ಮಂಗಳವಾರ, ಏಪ್ರಿಲ್ 21, 2026

ವೀರಶೈವ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅಡಿಗಲ್ಲು; ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ.

ಚಿತ್ತಾಪುರ: ಪಟ್ಟಣದ ಸ್ಟೇಷನ್‌ ರಸ್ತೆಯಲ್ಲಿರುವ ವೀರಶೈವ ಸಮಾಜದ ನಿವೇಶನದಲ್ಲಿ ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸುಸಜ್ಜಿತ ಹಾಗೂ ಹವಾನಿಯಂತ್ರಿತ (AC) ವೀರಶೈವ ಕಲ್ಯಾಣ ಮಂಟಪದ ಅಡಿಗಲ್ಲು ಸಮಾರಂಭ ಸೋಮವಾರ ಅದ್ಧೂರಿಯಾಗಿ ನೆರವೇರಿತು.

ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಅಡಿಗಲ್ಲು ನೆರವೇರಿಸಿ ಮಾತನಾಡಿ, "ಜಿಲ್ಲೆಯಲ್ಲೇ ಚಿತ್ತಾಪುರ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ಸಂಘಟನೆ ಅತ್ಯಂತ ಬಲಿಷ್ಠವಾಗಿದೆ. ಈ ಭಾಗದಲ್ಲಿ ಸಮಾಜದ ಬಾಂಧವರಿಗಾಗಿ ಸುಸಜ್ಜಿತ ಕಲ್ಯಾಣ ಮಂಟಪ ಹಾಗೂ ವಿದ್ಯಾರ್ಥಿ ವಸತಿ ನಿಲಯದ ಅವಶ್ಯಕತೆ ಇತ್ತು. ಈ ಕಾರ್ಯಕ್ಕೆ ವೈಯಕ್ತಿಕವಾಗಿ ಹಾಗೂ ಜಿಲ್ಲಾ ಘಟಕದ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಲ್ಲದೆ, ಯೋಜನೆಯ ಯಶಸ್ಸಿಗೆ ಬೆನ್ನೆಲುಬಾಗಿ ನಿಲ್ಲುತ್ತೇನೆ," ಎಂದು ಭರವಸೆ ನೀಡಿದರು.

ಬಸವ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ರಮೇಶ್ ಮರಗೋಳ ಮಾತನಾಡಿ, "ಸಮಾಜದ ಮುಖಂಡರ ಆಶಯದಂತೆ ಈ ಸುಸಜ್ಜಿತ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗುತ್ತಿದೆ. ಇದಕ್ಕೆ ಬೇಕಾಗುವ 2 ಕೋಟಿ ರೂ. ಹಣವನ್ನು ಸಮಾಜದ ಮುಖಂಡರು ಮತ್ತು ದಾನಿಗಳಿಂದ ಸಂಗ್ರಹಿಸಲಾಗುವುದು. ಈಗಾಗಲೇ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಅವರು 5 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಅನೇಕ ದಾನಿಗಳು ಸಹಾಯಕ್ಕೆ ಮುಂದೆ ಬಂದಿದ್ದು, ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ," ಎಂದರು.

ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿ, "ಪಟ್ಟಣದ ಹೃದಯ ಭಾಗದಲ್ಲಿ ಸಮಾಜಕ್ಕಾಗಿ ನಿವೇಶನ ಕಾಯ್ದಿರಿಸಿದ ಶಿವರಾವ್‌ ಪಾಟೀಲ ಬೆಳಗುಂಪಾ ಅವರ ಕಾರ್ಯ ಶ್ಲಾಘನೀಯ. ಸಮಾಜದ ಹಿತದೃಷ್ಟಿಯಿಂದ ರಾಜಕೀಯ ಪಕ್ಷಪಾತ ಮರೆತು ಎಲ್ಲರೂ ಒಗ್ಗೂಡಿರುವುದು ಸಂತಸದ ವಿಷಯ. ಈ ಭವನ ನಿರ್ಮಾಣವಾದ ನಂತರ ಬಡವರಿಗೂ ಕೈಗೆಟುಕುವ ದರದಲ್ಲಿ ಇದರ ಪ್ರಯೋಜನ ಸಿಗುವಂತಾಗಲಿ," ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ಮುಖಂಡರಾದ ವೀರಣ್ಣಗೌಡ ಪರಸರೆಡ್ಡಿ, ಶಿವಾನಂದ ಪಾಟೀಲ ಮರತೂರ, ಚಂದ್ರಶೇಖರ ಅವಂಟಿ, ಭೀಮಣ್ಣ ಸಾಲಿ ಮಾತನಾಡಿದರು.

ವೇದಿಕೆಯಲ್ಲಿ ತಾಲೂಕು ಗೌರವಾಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ಬಸವ ಜಯಂತಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಬೆಳಗುಂಪಾ, ಡಾ.ಪ್ರಭುರಾಜ ಕಾಂತಾ, ಸೋಮಶೇಖರ ಪಾಟೀಲ ಬೆಳಗುಂಪಾ, ರಾಜಶೇಖ‌ರ್ ತಿಮ್ಮನಾಯಕ ಸೇರಿದಂತೆ ಸಮಾಜದ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಶಾಂತಣ್ಣ ಚಾಳೀಕಾರ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ವೀರಶೈವ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅಡಿಗಲ್ಲು; ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ.

ಚಿತ್ತಾಪುರ: ಪಟ್ಟಣದ ಸ್ಟೇಷನ್‌ ರಸ್ತೆಯಲ್ಲಿರುವ ವೀರಶೈವ ಸಮಾಜದ ನಿವೇಶನದಲ್ಲಿ ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸುಸಜ್ಜಿತ ...