ರಾವೂರು ಜಿ.ಪಂ. ಕ್ಷೇತ್ರಕ್ಕೆ ರದ್ದೇವಾಡಿಗೆ ಕಾಂಗ್ರೆಸ್ ಟಿಕೆಟ್ ನೀಡಿ: ಯುವರಾಜ್ ಒತ್ತಾಯ.

ಚಿತ್ತಾಪುರ: ತಾಲೂಕಿನ ರಾವೂರು ಜಿಲ್ಲಾ ಪಂಚಾಯತ್ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪುರಸಭೆಯ ಮಾಜಿ ಸದಸ್ಯ ಹಾಗೂ ಯುವ ದಲಿತ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರಿಗೆ ಟಿಕೆಟ್ ನೀಡಬೇಕೆಂದು ವಾಡಿ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಯುವರಾಜ್ ರಾಠೋಡ ಒತ್ತಾಯಿಸಿದ್ದಾರೆ.

​ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, "ಸೂರ್ಯಕಾಂತ ರದ್ದೇವಾಡಿ ಅವರು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. 2012 ರಿಂದ 2017ರ ಅವಧಿಯಲ್ಲಿ ಪುರಸಭೆ ಸದಸ್ಯರಾಗಿ ತಮ್ಮ ವಾರ್ಡಿನ ಅಭಿವೃದ್ಧಿಗೆ ಶ್ರಮಿಸಿ, ಜನರ ಕುಂದು-ಕೊರತೆಗಳನ್ನು ಈಡೇರಿಸುವ ಮೂಲಕ ಸಾರ್ವಜನಿಕರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ" 

​ಪ್ರಸ್ತುತ ಬೌದ್ಧ ಸಮಾಜದ ಸಹಕಾರ್ಯದರ್ಶಿಯಾಗಿ ಹಾಗೂ 'ಪಿಎಂಕೆ ಫ್ಯಾನ್ಸ್ ಕ್ಲಬ್' ಮೂಲಕ ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳು, ಸೌಲಭ್ಯಗಳನ್ನು ತಳಮಟ್ಟದ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಸಾರ್ವಜನಿಕರ ಸಮಸ್ಯೆಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ತಂದು ಬಗೆಹರಿಸುವಲ್ಲಿ ಸಕ್ರಿಯವಾಗಿ ಶ್ರಮಿಸುತ್ತಿದ್ದಾರೆ.

​ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಶ್ರಮಿಸುತ್ತಿರುವ ರದ್ದೇವಾಡಿ ಅವರ ಸೇವೆಯನ್ನು ಗುರುತಿಸಿ, ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ರಾವೂರು ಕ್ಷೇತ್ರದಿಂದ ಸ್ಪರ್ಧಿಸಲು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು. ಇದರಿಂದ ಈ ಭಾಗದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚುವುದಲ್ಲದೆ, ಪಕ್ಷಕ್ಕೆ ಮತ್ತಷ್ಟು ಆನೆಬಲ ಬಂದಂತಾಗುತ್ತದೆ ಎಂದು ಯುವರಾಜ್ ರಾಠೋಡ ಅಭಿಪ್ರಾಯಪಟ್ಟಿದ್ದಾರೆ.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು