ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಯುವ ಪೀಳಿಗೆ ಸಂಕಲ್ಪ ಮಾಡಲಿ: ಡಿವೈಎಸ್ಪಿ ಕರೆ

ಚಿತ್ತಾಪುರ: ರಾಜ್ಯಾದ್ಯಂತ ಹಮ್ಮಿಕೊಳ್ಳಲಾದ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ ಮಾನ್ಯ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಡಿಜಿ ಮತ್ತು ಐಜಿಪಿ ರವರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇದರ ಬೆನ್ನಲ್ಲೇ, ಮಾನ್ಯ ಗೃಹ ಸಚಿವರ ತವರು ಕ್ಷೇತ್ರವಾದ ಚಿತ್ತಾಪುರ ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲಾಯಿತು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಂಗಾ ಪರಮೇಶ್ವರಿ ಕಾಲೇಜು, ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಅವರು, ವಿದ್ಯಾರ್ಥಿ ದೆಸೆಯಲ್ಲೇ ಕಾನೂನು ಅರಿವು ಹೊಂದುವುದರ ಮಹತ್ವದಾಗಿದೆ "ಮಾದಕ ವಸ್ತುಗಳ ಜಾಲವು ಇಂದಿನ ಯುವ ಪೀಳಿಗೆಯನ್ನು ಗುರಿಯಾಗಿಸಿಕೊಂಡಿದೆ. ಒಮ್ಮೆ ಇದರ ದಾಸರಾದರೆ ಜೀವನವೇ ನಾಶವಾಗುತ್ತದೆ. ಮಾದಕ ದ್ರವ್ಯಗಳ ಸಾಗಾಟ, ಮಾರಾಟ ಮತ್ತು ಬಳಕೆ ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ. ವಿದ್ಯಾರ್ಥಿಗಳು ಇಂತಹ ಆಮಿಷಗಳಿಗೆ ಬಲಿಯಾಗದೆ, ಕಾನೂನಿನ ಚೌಕಟ್ಟನ್ನು ಗೌರವಿಸಿ ದೇಶದ ಉತ್ತಮ ಪ್ರಜೆಗಳಾಗಬೇಕು," ಎಂದು ಅವರು ಕರೆ ನೀಡಿದರು.
ಅಲ್ಲದೆ, ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟುವುದು ಹೇಗೆ ಮತ್ತು ತಮ್ಮ ಸುತ್ತಮುತ್ತ ಇಂತಹ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಹೇಗೆ ಮಾಹಿತಿ ನೀಡಬೇಕು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಸರಳವಾಗಿ ಮನವರಿಕೆ ಮಾಡಿಕೊಟ್ಟರು.

ಇದೇ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮಕ್ಕಳೊಂದಿಗೆ ಮುಕ್ತವಾಗಿ ಚರ್ಚಿಸಿ, ಮಾದಕ ದ್ರವ್ಯಗಳಿಂದ ಆರೋಗ್ಯದ ಮೇಲಾಗುವ ಭೀಕರ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ಕೂಡ ಉತ್ಸಾಹದಿಂದ ಸಂವಾದದಲ್ಲಿ ಪಾಲ್ಗೊಂಡರು.

ಈ ಜಾಗೃತಿ ಕಾರ್ಯಕ್ರಮದಲ್ಲಿ ಸಿಪಿಐ ಸಿದ್ದ ಬಸನಗೌಡ ಪಾಟೀಲ, ಎಎಸ್ಐ ವಿಠ್ಠಲ ಬಿರಾದಾರ ಹಾಗೂ ಪೊಲೀಸ್ ಸಿಬ್ಬಂದಿಗಳಾದ ದತ್ತು ಜಾನೆ, ಅಜರುದ್ದೀನ್, ಅಯ್ಯಣ್ಣ, ಅನಿಲ ಸೇರಿದಂತೆ ಆಯಾ ಕಾಲೇಜುಗಳ ಪ್ರಾಂಶುಪಾಲರು, ಶಾಲೆಯ ಮುಖ್ಯಸ್ಥರು, ಉಪನ್ಯಾಸಕರು ಮತ್ತು ನೂರಾರು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم