ಚಿತ್ತಾಪೂರ: ತಾಲೂಕಿನ ಮತಕ್ಷೇತ್ರದ ವಾಡಿ ಪೊಲೀಸ್ ಸ್ಟೇಷನ್‌ನಿಂದ ಗಾಂಧಿ ನಗರ ರೈಲ್ವೆ ಗೇಟ್‌ವರೆಗೆ ನಿರ್ಮಿಸಲಾಗುತ್ತಿರುವ ಒಳಚರಂಡಿ (ನಾಲಿ) ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಹಾಗೂ ಸೂಕ್ತ ಪರ್ಯಾಯ ಮಾರ್ಗ ಕಲ್ಪಿಸಬೇಕು ಎಂದು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಯುವರಾಜ್ ರಾಠೋಡ ಅವರು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ವಾಡಿ ಪಟ್ಟಣ, ರೈಲ್ವೆ ಜಂಕ್ಷನ್ ಹಾಗೂ ಎಸಿಸಿ ಕಾರ್ಖಾನೆಯ ಭಾಗದಿಂದ ಹರಿದುಬರುವ ಒಳಚರಂಡಿ ನೀರು ನೇರವಾಗಿ ಗಾಂಧಿ ನಗರ ಭಾಗಕ್ಕೆ ಹರಿಯುತ್ತಿದ್ದು, ಸ್ಥಳೀಯರ ಮನೆಗಳ ಒಳಗೆ ನುಗ್ಗಿ ತೀವ್ರ ಸಂಕಷ್ಟವನ್ನುಂಟು ಮಾಡುತ್ತಿದೆ. ನಿವಾಸಿಗಳ ಆರೋಗ್ಯ ಮತ್ತು ದಿನನಿತ್ಯದ ಜೀವನದ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತಿದೆ. ಕಳೆದ 4-5 ವರ್ಷಗಳಿಂದ ಪುರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಹ ಅಧಿಕಾರಿಗಳು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಾಂಧಿ ನಗರದ ರೈಲ್ವೆ ಗೇಟ್‌ನಿಂದ ಮೋಳಿ ಹಳ್ಳದವರೆಗೆ ವೈಜ್ಞಾನಿಕವಾಗಿ ಒಳಚರಂಡಿ ನಿರ್ಮಿಸಿದರೆ, ಗಾಂಧಿ ನಗರದ ಲೇಔಟ್‌ಗೂ ಹಾಗೂ ಸುತ್ತಮುತ್ತಲಿನ ಯಾವುದೇ ಮನೆಗಳಿಗೂ ಚರಂಡಿ ನೀರು ನುಗ್ಗುವುದಿಲ್ಲ. ಇದುವೇ ಸಮಸ್ಯೆಗೆ ಶಾಶ್ವತ ಪರಿಹಾರ ಎಂದು ಸ್ಥಳೀಯ ನಿವಾಸಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಜಾರಿಯಲ್ಲಿರುವ ಅಪಾಯಕಾರಿ ಒಳಚರಂಡಿ ಕಾಮಗಾರಿಯನ್ನು ಕೂಡಲೇ ನಿಲ್ಲಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ಮೋಳಿ ಹಳ್ಳದವರೆಗೆ ಚರಂಡಿ ಮಾರ್ಗವನ್ನು ವಿಸ್ತರಿಸಿ ನಿರ್ಮಿಸಬೇಕೆಂದು ಯುವ ಕಾಂಗ್ರೆಸ್ ಹಾಗೂ ಗಾಂಧಿ ನಗರದ ನಿವಾಸಿಗಳು ಪುರಸಭೆ ಆಡಳಿತಕ್ಕೆ ಮನವಿ ಮಾಡಿದ್ದಾರೆ.