ಚಿತ್ತಾಪುರ: ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ನನಗೆ ಟಿಕೆಟ್ ನೀಡುವ ಸಂಪೂರ್ಣ ಭರವಸೆ ಇದೆ. ಒಂದು ವೇಳೆ ಪಕ್ಷ ಬೇರೆಯವರಿಗೆ ಟಿಕೆಟ್ ನೀಡಿದರೂ ಸಹ, ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಆದರೆ, ಈ ಬಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸುವುದೇ ನನ್ನ ಏಕೈಕ ಗುರಿಯಾಗಿದೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಘೋಷಿಸಿದರು.
ಪಟ್ಟಣದ ಲಾಡ್ಡಿಂಗ್ ಕ್ರಾಸ್ ಬಳಿ ರಾತ್ರಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ತಮ್ಮ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಮಾತನಾಡಿದ ಅವರು ಕಳೆದ ಚುನಾವಣೆಯಲ್ಲಿ 26 ವರ್ಷದ ಸಣ್ಣ ವಯಸ್ಸಿನಲ್ಲೇ ಬಿಜೆಪಿ ನನಗೆ ಟಿಕೆಟ್ ನೀಡಿ ಆಶೀರ್ವದಿಸಿತ್ತು. ಚಿತ್ತಾಪುರ ಇತಿಹಾಸದಲ್ಲೇ ಬಿಜೆಪಿಗೆ ಅತಿ ಹೆಚ್ಚು ಅಂದರೆ 67,683 ಮತಗಳು ಲಭಿಸಿವೆ. ನಮ್ಮ ಕುಟುಂಬದಲ್ಲಿ ಯಾರೊಬ್ಬರೂ ಗ್ರಾಪಂ ಸದಸ್ಯರೂ ಆಗಿಲ್ಲದ ಕಾರಣ, ರಾಜಕೀಯ ಅನುಭವದ ಕೊರತೆ ಹಾಗೂ ಪ್ರಿಯಾಂಕ್ ಖರ್ಗೆ ಅವರ ಷಡ್ಯಂತ್ರದಿಂದಾಗಿ ಅಲ್ಪ ಮತಗಳ ಅಂತರದಿಂದ ಸೋಲಬೇಕಾಯಿತು. ಗಡ್ಡ ಬಿಟ್ಟುಕೊಂಡು ಕುಟುಂಬದ ಹೆಸರಿನಲ್ಲಿ ಅವರು ರಾಜಕೀಯ ನಾಟಕವಾಡಿದರು ಎಂದು ಟೀಕಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಹಗರಣಗಳನ್ನು ಬಯಲಿಗೆ ತರುವುದು ಹಾಗೂ ಕ್ಷೇತ್ರದಲ್ಲಿ ಅವರ ಬೆಂಬಲಿಗರ ದಾದಾಗಿರಿ ಮತ್ತು ಗುಂಡಾಗಿರಿಯನ್ನು ಮಟ್ಟಹಾಕುವುದೇ ನನ್ನ ಪ್ರಮುಖ ಉದ್ದೇಶವಾಗಿದೆ. ಸುಳ್ಳು ಕೇಸುಗಳನ್ನು ಹಾಕಿ ನನ್ನನ್ನು 2024ರ ಡಿಸೆಂಬರ್‌ನಲ್ಲಿ ಗಡಿಪಾರು ಮಾಡಿಸಲಾಯಿತು. ಇದರಿಂದ ಕ್ಷೇತ್ರಕ್ಕೆ ಬರಲು ಅಡ್ಡಿಯಾಯಿತು. ಆದರೆ ಚಿತ್ತಾಪುರದ ಜನತೆ ನೀಡಿದ ಶಕ್ತಿಯಿಂದ ನಾನು ಮತ್ತೆ ಎದ್ದು ನಿಂತಿದ್ದೇನೆ.ಎಂದರು.
"ಇತ್ತೀಚೆಗೆ ತಂದೆ-ಮಗ (ಖರ್ಗೆ ಕುಟುಂಬ) ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡಿದರೂ ಹಣ ಕೊಟ್ಟು ಜನರನ್ನು ಕರೆಯಿಸುವ ಪರಿಸ್ಥಿತಿ ಬಂದಿದೆ. ಆದರೆ ನಾನು ಹೋದ ಕಡೆಯಲ್ಲೆಲ್ಲ ಜನ ಸ್ವಯಂಪ್ರೇರಿತರಾಗಿ ಡೊಳ್ಳು, ಬಾಜಾ-ಭಜಂತ್ರಿಯೊಂದಿಗೆ ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದಾರೆ. ಕ್ಷೇತ್ರದ ಜನರು ನನ್ನನ್ನು ಮಗನಂತೆ ಕಾಣುತ್ತಿದ್ದಾರೆ," ಎಂದು ಭಾವುಕರಾದರು.
ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಬೇರೆ ಆಕಾಂಕ್ಷಿಗಳು ಬಂದರೆ ಪಕ್ಷ ಬಲಿಷ್ಠವಾಗುತ್ತದೆ ಹೊರತು ಅದಕ್ಕೆ ಯಾರೂ ಗೊಂದಲಕ್ಕೀಡಾಗುವ ಅಗತ್ಯವಿಲ್ಲ ಎಂದು ಅವರು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅಶ್ವಥ್ ರಾಠೋಡ, ಶ್ರೀಕಾಂತ್ ಸುಲೇಗಾಂವ, ಜಿ.ಎಸ್.ಹಿರೇಮಠ, ಶಂಭುಲಿಂಗ ವಿಶ್ವಕರ್ಮ, ಸುನೀಲ್ ಚವ್ಹಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ