ಮೀಸಲಾತಿ ಜಾರಿ ಬಿಜೆಪಿ ಸರಕಾರದ ದೊಡ್ಡ ಸಾಧನೆ.

ಚಿತ್ತಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸರಕಾರ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿಯನ್ನು ಪ್ರಕಟಿಸಿರುವುದನ್ನು ಹಾಗೂ ವೀರಶೈವ ಲಿಂಗಾಯತ ಹಾಗೂ ಒಳಪಂಗಡಗಳು ಮತ್ತು ಒಕ್ಕಲಿಗರು ಹಾಗೂ ಒಳ ಪಂಗಡಗಳಿಗೆ ಮೀಸಲಾತಿ ಸೌಲಭ್ಯ ಘೋಷಣೆ ಮಾಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ ಬಿಜೆಪಿ ಸರಕಾರದ ದೊಡ್ಡ ಸಾಧನೆಯಾಗಿದೆ ಎಂದು ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ದೇವಿಂದ್ರನಾಥ ನಾದ್ ತಿಳಿಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿಚಾರ ಮೂವತ್ತು ವರ್ಷಗಳಿಂದಲೂ ಇದೆ ಕಾಂಗ್ರೆಸ್ ಸರಕಾರ ಅಶ್ವಾಸನೆ ಕೊಡುತ್ತಾ ಮೂಗಿಗೆ ತುಪ್ಪ ಸವರಿಕೊಂಡು ಬಂದಿತ್ತು. ಆದರೆ ಇಂದು ಕಾಂಗ್ರೆಸ್ ಸರಕಾರದಿಂದ ಆಗಲಾರದ ಒಳ ಮೀಸಲಾತಿ ಜಾರಿಗೆ ತರುವ ಕೆಲಸ ಬಿಜೆಪಿ ಸರಕಾರ ಮಾಡಿ ತೋರಿಸಿದೆ ಎಂದು ಹೇಳಿದ್ದಾರೆ. ಪರಿಶಿಷ್ಟ ಜಾತಿಯ ಒಳಗಿರುವ ಅನೇಕ ಉಪಜಾತಿಗಳಿಗೆ ಪ್ರತ್ಯೇಕ ಮೀಸಲಾತಿಯಿಲ್ಲದೇ ಎಲ್ಲರಿಗೂ ಅನ್ಯಾಯವಾಗುತ್ತಿತ್ತು. ಅದಕ್ಕಾಗಿ ರಾಜ್ಯದಲ್ಲಿ ಜನಸಂಖ್ಯೆಗೆ ಆಧಾರವಾಗಿ ಪರಿಶಿಷ್ಟ ಜಾತಿಯಲ್ಲೇ ಇರುವ ಉಪ ಜಾತಿಗಳನ್ನು ವರ್ಗೀಕರಿಸಿ ಮೀಸಲಾತಿ ನೀಡಬೇಕು ಎನ್ನುವುದು ಬಹುವರ್ಷಗಳ ಬೇಡಿಕೆಯಾಗಿದ್ದು ಅದಕ್ಕೆ ಸಂಬಂಧಿಸಿದಂತ ತಕರಾರು ಚಳುವಳಿಗಳು, ಪ್ರತಿಭಟನೆಗಳು ಮತ್ತು ಸತ್ಯಾಗ್ರಹಗಳು ನಡೆದಿದ್ದವು ಎಂದರು. ...