ಗ್ರಾಮೀಣ ಮಕ್ಕಳಲ್ಲಿನ ಪ್ರತಿಭೆ ಹೊರತರುವ ಕಾರ್ಯ ಕಸಾಪ ಮಾಡುತ್ತಿದೆ – ಜಗಣ್ಣಗೌಡ ರಾಮತೀರ್ಥ

ಚಿತ್ತಾಪುರ: ಗ್ರಾಮೀಣ ಪ್ರದೇಶಗಳ ಶಾಲಾ ಮಕ್ಕಳಲ್ಲಿ ಅನೇಕ ವಿವಿಧ ಬಗೆಯ ಅದ್ಭುತ ಪ್ರತಿಭೆಗಳು ಅಡಗಿದ್ದು, ಅವುಗಳನ್ನು ಹೊರತರುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಯಶಸ್ವಿಯಾಗಿ ಮಾಡುತ್ತಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ ಅಭಿಪ್ರಾಯಪಟ್ಟರು.

ತಾಲೂಕಿನ ಭೀಮನಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಭೀಮನಳ್ಳಿ ವಲಯ ಕಸಾಪ ಶನಿವಾರ ಹಮ್ಮಿಕೊಂಡಿದ್ದ 'ಮಕ್ಕಳ ಸಾಹಿತ್ಯ ಸಂಭ್ರಮ ಮತ್ತು ಕಸಾಪ ಹಿರಿಯ ಸದಸ್ಯರಿಗೆ ಸನ್ಮಾನ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮೌಲ್ಯಯುತ ಸಮಾಜಕ್ಕೆ ಮಕ್ಕಳ ಸಾಹಿತ್ಯ ಪೂರಕ ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ದೇಶ ಸಮೃದ್ದಿಯಾಗುತ್ತದೆ ಎಂದ ರಾಮತೀರ್ಥ ಅವರು, "ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಇಚ್ಛಾಶಕ್ತಿಯಿಂದ ತಾಲೂಕಿನಲ್ಲಿ ಈಗಾಗಲೇ ೪ ಕನ್ನಡ ಸಾಹಿತ್ಯ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿವೆ. ಭೀಮನಳ್ಳಿ ವಲಯದಲ್ಲೂ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯಬೇಕು" ಎಂದು ಆಶಿಸಿದರು.

ತಾಲೂಕು ಕಸಾಪ ಅಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ್ ಮಾತನಾಡಿ, ಕನ್ನಡ ಅತ್ಯಂತ ಅದ್ಭುತ ಭಾಷೆಯಾಗಿದ್ದು, ಸಾಹಿತ್ಯವು ಮನುಷ್ಯನನ್ನು ಪರಿಶುದ್ಧಗೊಳಿಸುತ್ತದೆ. ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಉಪನ್ಯಾಸ ಹಾಗೂ ಜಾನಪದ ಕಲೆ ಸೇರಿದಂತೆ ವಿವಿಧ ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿ ಶಂಕರ ವಿಜಾಪುರಕರ್, ಹಿರಿಯ ಸಾಹಿತಿಗಳಾದ ಲಿಂಗಣ್ಣ ಮಲ್ಕನ್, ಪಂಚಾಕ್ಷರಿ ಪೂಜಾರಿ, ಆಲ್ ಇಂಡಿಯಾ ಬಂಜಾರ ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ನಾಯಕ ಯಾಗಾಪುರ ಹಾಗೂ ಶಿವಶಂಕರ ಮಾತನಾಡಿದರು. ಕಸಾಪ ಭೀಮನಳ್ಳಿ ವಲಯ ಅಧ್ಯಕ್ಷ ಲಿಂಗಪ್ಪ ಗೋಡೆಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಕಸಾಪ ಹಿರಿಯ ಸದಸ್ಯರನ್ನು ಹಾಗೂ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಾಹಿತ್ಯ ಸಂಭ್ರಮದಲ್ಲಿ ಒಟ್ಟು ೨೯ ಶಾಲಾ ಮಕ್ಕಳು ಭಾಗವಹಿಸಿ ಕವನ, ಭಾವಗೀತೆ, ಮೊಹರಂ ಹಾಡು, ಜೋಗುಳ ಪದ ಹಾಗೂ ಕಥೆಗಳನ್ನು ವಾಚಿಸಿ ರಂಜಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಸನ್ಮಾನಿಸಲಾಯಿತು:

ಕವನ ವಿಭಾಗ: ದೇವಕಿ (ಪ್ರಥಮ), ಭಾಗ್ಯಶ್ರೀ (ದ್ವಿತೀಯ) ಮೊಹರಂ ವಿಭಾಗ: ಮನೋಜ್ (ಪ್ರಥಮ) ಹಾಡು ವಿಭಾಗ: ಕಾವೇರಿ (ಪ್ರಥಮ), ನಾಜಿಯಾ (ದ್ವಿತೀಯ)

ಕಾರ್ಯಕ್ರಮದಲ್ಲಿ ತಾಪಂ ಮಾಜಿ ಉಪಾಧ್ಯಕ್ಷ ಶರಣಗೌಡ ಮಾದ್ವಾರ, ಕಸಾಪ ತಾಲೂಕು ಗೌರವ ಅಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ, ಗೌರವ ಕಾರ್ಯದರ್ಶಿ ಸಂಗಮೇಶ ರೋಣದ, ಶಾಲೆಯ ಮುಖ್ಯಗುರು ಅಪ್ಪಯ್ಯ ಹಿರೇಮಠ, ಜಾನಪದ ಪರಿಷತ್ ವಲಯ ಅಧ್ಯಕ್ಷ ರವಿ ಕಾಸಲ ಸೇರಿದಂತೆ ಸುಭಾಷಗೌಡ ಪಸಾರ, ಬಸಣ್ಣಗೌಡ ತತ್ತರೆಡ್ಡಿ, ಕಸಾಪ ಪದಾಧಿಕಾರಿಗಳು, ಕಲಾವಿದರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಸುಹಾನ ಕಾರ್ಯಕ್ರಮ ನಿರೂಪಿಸಿದರು, ರೂಪಾ ಸ್ವಾಗತಿಸಿದರೆ, ಭಾಗ್ಯಶ್ರೀ ವಂದನಾರ್ಪಣೆ ಮಾಡಿದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು