ಚಿತ್ತಾಪುರ: "ಶಿಕ್ಷಣ ಸಂಸ್ಥೆಯೊಂದನ್ನು ನಡೆಸುವುದು ಹತ್ತು ಆನೆಗಳನ್ನು ಸಾಕಿದಂತೆ. ದೇಶದ ಭವಿಷ್ಯ ರೂಪಿಸುವ ಅತಿದೊಡ್ಡ ಶಕ್ತಿ ಶಾಲೆಗಳಲ್ಲಿದೆ," ಎಂದು ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಪಟ್ಟಣದ ಮಾತೋಶ್ರೀ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ 15ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ ಬಳಿಕ ಆಶೀರ್ವಚನ ನೀಡಿ ಮಾತನಾಡಿದ ಅವರು "ಬಡ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಮಾತೋಶ್ರೀ ಶಾಲೆಯ ಕಾರ್ಯ ಶ್ಲಾಘನೀಯ. ಪಾಲಕರು ಮಕ್ಕಳಿಗೆ ಮೊಬೈಲ್ ನೀಡಿ ಅವರ ಭವಿಷ್ಯ ಹಾಳು ಮಾಡಬಾರದು. ಅದರ ಬದಲಾಗಿ ಪುಸ್ತಕಗಳನ್ನು ನೀಡಿ ಅವರ ಬದುಕನ್ನು ಸಾರ್ಥಕಗೊಳಿಸಬೇಕು," ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪಿಎಲ್‌ಡಿ ಬ್ಯಾಂಕ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, "ಹಿಂದುಳಿದ ಪ್ರದೇಶದ ಬಡ ಮಕ್ಕಳಿಗಾಗಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವುದು ಪುಣ್ಯದ ಕೆಲಸ. ಇಂತಹ ಸಂಸ್ಥೆಗಳಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಮುಂಬರುವ ದಿನಗಳಲ್ಲಿ ಶಾಲೆಯ ಅಭಿವೃದ್ಧಿಗೆ ವೈಯಕ್ತಿಕವಾಗಿ ಬೆಂಬಲ ನೀಡಲಾಗುವುದು," ಎಂದು ಭರವಸೆ ನೀಡಿದರು.
ಶಾಲೆಯ ಮುಖ್ಯಗುರುಗಳಾದ ಜಗದೇವ ಕುಂಬಾರ ಅವರು ವಾರ್ಷಿಕ ವರದಿ ವಾಚಿಸಿ, "2025-26ನೇ ಸಾಲಿನಲ್ಲಿ ಶಾಲೆಯು ಅತ್ಯುತ್ತಮ ಫಲಿತಾಂಶ ಪಡೆದಿದೆ. ಮಕ್ಕಳಲ್ಲಿ ಕೌಶಲ ಬೆಳೆಸಲು 'ನಿರಂತರ ಕಲಿಕೆ' ಎಂಬ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಶಿಕ್ಷಕರ ಅವಿರತ ಶ್ರಮದಿಂದ ಶಾಲೆಯು ಪ್ರಗತಿಯ ಪಥದಲ್ಲಿ ಸಾಗುತ್ತಿದೆ," ಎಂದರು.
ಕಸಾಪ ಮಾಜಿ ಅಧ್ಯಕ್ಷ ವೀರೇಂದ್ರ ಕೊಲ್ಲೂರ, ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ರೋಣದ, ಪ್ರಗತಿ ಪರ ರೈತ ಅಂಬರೀಶ್ ಕಲ್ಲಶೆಟ್ಟಿ, ಮಾಜಿ ಪುರಸಭೆ ಸದಸ್ಯ ವಿಶ್ವನಾಥ ಕಾಶಿ, ಪತ್ರಕರ್ತ ಚಂದ್ರಶೇಖರ ಬಳ್ಳಾ, ಕೊಲಿ ಸಮಾಜ ನಗರ ಅಧ್ಯಕ್ಷ ಬಸವರಾಜ ಮೈನಾಳಕರ್, ವೇದಿಕೆಯಲ್ಲಿ ಇದ್ದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಅಂಬರೀಶ್ ಭೋವಿ, ವಿಶ್ವನಾಥ ಕುಂಬಾರ, ಶೇಷಪ್ಪ ಬಡಿಗೇರ್, ಕಾಸಿಂ ಅಲಿ, ಶ್ರೀಮತಿ ಫೈಮುದ್ ಬೇಗಂ, ಶ್ರೀಮತಿ ಸುಜಾತಾ ಜೆ ಕುಂಬಾರ, ಶ್ರೀಮತಿ ಸುನಿತಾ, ಶಮರಿನ್ ಬೇಗಂ, ಶ್ರೀದೇವಿ, ಇದ್ದರು. ನಿರೂಪಣೆ ಶಿಕ್ಷಕ ನರಸಪ್ಪ ಚಿನ್ನಕಟ್ಟಿ ನೆರವೇರಿಸಿದರು.
ಕಾರ್ಯಕ್ರಮ ನಂತರ ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ನೃತ್ಯ, ನಾಟಕ, ನಡೆದವು ನೃತ್ಯಗಳು ಪಾಲಕರ ಕಣ್ಮನ ಸೆಳೆದವು,
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ