ಕಳಪೆ ಕಾಮಗಾರಿ ಆರೋಪಕ್ಕೆ ಮೋಗಲಾ ಗ್ರಾಮಸ್ಥರ ತೀವ್ರ ಖಂಡನೆ.

ಚಿತ್ತಾಪುರ: ತಾಲೂಕಿನ ಮೋಗಲಾ ಗ್ರಾಮದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳು ಕಳಪೆಯಾಗಿವೆ ಎಂದು ಕೆಲವರು ನೀಡಿದ್ದ ಹೇಳಿಕೆ ಹಾಗೂ ಮಾಧ್ಯಮಗಳಲ್ಲಿ ಬಂದಿದ್ದ ಸುದ್ದಿ ಸಂಪೂರ್ಣ ಸತ್ಯಕ್ಕೆ ದೂರವಾಗಿದೆ ಎಂದು ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಸ್ಪಷ್ಟನೆ ನೀಡಿದ್ದಾರೆ.

ಗ್ರಾಮದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಪತ್ರಿಕಾ ಪ್ರಕಟಣೆ ನೀಡಿ ಗ್ರಾಮದ ಮುಖಂಡ ಗುರುಲಿಂಗ ಕೆಪ್ಪನೂರ ಊಡಾ ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್‌ಸಿಪಿ/ಟಿಎಸ್‌ಪಿ) ಯೋಜನೆಯಡಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಎಸ್‌ಸಿಪಿ ಓಣಿಯಲ್ಲಿ ಹಾಗೂ ಜಿಲ್ಲಾ ಪಂಚಾಯತ್, ಪಿಆರ್‌ಇಡಿ ಯೋಜನೆಯಡಿ 1.15 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇವೆಲ್ಲವೂ ಅಧಿಕಾರಿಗಳ ನೇರ ಮೇಲ್ವಿಚಾರಣೆಯಲ್ಲಿ ನಿಯಮಾನುಸಾರ, ಅತ್ಯಂತ ಉತ್ತಮ ಗುಣಮಟ್ಟದಿಂದ ನಡೆದಿವೆ.ಗ್ರಾಮದ ಅಭಿವೃದ್ಧಿಯನ್ನು ಸಹಿಸದ ಕೆಲ ವ್ಯಕ್ತಿಗಳು ಸುಳ್ಳು ಆರೋಪ ಮಾಡುತ್ತಿದ್ದಾರೆ. ರಸ್ತೆ 'ಕಳಪೆ' ಹಾಗೂ 'ಬಿರುಕು ಬಿಟ್ಟಿದೆ' ಎಂದು ಅಪಪ್ರಚಾರ ಮಾಡುತ್ತಿರುವುದು ಸ್ಥಳೀಯ ಸಚಿವರ ಮತ್ತು ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಕಪ್ಪುಚುಕ್ಕೆ ಬಳೆಯುವ ಹುನ್ನಾರವಾಗಿದೆ ಎಂದರು. 

ಗ್ರಾಮದ ಮುಖಂಡ ಶಿವಶರಣಪ್ಪ ಹೂಗಾರ ಮಾತನಾಡಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕೆಲವರು ಸ್ಥಳೀಯವಾಗಿ ಚರಂಡಿ ಜಾಗದ ವಿಚಾರವಾಗಿ ಆಕ್ಷೇಪ ಎತ್ತಿ ಅಡೆತಡೆ ಉಂಟುಮಾಡಿದರೂ, ಸಾರ್ವಜನಿಕ ಹಿತದೃಷ್ಟಿಯಿಂದ ಕೆಲಸ ಪೂರ್ಣಗೊಳಿಸಲಾಗಿದೆ. ಹೀಗಿದ್ದರೂ ಈಗ ಸ್ವಾರ್ಥ ಮತ್ತು ಪ್ರಚಾರಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯ ಎಂದು ತಿಳಿಸಿದರು.

ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಜು ಕೆಪ್ಪನೂರ ಮಾತನಾಡಿ ಗ್ರಾಮದ ರಸ್ತೆಯೊಂದು ಕಳೆದ 25 ವರ್ಷಗಳಿಂದ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ಸಚಿವರ ಕೃಪೆಯಿಂದಾಗಿ ಇಂದು ಆ ರಸ್ತೆ ಸಂಪೂರ್ಣ ಅಭಿವೃದ್ಧಿಯಾಗಿದ್ದು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕೆಲಸಗಳು ನಿಯಮಾವಳಿ ಪ್ರಕಾರವೇ ನಡೆದಿದ್ದು, ಯಾವುದೇ ರೀತಿಯ ಕಳಪೆತನವಾಗಿಲ್ಲ ಎಂದರು.

ತಾಲೂಕಿನಾದ್ಯಂತ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಮೋಗಲಾ ಗ್ರಾಮಕ್ಕೆ ಆದ್ಯತೆ ನೀಡಿ ಕೋಟ್ಯಂತರ ರೂಪಾಯಿ ಅನುದಾನ ಮಂಜೂರು ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಅಭಿವೃದ್ಧಿಗೆ ಮುಳ್ಳಾಗುವ ಕೆಲಸವನ್ನು ಯಾರೂ ಮಾಡಬಾರದು ಮತ್ತು ಸಾರ್ವಜನಿಕರು ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದರು.

 - ಭಾಗಪ್ಪ ದೊರೆ ಗ್ರಾಮಸ್ಥರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮಲ್ಲಿಕಾರ್ಜುನ್ ಪೂಜಾರಿ, ಶೇಖಪ್ಪ ಗೌಡ ಪೊಲೀಸ್ ಪಾಟೀಲ್, ಗೂಳಿನಾಥ್ ಹಳಿಮನಿ, ರಮೇಶ್ ಪೂಜಾರಿ, ಭೀಮು ದಂಡೋತಿ, ನಾಗಪ್ಪ ಮಾಳ್ಕೆಡ್, ಶಿರಾವುದ್ದೀನ್ ಮುಲ್ಲಾ, ನಾಗಪ್ಪ ಜಂಬಗಿ, ದಶರಥ್ ಹಾದಿಮನಿ, ನಾಗಪ್ಪ ತಳವಾರ್, ಮಹೇಶ್ ಹೂವಿನ, ನಾರಾಯಣ ಗುತ್ತೇದಾರ್, ರಾಮಲಿಂಗ ಪೂಜಾರಿ, ಶಾಮರಾವ ಬಬಲಾದಿ, ರಾಮಲಿಂಗ ದಂಡೋತಿ, ಶರಪೋದ್ಧಿನ್ ಉಡಾ, ಶೇಖಪ್ಪ ಲಕ್ಕನೂರ್, ನಿರಂಜನ್ ಪೂಜಾರಿ, ಸರ್ವೇಶ ದಂಡೋತಿಕರ್, ಮೌನೇಶ್ ದೊರೆ, ಸುಭಾಷ್ ಹಾದಿಮನಿ, ಸೇರಿದಂತೆ ಇತರರು ಇದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم