ಸೋಮವಾರ, ಏಪ್ರಿಲ್ 27, 2026

ಅನುಭವ ಮಂಟಪವೇ ವಿಶ್ವದ ಪ್ರಪ್ರಥಮ ಸಂಸತ್ತು: ಲೇಖಕಿ ಪೂಜಾ ಭಂಕಲಗಿ.

ಚಿತ್ತಾಪುರ: "ಬ್ರಿಟನ್ ದೇಶದವರು ತಮ್ಮ ಸಂಸತ್ತೇ ಮೊದಲನೆಯದು ಎಂದು ಪ್ರತಿಪಾದಿಸುತ್ತಾರೆ. ಆದರೆ, ಅದಕ್ಕಿಂತಲೂ ಶತಮಾನಗಳ ಹಿಂದೆ ಕರುನಾಡಿನಲ್ಲಿ ವಿವಿಧ ವರ್ಗದ ಶರಣರನ್ನು ಒಗ್ಗೂಡಿಸಿ, ಎಲ್ಲರಿಗೂ ಸಮಾನ ಮಾನ್ಯತೆ ನೀಡಿದ ಬಸವಣ್ಣನವರು ಸ್ಥಾಪಿಸಿದ 'ಅನುಭವ ಮಂಟಪ'ವೇ ಜಗತ್ತಿನ ಪ್ರಪ್ರಥಮ ಪಾರ್ಲಿಮೆಂಟ್," ಎಂದು ಲೇಖಕಿ ಪೂಜಾ ಆರ್. ಭಂಕಲಗಿ ಅಭಿಮತ ವ್ಯಕ್ತಪಡಿಸಿದರು.

ತಾಲೂಕಿನ ಭಾಗೋಡಿ ಗ್ರಾಮದ ಶಾಂತಲಿಂಗೇಶ್ವರ ಮಠದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ 893ನೇ ಜಯಂತ್ಯೋತ್ಸವದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. "ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರು ಜಾತಿ ಪದ್ಧತಿ ಹಾಗೂ ಅಸಮಾನತೆಯ ವಿರುದ್ಧ ನಿರಂತರ ಹೋರಾಡಿದವರು. ಆದರೆ ಇಂದಿಗೂ ಸಮಾಜದಲ್ಲಿ ಅಸಮಾನತೆ ಚಾಲ್ತಿಯಲ್ಲಿರುವುದು ದುರ್ದೈವದ ಸಂಗತಿ," ಎಂದು ಬೇಸರ ವ್ಯಕ್ತಪಡಿಸಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಗುರುಮಿಠಕಲ್ ಖಾಸಾ ಮಠದ ಶ್ರೀ ಶಾಂತವೀರ ಮುರಘರಾಜೇಂದ್ರ ಸ್ವಾಮೀಜಿ ಮಾತನಾಡಿ, "ವಚನ ಸಾಹಿತ್ಯವೆಂಬ ಮಹಾನ್ ಸಂಪತ್ತನ್ನು ಜಗತ್ತಿಗೆ ನೀಡಿದ ಬಸವಣ್ಣನವರು, ಸಮಾನತೆಯ ಸಮಾಜಕ್ಕಾಗಿ ಮಾಡಿದ ಕ್ರಾಂತಿ ಇತಿಹಾಸದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಿತು," ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಪದ್ಮಣ್ಣಗೌಡ ಪಾಟೀಲ ಮಾತನಾಡಿ, "ಬಸವಣ್ಣನವರ ತತ್ವಗಳು ಕೇವಲ ಭಾಷಣಕ್ಕೆ ಸೀಮಿತವಾಗಬಾರದು. ಅವು ನಮ್ಮ ದೈನಂದಿನ ಜೀವನದ ಹಾದಿಯಾಗಬೇಕು. ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಭಾವನೆ ಮೂಡಿದಾಗ ಮಾತ್ರ ಜಯಂತಿಯ ಆಚರಣೆ ಸಾರ್ಥಕವಾಗುತ್ತದೆ. ಗ್ರಾಮದ ಯುವಜನತೆ ಶರಣರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಸಮಾಜದ ಪ್ರಗತಿಗೆ ಶ್ರಮಿಸಬೇಕು," ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಪಂ ಮಾಜಿ ಅಧ್ಯಕ್ಷ ಶರಣಬಸಪ್ಪಗೌಡ ಪಾಟೀಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಉಪಾಧ್ಯಕ್ಷ ವೀರುಪಾಕ್ಷಪ್ಪ ಗಡ್ಡದ್, ನಾಗರಾಜ ಭಂಕಲಗಿ, ದೇವಿಂದ್ರ ಅರಣಕಲ್, ಬಸವರಾಜ ಪಾಟೀಲ್ ದಳಪತಿ, ರಾಮಲಿಂಗ ಬಾನಾರ್‌, ಭೀಮಣ್ಣ ಹೋತಿನಮಡಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಮಹಾಂತಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಎಂಬತ್ನಾಳ ಸ್ವಾಗತಿಸಿದರು, ಮಾಲಾಶ್ರೀ ನಿರೂಪಿಸಿ, ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ.100 ಫಲಿತಾಂಶ: ವಿದ್ಯಾರ್ಥಿಗಳ ಭರ್ಜರಿ ಸಾಧನೆ

ಚಿತ್ತಾಪುರ: ಪಟ್ಟಣದ ನಾಗಾವಿ ಕ್ಯಾಂಪಸ್‌ನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಎಸ್.ಸಿ) 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್...