ಚಿತ್ತಾಪೂರ: ವಿಜಯದಶಮಿ ಉತ್ಸವದ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ವತಿಯಿಂದ ಅಕ್ಟೋಬರ್ 31 ಶನಿವಾರ ನಾಳೆ ಪಟ್ಟಣದಲ್ಲಿ ಆಯೋಜಿಸಲಾಗಿರುವ ಪಥಸಂಚಲನಕ್ಕೆ ಪೊಲೀಸ್ ಇಲಾಖೆಯು ವಿವಿಧ ಕಟ್ಟುನಿಟ್ಟಿನ ಶರತ್ತುಗಳೊಂದಿಗೆ ಅನುಮತಿ ನೀಡಿದೆ.
ಸಮಯ ಮತ್ತು ಪಾಲ್ಗೊಳ್ಳುವಿಕೆ ನಿಯಮಗಳು
ಪಥಸಂಚಲನ ಹಾಗೂ ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮವನ್ನು ಅಂದು ಮಧ್ಯಾಹ್ನ 3 ರಿಂದ ಸಂಜೆ 7 ಗಂಟೆಯೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಮತ್ತು ನಿಗದಿತ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮುಂದುವರಿದು, ಚಿತ್ತಾಪುರ ತಾಲೂಕಿನ ನಿವಾಸಿಗಳು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆ ಸೂಚನೆ ನೀಡಿದೆ.
ನಿಗದಿತ ಪಥಸಂಚಲನ ಮಾರ್ಗ ಪೊಲೀಸ್ ಇಲಾಖೆ ನಿಗದಿಪಡಿಸಿರುವ ನಿರ್ದಿಷ್ಟ ಮಾರ್ಗದಲ್ಲಷ್ಟೇ ಪಥಸಂಚಲನ ನಡೆಸಬೇಕು. ಬಜಾಜ್ ಕಲ್ಯಾಣ ಮಂಟಪದಿಂದ ಆರಂಭವಾಗಿ ಬಸ್ ನಿಲ್ಡಾಣ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಭುವನೇಶ್ವರಿ ಚೌಕ್, ಜನತಾ ಚೌಕ್, ನಾಗಾವಿ ಚೌಕ್, ನಂದಕಿಶೋರ್ ಬಜಾಜ್ ಅವರ ಮನೆಯ ಎದುರುಗಡೆ, ಶ್ರೀ ಸೇವಾಲಾಲ್ ಚೌಕ್, ಪುರಸಭೆ ಕಚೇರಿ, ಹಳೆ ಗಂಜ್ ವೃತ್ತ, ಕಾಶಿ ಗಲ್ಲಿ ಗಣೇಶ ಮಂದಿರ ಹಾಗೂ ಲಾಡ್ಜಿಂಗ್ ಕ್ರಾಸ್ ಮೂಲಕ ಪುನಃ ಬಜಾಜ್ ಕಲ್ಯಾಣ ಮಂಟಪ ತಲುಪಬೇಕು. ಈ ನಿಗದಿತ ಮಾರ್ಗವನ್ನು ಹೊರತುಪಡಿಸಿ ಬೇರೆ ಯಾವುದೇ ಮಾರ್ಗವನ್ನು ಬಳಸುವಂತಿಲ್ಲ ಎಂದು ತಿಳಿಸಲಾಗಿದೆ.
ಪಥಸಂಚಲನಕ್ಕೆ ಸಂಬಂಧಿಸಿದ ಕಾರ್ಯಕ್ರಮವನ್ನು ಬಜಾಜ್ ಕಲ್ಯಾಣ ಮಂಟಪದ ಆವರಣದಲ್ಲೇ ಕಟ್ಟುನಿಟ್ಟಾಗಿ ನಡೆಸಬೇಕು. ನಿಗದಿತ ಸ್ಥಳವನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಬೀದಿಗಳಲ್ಲಿ ಯಾವುದೇ ಭಾಷಣ ಅಥವಾ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಕಾರ್ಯಕ್ರಮದ ಸಂಯೋಜಕರು, ಭಾಗವಹಿಸುವವರು ಹಾಗೂ ಆಹ್ವಾನಿತರು ಯಾವುದೇ ರಾಜಕೀಯ ಭಾಷಣ ಮಾಡುವಂತಿಲ್ಲ. ಪ್ರಚೋದನಕಾರಿ ಭಾಷಣ ಅಥವಾ ಘೋಷಣೆಗಳನ್ನು ಬಳಸಬಾರದು ಎಂದು ಕಾನೂನು ಶರತ್ತುಗಳನ್ನು ವಿಧಿಸಲಾಗಿದೆ.