✓ಕದ್ದರ್ಗಿ ಗ್ರಾಮಸ್ಥರ ಆತಂಕ: ಮಳೆಗಾಲದಲ್ಲಿ ಶಾಕ್ ಭೀತಿ
✓ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಚಿತ್ತಾಪುರ: ತಾಲೂಕಿನ ಕದ್ದರ್ಗಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣದ ವೇಳೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿತನ ಎದ್ದು ಕಾಣುತ್ತಿದ್ದು, ರಸ್ತೆಯ ಬಿಡುಬಾಗದಲ್ಲೇ (ಮಧ್ಯದಲ್ಲೇ) ವಿದ್ಯುತ್ ಕಂಬವೊಂದು ಹಾಗೇ ಉಳಿದುಕೊಂಡಿದೆ. ಇದರಿಂದಾಗಿ ನಿತ್ಯ ಸಂಚರಿಸುವ ಬೈಕ್ ಸವಾರರು, ಪಾದಚಾರಿಗಳು ಹಾಗೂ ಸಣ್ಣ ಮಕ್ಕಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಗ್ರಾಮದ ಪ್ರಮುಖ ಗಲ್ಲಿಯೊಂದರಲ್ಲಿ ಇತ್ತೀಚೆಗೆ ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ, ರಸ್ತೆ ಕಾಮಗಾರಿ ಮಾಡುವ ಮುನ್ನ ಬದಿಗೆ ಸರಿಸಬೇಕಾಗಿದ್ದ ವಿದ್ಯುತ್ ಕಂಬವನ್ನು ರಸ್ತೆಯ ಮಧ್ಯದಲ್ಲೇ ಬಿಟ್ಟು, ಅದರ ಸುತ್ತಲೂ ಸಿಮೆಂಟ್ ರಸ್ತೆ ನಿರ್ಮಿಸಲಾಗಿದೆ. ಪರಿಣಾಮವಾಗಿ, ಕಿರಿದಾದ ಈ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಕತ್ತಲೆಯಲ್ಲಿ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗುವ ಭೀತಿ ಎದುರಾಗಿದೆ.
ಮಕ್ಕಳ ಆಟದ ವಸ್ತುವಾದ ಕಂಬ – ಮಳೆಗಾಲದಲ್ಲಿ ಕರೆಂಟ್ ಶಾಕ್ ಭೀತಿ!
ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ, ಈ ಕಂಬದ ಸುತ್ತಮುತ್ತ ಸಣ್ಣ ಮಕ್ಕಳು ನಿತ್ಯವೂ ಕಂಬವನ್ನು ಹಿಡಿದುಕೊಂಡು ಆಟವಾಡುತ್ತಿರುತ್ತಾರೆ. ಪ್ರಸ್ತುತ ಮಳೆಗಾಲ ಆರಂಭವಾಗಿರುವುದರಿಂದ, ಮಳೆಗೆ ಕಂಬವು ಒದ್ದೆಯಾದಾಗ ಅದರಲ್ಲಿ ಸಣ್ಣ ಪ್ರಮಾಣದ ವಿದ್ಯುತ್ ಪ್ರವಹಿಸುತ್ತಿದೆ (ಅರ್ಥ್ ಆಗುತ್ತಿದೆ). ಇದು ಅತ್ಯಂತ ಅಪಾಯಕಾರಿಯಾಗಿದ್ದು, ಮಕ್ಕಳು ಅರಿಯದೇ ಕಂಬ ಮುಟ್ಟಿದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ.
ಸ್ಥಳೀಯರ ಆಕ್ರೋಶ: "ರಸ್ತೆ ಮಾಡುವಾಗಲಾದರೂ ಜೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿ ಕಂಬವನ್ನು ಪಕ್ಕಕ್ಕೆ ಸರಿಸಬೇಕಿತ್ತು. ಆದರೆ ಯಾರೂ ಜವಾಬ್ದಾರಿ ತಗೆದುಕೊಂಡಿಲ್ಲ. ಈಗ ಮಳೆಗಾಲದಲ್ಲಿ ಕಂಬದಲ್ಲಿ ಕರೆಂಟ್ ಬರುತ್ತಿರುವುದು ನಮಗೆ ಮತ್ತಷ್ಟು ಆತಂಕ ಮೂಡಿಸಿದೆ. ಏನಾದರೂ ಪ್ರಾಣಾಪಾಯವಾದರೆ ಯಾರು ಹೊಣೆ?" ಎಂದು ಕದ್ದರ್ಗಿ ಗ್ರಾಮಸ್ಥರಾದ ರೀಯಾಜ್ ನದಾಫ್, ಚಂದ್ರಕಾಂತ ಕುಂಬಾರ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣದ ಕ್ರಮಕ್ಕೆ ಆಗ್ರಹ
ಹಗಲಿನಲ್ಲಿ ಹೇಗೋ ಕಂಬವನ್ನು ತಪ್ಪಿಸಿಕೊಂಡು ಹೋಗಬಹುದು, ಆದರೆ ರಾತ್ರಿ ವೇಳೆ ಬೀದಿ ದೀಪಗಳು ಸರಿಯಾಗಿ ಬೆಳಗದಿದ್ದರೆ ಈ ಕಂಬ ಪ್ರಾಣಿಸಂಕಟ ತರುವುದು ಖಂಡಿತ. ಸಂಬಂಧಪಟ್ಟ ಜೆಸ್ಕಾಂ (GESCOM) ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಆಡಳಿತವು ತಕ್ಷಣವೇ ಎಚ್ಚೆತ್ತುಕೊಂಡು, ಈ ಅಪಾಯಕಾರಿ ವಿದ್ಯುತ್ ಕಂಬವನ್ನು ರಸ್ತೆಯ ಮಧ್ಯದಿಂದ ತೆರವುಗೊಳಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.