ಚಿತ್ತಾಪುರ: ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಚಿತ್ತಾಪುರ ತಾಲೂಕು ಅಭೂತಪೂರ್ವ ಸುಧಾರಣೆ ಕಂಡಿದೆ. ಕಳೆದ ಬಾರಿ ಕೇವಲ ಶೇ. 40.88 ಫಲಿತಾಂಶ ಪಡೆದಿದ್ದ ತಾಲೂಕು, ಈ ಬಾರಿ ಶೇ. 87.89 ರಷ್ಟು ಅಂಕಗಳನ್ನು ಗಳಿಸುವ ಮೂಲಕ ಕಲಬುರಗಿ ಜಿಲ್ಲೆಯಲ್ಲಿಯೇ ದ್ವಿತೀಯ ಸ್ಥಾನ ಅಲಂಕರಿಸಿದೆ.
ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಎಂಬ ಭೇದವಿಲ್ಲದೆ ಎಲ್ಲಾ ಶಾಲೆಗಳು ಉತ್ತಮ ಸಾಧನೆ ತೋರಿವೆ ಸರ್ಕಾರಿ ಶಾಲೆಗಳು, ಹಾಜರಾದ 2952 ವಿದ್ಯಾರ್ಥಿಗಳಲ್ಲಿ 2601 ಮಂದಿ ಉತ್ತೀರ್ಣರಾಗಿದ್ದು, ಶೇ. 87.81 ಫಲಿತಾಂಶ ಬಂದಿದೆ.ಅನುದಾನಿತ ಶಾಲೆಗಳು, ಹಾಜರಾದ 734 ವಿದ್ಯಾರ್ಥಿಗಳಲ್ಲಿ 639 ಮಂದಿ ಉತ್ತೀರ್ಣರಾಗಿದ್ದು, ಶೇ. 87.6 ಸಾಧನೆಯಾಗಿದೆ.
ಅನುದಾನರಹಿತ ಶಾಲೆಗಳು, ಹಾಜರಾದ 1401 ವಿದ್ಯಾರ್ಥಿಗಳಲ್ಲಿ 1240 ಮಂದಿ ಉತ್ತೀರ್ಣರಾಗಿದ್ದು, ಶೇ. 88.51 ರಷ್ಟು ಫಲಿತಾಂಶ ಬಂದಿದೆ. ಒಟ್ಟಾರೆಯಾಗಿ ತಾಲೂಕಿನ 5097 ವಿದ್ಯಾರ್ಥಿಗಳ ಪೈಕಿ 4480 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ತಿಳಿಸಿದ್ದಾರೆ.
ನೂರಕ್ಕೆ ನೂರು ಫಲಿತಾಂಶ ಪಡೆದ ಶಾಲೆಗಳು
ತಾಲೂಕಿನ ಒಟ್ಟು 23 ಶಾಲೆಗಳು ಶೇ. 100 ರಷ್ಟು ಫಲಿತಾಂಶ ದಾಖಲಿಸಿವೆ. ಅವುಗಳಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯ ಚಿತ್ತಾಪುರ, ಆಲ್ ಅಮೀನ್ ಉರ್ದು ಪ್ರೌಢ ಶಾಲೆ ವಾಡಿ, ಬೆಥನಿ ಶಾಲೆ, ಅಂಬೇಡ್ಕರ್ ಶಾಲೆ, ಕಂದಗೋಳ, ದಂಡೋತಿ, ಹೆಬ್ಬಾಳ, ನಾಲವಾರ, ಚಿನಚೋಳಿ ಎಚ್, ಶೆಳ್ಳಗಿಯ ಸರ್ಕಾರಿ ಶಾಲೆಗಳು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು (ಗುಂಡಗುರ್ತಿ, ವಾಡಿ), ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ವಿದ್ಯಾನಿಕೇತನ ಪ್ರೌಢ ಶಾಲೆ ಪ್ರಮುಖವಾಗಿವೆ.
ತಾಲೂಕಿನ ಟಾಪ್ 10 ಪ್ರತಿಭಾವಂತ ವಿದ್ಯಾರ್ಥಿಗಳಾದ ಹೆಬ್ಬಾಳದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶ್ವೇತಾ (619) ಅತಿ ಹೆಚ್ಚು ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಉಳಿದಂತೆ ಸುಮಂತ್ (614), ನಿವೇದಿತಾ ನಂದಾ (612), ಅಕ್ಷತಾ (612), ಚೈತನ್ಯ (610), ಶುಭಂ (609), ಖುಷಿ (608), ಎಂ.ಡಿ. ಅಮೀನ್ ಪಟೇಲ (608), ಶ್ರೀಲಕ್ಷ್ಮಿ (608) ಹಾಗೂ ಮದನ್ (607) ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಫಲಿತಾಂಶ ಸುಧಾರಣೆಗೆ ಕಾರಣವಾದ ಅಂಶಗಳು
"ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 47 ರಷ್ಟು ಫಲಿತಾಂಶ ಏರಿಕೆಯಾಗಿದೆ. ಇದಕ್ಕೆ ಪ್ರಮುಖವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಒದಗಿಸಿದ 'ಅರಿವೆ ಗುರು' ಪುಸ್ತಕ (4 ಮಾದರಿ ಪ್ರಶ್ನೆ ಪತ್ರಿಕೆಗಳು), ಮಿಷನ್-40+, ಜಿಲ್ಲಾಧಿಕಾರಿಗಳ ಪ್ರಗತಿ ಪರಿಶೀಲನೆ ಹಾಗೂ ಸಿಇಒ ಅವರ ಮಾರ್ಗದರ್ಶನ ಕಾರಣ," ಎಂದು ಬಿಇಒ ಶಶಿಧರ ಬಿರಾದಾರ ಹೇಳಿದ್ದಾರೆ.
ಜೊತೆಗೆ ಜನವರಿ 2025 ರಿಂದ ಶನಿವಾರ ಮತ್ತು ಭಾನುವಾರ ವಿಶೇಷ ತರಗತಿ, 'ವೇಕ್ ಅಪ್ ಕಾಲ್', ಮಕ್ಕಳ ಮನೆ ಭೇಟಿ, ಡಯಟ್ ತಂಡದ ದತ್ತು ಯೋಜನೆ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ನೀಡಿದ ವಿಶೇಷ ಆದ್ಯತೆ ಈ ಯಶಸ್ಸಿಗೆ ನಾಂದಿ ಹಾಡಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಲು ಈಗಿನಿಂದಲೇ ಯೋಜನೆ ರೂಪಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ