ಚಿತ್ತಾಪುರ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಅಥವಾ ಸೂಕ್ತ ಸರ್ಕಾರಿ ಜಾಗದಲ್ಲಿ "ಕುಂಬಾರ ಸಮಾಜ" ಎಂಬ ಹೆಸರಿನ ನಾಮಫಲಕವನ್ನು (ಬೋರ್ಡ್) ಅಳವಡಿಸಲು ಕಾನೂನುಬದ್ಧವಾಗಿ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿ, ಅಖಿಲ ಭಾರತ ಕುಂಬಾರರ ಮಹಾಸಭಾ ತಾಲೂಕು ಘಟಕದ ವತಿಯಿಂದ ಬುಧವಾರ ಗ್ರೇಡ್ 2 ತಹಸಿಲ್ದಾರ್ ರಾಜಕುಮಾರ್ ಮರತೂರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಅಖಿಲ ಭಾರತ ಕುಂಬಾರರ ಮಹಾಸಭಾದ ತಾಲೂಕಾ ಅಧ್ಯಕ್ಷರಾದ ವಿಶ್ವನಾಥ ಎಸ್. ಕುಂಬಾರ ಅವರು, "ಚಿತ್ತಾಪುರ ಪಟ್ಟಣದಲ್ಲಿ ಕುಂಬಾರ ಸಮಾಜದ ಬಾಂಧವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಸಕ್ರಿಯವಾಗಿರುವ ಈ ಸಮುದಾಯದ ಗುರುತಿಸುವಿಕೆ ಹಾಗೂ ಸಾರ್ವಜನಿಕ ಅನುಕೂಲಕ್ಕಾಗಿ ಪಟ್ಟಣದ ವ್ಯಾಪ್ತಿಯಲ್ಲಿ ಸೂಕ್ತವಾದ ಜಾಗವನ್ನು ಗುರುತಿಸುವುದು ಅತ್ಯಗತ್ಯವಾಗಿದೆ. ಆದ್ದರಿಂದ ತಹಸಿಲ್ದಾರರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ನಮ್ಮ ಸಮಾಜದ ನ್ಯಾಯಯುತ ಬೇಡಿಕೆಯನ್ನು ಶೀಘ್ರವಾಗಿ ಈಡೇರಿಸಿಕೊಡಬೇಕು," ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮಹಾಸಭಾದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾದ ಜಗದೇವ ಎಸ್. ಕುಂಬಾರ ಅವರು ಮಾತನಾಡಿ, "ಕುಂಬಾರ ಸಮುದಾಯವು ತಲೆಮಾರುಗಳಿಂದಲೂ ಸಮಾಜದ ಪ್ರಗತಿಗೆ ಶ್ರಮಿಸುತ್ತಾ ಬಂದಿದೆ. ಪಟ್ಟಣದಲ್ಲಿ ನಮ್ಮ ಸಮುದಾಯದ ಗುರುತಿಸುವಿಕೆಗಾಗಿ ಪುರಸಭೆ ವ್ಯಾಪ್ತಿಯಲ್ಲಿ ಅಥವಾ ಸೂಕ್ತ ಸರ್ಕಾರಿ ಜಾಗದಲ್ಲಿ 'ಕುಂಬಾರ ಸಮಾಜ'ದ ಹೆಸರಿನ ನಾಮಫಲಕ ಅಳವಡಿಸಿಕೊಳ್ಳಲು ಕಾನೂನುಬದ್ಧ ಅವಕಾಶ ಕಲ್ಪಿಸುವುದು ಆಡಳಿತದ ಕರ್ತವ್ಯವಾಗಿದೆ. ಅಧಿಕಾರಿಗಳು ವಿಳಂಬ ಮಾಡದೆ ಸೂಕ್ತ ಜಾಗವನ್ನು ಗುರುತಿಸಿಕೊಡಬೇಕು," ಎಂದು ಆಗ್ರಹಿಸಿದರು.
ಮನವಿ ಪತ್ರವನ್ನು ಸ್ವೀಕರಿಸಿದ ಗ್ರೇಡ್ 2 ತಹಸಿಲ್ದಾರ್ ರಾಜಕುಮಾರ್ ಮರತೂರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಸಮುದಾಯದ ಮುಖಂಡರ ಅಹವಾಲನ್ನು ಆಲಿಸಿದ ಅವರು, "ಕುಂಬಾರ ಸಮಾಜದ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ನಿಯಮಾವಳಿಗಳ ಪ್ರಕಾರ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಅಥವಾ ಅರ್ಹ ಸರ್ಕಾರಿ ಜಾಗದಲ್ಲಿ ನಾಮಫಲಕ ಅಳವಡಿಕೆಗೆ ಕಾನೂನುಬದ್ಧವಾಗಿ ಯಾವ ರೀತಿ ಅವಕಾಶ ಕಲ್ಪಿಸಬಹುದು ಎಂಬುದನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು," ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಮಹಾದೇವ ಕುಂಬಾರ, ಉಪಾಧ್ಯಕ್ಷರಾದ ಆನಂದ ಕುಂಬಾರ, ರಾಜಶೇಖರ್ ಕುಂಬಾರ ಮಲಕೂಡ, ಕಾರ್ಯದರ್ಶಿ ಕಾಶಿನಾಥ್ ಕುಂಬಾರ, ಸಹ ಕಾರ್ಯದರ್ಶಿ ಬಸವರಾಜ ಕುಂಬಾರ, ಸಮಾಜದ ಮುಖಂಡರಾದ ಶ್ರೀಮಂತ ಕುಂಬಾರ, ಮೋಗಲಪ್ಪ ಕುಂಬಾರ, ಸುಭಾಷ ಕುಂಬಾರ, ಸಿದ್ದು ಕುಂಬಾರ, ಮಹೇಶ್ ಕುಂಬಾರ, ಮಲ್ಲಿಕಾರ್ಜುನ ಬಿ ಕುಂಬಾರ, ಗುರುಪಾದಪ್ಪ ಕುಂಬಾರ, ಚಿತ್ರಶೇಖರ್ ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ತರುಣ್ ಕುಂಬಾರ, ಹಣಮಂತ ಕುಂಬಾರ, ವಿಶ್ವಾರಾಧ್ಯ ಕುಂಬಾರ, ರಾಜಶೇಖರ್ ಎನ್ ಕುಂಬಾರ, ದಶರಥ ಕುಂಬಾರ, ರೇವಣಸಿದ್ದಪ್ಪ ಕುಂಬಾರ ಸೇರಿದಂತೆ ಇತರರು ಇದ್ದರು.