಹಾಗೂ ಪ್ರಸಾದದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ನೂರಾರು ಜನರು ಶಿಬಿರದ ಲಾಭ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಜಯಂತಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಬೆಳಗುಂಪಾ, ಡಾ.ಸುರೇಶ್ ಪಾಟೀಲ, ಡಾ.ಸಂತೋಷ ಪಾಟೀಲ ಹೆಬ್ಬಾಳ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಗೌರವಾಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ಅಧ್ಯಕ್ಷ ನಾಗರಾಜ ಭಂಕಲಗಿ ಉಪಸ್ಥಿತರಿದ್ದರು.
ಪ್ರಮುಖರಾದ ಸೋಮಶೇಖರ ಪಾಟೀಲ ಬೆಳಗುಂಪಾ, ನಾಗರೆಡ್ಡಿ ಪಾಟೀಲ ಕರದಾಳ, ರಮೇಶ್ ಮರಗೋಳ, ಶಿವಾನಂದ ಪಾಟೀಲ, ವೀರಣ್ಣಗೌಡ ಪರಸರೆಡ್ಡಿ, ಭೀಮಣ್ಣ ಸಾಲಿ, ಮಲ್ಲಿಕಾರ್ಜುನ ಕಾಳಗಿ, ಕುಂಬಾರ ಸಮಾಜದ ಅಧ್ಯಕ್ಷ ವಿಶ್ವನಾಥ ಕುಂಬಾರ, ರಮೇಶ ಕಾಳನೂರ. ಸೇರಿದಂತೆ ಅನೇಕ ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ