ಜನತೆಯ ಸುದ್ದಿ ವಾಹಿನಿ

ಭಾನುವಾರ, ಮೇ 10, 2026

ವಿದ್ಯುತ್ ವ್ಯತ್ಯಯ: ಅಧಿಕಾರಿಗಳ ಹಾರಿಕೆ ಉತ್ತರಕ್ಕೆ ಸಾರ್ವಜನಿಕರ ಆಕ್ರೋಶ.

ಚಿತ್ತಾಪುರ: ಪಟ್ಟಣದ ಆಶ್ರಯ ಕಾಲೋನಿ ಪ್ರದೇಶದಲ್ಲಿ ಶನಿವಾರ ರಾತ್ರಿಯಿಂದ ವಿದ್ಯುತ್ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದ್ದು, ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಗಾಳಿ, ಮಳೆ ಅಥವಾ ನೈಸರ್ಗಿಕ ವಿಕೋಪಗಳಿಲ್ಲದಿದ್ದರೂ ಏಕಾಏಕಿ ವಿದ್ಯುತ್ ಕಡಿತಗೊಂಡಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಶನಿವಾರ ರಾತ್ರಿ 3:30 ಗಂಟೆಯಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಭಾನುವಾರ ಮಧ್ಯಾಹ್ನ ವರೆಗೆ ಸಂಪೂರ್ಣ ಸ್ಥಾಪನೆಯಾಗಿಲ್ಲ. ಇದರಿಂದಾಗಿ ಈ ಭಾಗದ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ತೀವ್ರ ಉಷ್ಣತೆಯಿಂದಾಗಿ ಇಡೀ ರಾತ್ರಿ ನಿದ್ದೆಯಿಲ್ಲದೆ ಪರದಾಡುವಂತಾಯಿತು. ಯಾವುದೇ ಮುನ್ನೆಚ್ಚರಿಕೆ ನೀಡದೆ ವಿದ್ಯುತ್ ಕಡಿತಗೊಳಿಸಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಕುರಿತು ಪತ್ರಕರ್ತರು ವಿದ್ಯುತ್ ಸರಬರಾಜು ಇಲಾಖೆಯ ಪಟ್ಟಣದ ಸೆಕ್ಷನ್ ಆಫೀಸರ್ (SO) ಮೋಹನ ರಾಠೋಡ ಅವರನ್ನು ಪ್ರಶ್ನಿಸಿದರೆ, "ತಾಂತ್ರಿಕ ದೋಷದಿಂದ ಕಡಿತವಾಗಿದೆ" ಎಂಬ ಹಾರಿಕೆ ಉತ್ತರ ನೀಡಿದ್ದಾರೆ. ಇನ್ನು ಉನ್ನತ ಅಧಿಕಾರಿಯಾದ ಎಇಇ (AEE) ಅವರಿಗೆ ಕರೆ ಮಾಡಿದರೂ, ಅವರ ಫೋನ್ ಮೂಲಕವೂ ಇದೇ ಎಸ್‌.ಓ ಉತ್ತರಿಸಿ, "ಒಮ್ಮೆ ಹೇಳಿದರೆ ಅರ್ಥವಾಗುವುದಿಲ್ಲವೇ? ಪದೇ ಪದೇ ಅದೇ ಸಮಸ್ಯೆ ಕೇಳುತ್ತಿದ್ದೀರಿ" ಎಂದು ಉದ್ಧಟತನದಿಂದ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಶನಿವಾರ ರಾತ್ರಿ ಪಟ್ಟಣದ ಪ್ರಸಿದ್ಧ ಚಿತ್ತಾವಲಿ ದರ್ಗಾದ ಜಾತ್ರಾ ಮಹೋತ್ಸವ ಹಾಗೂ ಗಂಧದ ಮೆರವಣಿಗೆ ಇತ್ತು. ಈ ಸಂದರ್ಭದಲ್ಲಿಯೂ ಬೀದಿ ದೀಪಗಳು ಸಮರ್ಪಕವಾಗಿ ಉರಿಯದೆ ಭಕ್ತಾದಿಗಳು ಕತ್ತಲಲ್ಲೇ ಸಂಚರಿಸುವಂತಾಯಿತು. ಇಲಾಖೆಯ ಈ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಸಮಸ್ಯೆಯ ಕುರಿತು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮಾಹಿತಿ ನೀಡಿದಾಗ, ಅವರು ತಕ್ಷಣ ಸ್ಪಂದಿಸಿ "ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಜೊತೆಗೆ ಮಾತನಾಡಿ ಶೀಘ್ರವೇ ಸಮಸ್ಯೆ ಬಗೆಹರಿಸಲಾಗುವುದು" ಎಂದು ಭರವಸೆ ನೀಡಿದ್ದಾರೆ.

"ಚಿತ್ತಾಪುರ ಪಟ್ಟಣದ ವಿದ್ಯುತ್ ಸರಬರಾಜು ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನಿರ್ಲಕ್ಷ್ಯ ತೋರುತ್ತಿರುವ ಎಸ್.ಓ ಮೋಹನ ರಾಠೋಡ ಅವರನ್ನು ಕೂಡಲೇ ವರ್ಗಾವಣೆ ಮಾಡಿ, ಜನಸ್ನೇಹಿ ಅಧಿಕಾರಿಯನ್ನು ನೇಮಕ ಮಾಡಬೇಕು."

– ಸಾಬಣ್ಣ, ನಿವಾಸಿಗಳು, ಆಶ್ರಯ ಕಾಲೋನಿ.

=================================

"ಪಟ್ಟಣದಲ್ಲಿ ವಿದ್ಯುತ್ ಇಲಾಖೆಯ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅವರ ವರ್ತನೆ ಆಡಿದ್ದೇ ಆಟ ಎಂಬಂತಾಗಿದೆ. ಸಾರ್ವಜನಿಕರ ಮಾತಿಗೆ ಅವರು ಬೆಲೆ ಕೊಡುತ್ತಿಲ್ಲ. ಮೇಲಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು."

– ಜಗದೀಶ ಸಾಗರ, ಸ್ಥಳೀಯ ನಿವಾಸಿ ಚಿತ್ತಾಪುರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ವಿದ್ಯುತ್ ವ್ಯತ್ಯಯ: ಅಧಿಕಾರಿಗಳ ಹಾರಿಕೆ ಉತ್ತರಕ್ಕೆ ಸಾರ್ವಜನಿಕರ ಆಕ್ರೋಶ.

ಚಿತ್ತಾಪುರ: ಪಟ್ಟಣದ ಆಶ್ರಯ ಕಾಲೋನಿ ಪ್ರದೇಶದಲ್ಲಿ ಶನಿವಾರ ರಾತ್ರಿಯಿಂದ ವಿದ್ಯುತ್ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದ್ದು, ನಿವಾಸಿಗಳು ತೀವ್ರ ಆಕ್ರೋಶ ವ...