ಚಿತ್ತಾಪುರ: ಇಲ್ಲಿನ ಡಾ. ಬಿ. ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ನಿಲಯದ ಅಸ್ತವ್ಯಸ್ತ ಆಡಳಿತವನ್ನು ಖಂಡಿಸಿ ವಸತಿ ನಿಲಯದ ಮುಂದೆ ದಿಢೀರ್ (ಮಿಂಚಿನ) ಪ್ರತಿಭಟನೆ ನಡೆಸಿದರು.
ವಸತಿ ನಿಲಯದಲ್ಲಿ ಸದ್ಯ 180ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳಿದ್ದು, ಅವರ ದಿನನಿತ್ಯದ ಉಪಹಾರ ಮತ್ತು ಊಟದ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಮಾದೇವಮ್ಮ ಕಾಲೇಜಿನ ವಿದ್ಯಾರ್ಥಿಗಳು ಬೆಳಿಗ್ಗೆ 8 ಗಂಟೆಗೇ ಕಾಲೇಜಿಗೆ ತೆರಳಬೇಕಾಗುತ್ತದೆ. ಆದರೆ ಅವರಿಗೆ ಸಮಯಕ್ಕೆ ಸರಿಯಾಗಿ ಉಪಹಾರ ಸಿಗುತ್ತಿಲ್ಲ. ಮಧ್ಯಾಹ್ನದ ಊಟದ ವ್ಯವಸ್ಥೆಯಲ್ಲೂ ಭಾರಿ ವ್ಯತ್ಯಾಸವಾಗುತ್ತಿದ್ದು, ಹಲವು ವಿದ್ಯಾರ್ಥಿಗಳಿಗೆ ಉಪಹಾರ ಮತ್ತು ಊಟ ಸಿಗದೆ ಪರದಾಡುವಂತಾಗಿದೆ. ಕಳೆದ ನಾಲ್ಕು ತಿಂಗಳಿಂದ ವಸತಿ ನಿಲಯಕ್ಕೆ ಒಬ್ಬರೇ ಒಬ್ಬರು ವಾರ್ಡನ್ ಇಲ್ಲದಂತಾಗಿದ್ದು, ನಿಲಯದ ಉಸ್ತುವಾರಿ ನೋಡಿಕೊಳ್ಳುವವರೇ ಇಲ್ಲದಂತಾಗಿದೆ. ನಿಯಮಾನುಸಾರ ವಿದ್ಯಾರ್ಥಿಗಳಿಗೆ ಸಿಗಬೇಕಾದ ಬ್ರಷ್, ಸಾಬೂನು ಸೇರಿದಂತೆ ಯಾವುದೇ ದೈನಂದಿನ ಸಾಮಗ್ರಿಗಳು ಸಿಗುತ್ತಿಲ್ಲ. ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ದಿನಪತ್ರಿಕೆಗಳು ಬರುತ್ತಿಲ್ಲ ಹಾಗೂ ಪರೀಕ್ಷೆಗಳಿಗೆ ಅನುಕೂಲವಾಗುವಂತಹ ಅಗತ್ಯ ಪುಸ್ತಕಗಳೂ ಸಹ ಗ್ರಂಥಾಲಯದಲ್ಲಿ ಇಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
"ಮೇಲಾಧಿಕಾರಿಗಳು ಈ ವಸತಿ ನಿಲಯಕ್ಕೆ ನೀಡಬೇಕಾದ ಯಾವುದೇ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಿಲ್ಲ. ನಮ್ಮ ಶೈಕ್ಷಣಿಕ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ," ಎಂದು ವಸತಿ ನಿಲಯದ ವಿದ್ಯಾರ್ಥಿಗಳಾದ ಶಂಕರ್ ಮತ್ತು ಚೇತನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಮೇಲಾಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ವಸತಿ ನಿಲಯಕ್ಕೆ ಕಾಯಂ ವಾರ್ಡನ್ ನೇಮಿಸಬೇಕು ಹಾಗೂ ಊಟದ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.