ಚಿತ್ತಾಪುರ: ಪಟ್ಟಣದ ದಿಗಾಂವ ರಸ್ತೆ ಮತ್ತು ಸಾತನೂರ ರಸ್ತೆಯಲ್ಲಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮನೆಗಳಿಗೆ ತಕ್ಷಣವೇ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಹೋರಾಟ ಸಮಿತಿಯ ಮುಖಂಡರು ಸೋಮವಾರ ಪುರಸಭೆ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ದಿಗಾಂವ ರಸ್ತೆ ಹಾಗೂ ಸಾತನೂರ ರಸ್ತೆಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣವಾಗಿರುವ ಮನೆಗಳಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಗಳು ವಾಸ ಮಾಡುತ್ತಿವೆ. ಆದರೆ ಇಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದಿರುವುದರಿಂದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ 1,000 ಮನೆಗಳನ್ನು ಕಳೆದ 2026ರ ಫೆಬ್ರವರಿ 27 ರಂದು ಪುರಸಭೆಗೆ ಹಸ್ತಾಂತರಿಸಲಾಗಿದ್ದರೂ, ಇಲ್ಲಿಯವರೆಗೆ ಪುರಸಭೆ ಅಧಿಕಾರಿಗಳು ಈ ಕಡೆ ಗಮನ ಹರಿಸುತ್ತಿಲ್ಲ ಎಂದು ಮುಖಂಡರು ಆರೋಪಿಸಿದರು.
ವಿದ್ಯುತ್ ದೀಪಗಳ ಅಳವಡಿಕೆ: ಸಾತನೂರ ರಸ್ತೆ ಗೇಟ್ ಮುಖ್ಯದ್ವಾರದ ಬಲಗಡೆ ನಾಲ್ಕು ಕಂಬಗಳಿಗೆ ವಿದ್ಯುತ್ ಬಲ್ಬ್‌ಗಳಿಲ್ಲ. ಕೂಡಲೇ ವಿದ್ಯುತ್ ಬಲ್ಬ್‌ಗಳನ್ನು ಅಳವಡಿಸಬೇಕು.ದಿಗಾಂವ ಮತ್ತು ಸಾತನೂರ ರಸ್ತೆಯಲ್ಲಿ ಪ್ರತಿನಿತ್ಯ ಕಸದ ವಾಹನ ಬಂದು ಕಸ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಬೇಕು. ಪ್ರತಿಯೊಂದು ಬ್ಲಾಕ್‌ನಲ್ಲಿ 8 ಕುಟುಂಬಗಳಿದ್ದು, ಪ್ರತಿಯೊಂದು ಬ್ಲಾಕ್‌ಗೆ ಕಸ ಶೇಖರಣೆ ಡಬ್ಬಿ ಇಡಬೇಕು. ಏರಿಯಾದಲ್ಲಿ ಬೆಳೆದಿರುವ ಗಿಡ-ಕಂಟಿಗಳನ್ನು ತಕ್ಷಣವೇ ಕಡಿದು ಪ್ರದೇಶವನ್ನು ಸ್ವಚ್ಛಗೊಳಿಸಬೇಕು. ಪ್ರತಿದಿನ ನೀರು ಬಿಡಲು ಒಬ್ಬ ಪಂಪ್ ಆಪರೇಟರ್‌ನನ್ನು ನೇಮಕ ಮಾಡಬೇಕು. ಪ್ರಸ್ತುತ ನೀರಿನ ಪೈಪ್ ಒಡೆದು ಸಾರ್ವಜನಿಕರು ನೀರಿಗಾಗಿ ಪರದಾಡುತ್ತಿದ್ದು, ತಕ್ಷಣವೇ ಅದನ್ನು ದುರಸ್ತಿಗೊಳಿಸಬೇಕು.
ಈ ಕೂಡಲೇ ಸಮಸ್ಯೆಗಳನ್ನು ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿಯ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮೀಕಾಂತ ತಾಂಡೂರಕರ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೃಷ್ಣ ಭೋವಿ, ತಿಮ್ಮು ತಾಂಡೂರಕರ್, ಶಂಭು ಭೋವಿ, ಅಂಬು ಚವ್ಹಾಣ, ರಾಜು ಗುತ್ತೇದಾರ, ಸುನೀಲ್ ಪವಾರ, ದಿಲೀಪ್ ಕಟಗೆ, ಪರಶುರಾಮ ರಾಜಾಪುರ, ಚಿದಾನಂದ ಕಾಶಿ, ನಾಗು ಹೋಳಿಕಟ್ಟಿ, ಸೂರ್ಯಕಾಂತ, ರಾಜು ಭಜಂತ್ರಿ, ಸಂತೋಷ ಭಂಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.