ಮತದಾರರ ಪಟ್ಟಿ ಪರಿಷ್ಕರಣೆ ಬಿರುಸು: ತಹಸಿಲ್ದಾರ್.

ಚಿತ್ತಾಪುರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 40-ಚಿತ್ತಾಪುರ ವಿಧಾನಸಭಾ ಮತಕ್ಷೇತ್ರದಲ್ಲಿ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR 2026) ಪ್ರಕ್ರಿಯೆಯು ಅತ್ಯಂತ ಬಿರುಸಿನಿಂದ ಸಾಗಿದೆ ಎಂದು ತಹಸಿಲ್ದಾರ್ ನಾಗಯ್ಯ ಹೀರೆಮಠ ಅವರು ತಿಳಿಸಿದ್ದಾರೆ.

ಮತದಾರರ ವಿವರಗಳ ಪರಿಶೀಲನೆ ಹಾಗೂ ಗಣತಿ ನಮೂನೆಗಳನ್ನು (Enumeration Form) ವಿತರಿಸಲು ಮತಗಟ್ಟೆ ಮಟ್ಟದ ಅಧಿಕಾರಿಗಳು (BLO's) ಜೂನ್ 30 ರಿಂದಲೇ ಮನೆ-ಮನೆಗೆ ಭೇಟಿ ನೀಡುವ ಕಾರ್ಯವನ್ನು ಆರಂಭಿಸಿದ್ದು, ಪ್ರಕ್ರಿಯೆಯು ಚುರುಕಾಗಿ ನಡೆಯುತ್ತಿದೆ.

ಕ್ಷೇತ್ರದಲ್ಲಿ ಒಟ್ಟು 2,51,226 ಮತದಾರರಿದ್ದು, ಇವರೆಲ್ಲರ ಗಣತಿ ನಮೂನೆಗಳನ್ನು ಮುದ್ರಿಸಿ ಬಿಎಲ್‌ಒಗಳಿಗೆ ಈಗಾಗಲೇ ತಲುಪಿಸಲಾಗಿದೆ. ಇದುವರೆಗೆ ಒಟ್ಟು ಶೇ. 99.64 ರಷ್ಟು ಮತದಾರರ ಮ್ಯಾಪಿಂಗ್ (Total Electors Mapped) ಕಾರ್ಯ ಪೂರ್ಣಗೊಂಡಿದೆ. ಮನೆ-ಮನೆ ಗಣತಿ ಕಾರ್ಯ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಯು ಜೂನ್ 30 ರಿಂದ ಆರಂಭವಾಗಿದ್ದು, ಜುಲೈ 29, 2026 ರವರೆಗೆ ಮುಂದುವರಿಯಲಿದೆ.

ಮತಕ್ಷೇತ್ರದಲ್ಲಿ ಇದುವರೆಗೆ ಒಟ್ಟು 1,99,181 ಗಣತಿ ನಮೂನೆಗಳನ್ನು ಯಶಸ್ವಿಯಾಗಿ ವಿತರಿಸಲಾಗಿದ್ದು, ಶೇಕಡಾ 79.28 ರಷ್ಟು ಭೌತಿಕ ಪ್ರಗತಿ ಸಾಧಿಸಲಾಗಿದೆ. ವಿತರಿಸಲಾದ ನಮೂನೆಗಳ ಪೈಕಿ 1,350 (ಶೇ. 0.54) ನಮೂನೆಗಳ ಡಿಜಿಟಲೀಕರಣ ಕಾರ್ಯವೂ ಪೂರ್ಣಗೊಂಡಿದೆ.

ಮನೆ ಮನೆಗೆ ಬರುವ ಮತಗಟ್ಟೆ ಅಧಿಕಾರಿಗಳಿಗೆ (BLO) ಸಾರ್ವಜನಿಕರು ಹಾಗೂ ಮತದಾರರು ಅಗತ್ಯ ಮಾಹಿತಿ ನೀಡಿ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ತಹಸಿಲ್ದಾರ್ ನಾಗಯ್ಯ ಹೀರೆಮಠ ಅವರು ಕೋರಿದ್ದಾರೆ.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم