ಚಿತ್ತಾಪುರ: ತಾಲೂಕಿನ ಪ್ರತಿಯೊಂದು ಹಳ್ಳಿಯಲ್ಲೂ 1,200 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಚಿವ ಪ್ರಿಯಾಂಕ್ ಖರ್ಗೆ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ತಿಳಿಸಿದ್ದಾರೆ.
ಭಾನುವಾರ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ತಿರುಗೇಟು ನೀಡಿ ಮಾತನಾಡಿದ ಅವರು ಬಿಜೆಪಿ ಮುಖಂಡ ಆರ್. ರುದ್ರಯ್ಯ ಅವರಿಗೆ ಅಭಿವೃದ್ಧಿ ಕುರಿತು ಮಾಹಿತಿ ಬೇಕಿದ್ದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ಸಮಗ್ರ ವಿವರ ಪಡೆಯಲಿ. ಸಚಿವರಿಗೆ ಸಲಹೆ ನೀಡುವ ಅಗತ್ಯ ಅವರಿಗಿಲ್ಲ.
ದಂಡೋತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಷಾಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಾಗ, ಮಣಿಕಂಠ ರಾಠೋಡ್ 50-60 ಮಕ್ಕಳು ಮೃತಪಟ್ಟಿದ್ದಾರೆ ಎಂದು ಸುಳ್ಳು ಮಾಹಿತಿ ಹರಡಿದ್ದಾರೆ. ಅಲ್ಲದೆ, ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಅಶ್ಲೀಲ ಪದ ಬಳಸಿ ನಿಂದಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಜುಲೈ 11 ರಂದು ಪೊಲೀಸ್ ಪ್ರಕರಣ ದಾಖಲಿಸಲಾಗಿದೆ.
"ನಮ್ಮಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಬ್ಬರೇ ಕ್ಯಾಪ್ಟನ್. ಆದರೆ ಬಿಜೆಪಿಯಲ್ಲಿ ಒಂದು ಮನೆ ಮೂರು ಬಾಗಿಲಾಗಿದ್ದದ್ದು ಈಗ ಆರು ಬಾಗಿಲಾಗಿದೆ. ಅಲ್ಲಿ ನಾಯಕತ್ವದ ಕೊರತೆಯಿದ್ದು, ಕೇವಲ ಶೋ ಪುಟ್ಟಪ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ" ಎಂದು ಕಾಳಗಿ ಲೇವಡಿ ಮಾಡಿದರು.
ಇದೇ ವೇಳೆ ಮಾತನಾಡಿದ ಪುರಸಭೆ ಮಾಜಿ ಉಪಾಧ್ಯಕ್ಷ ರಸೂಲ್ ಮುಸ್ತಫಾ, "ಮಣಿಕಂಠ ರಾಠೋಡ್ ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಬಿಟ್ಟು, ಮೊದಲು ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತನಾಡುವುದನ್ನು ಕಲಿಯಲಿ" ಎಂದು ಕಿವಿಮಾತು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಬೆಣ್ಣೂರಕರ್, ಅಹ್ಮದ್ ಸೇರ್, ಜಗನ್ನಾಥ್ ಮುಡಬೂಳಕರ್, ಶ್ರೀಕಾಂತ್ ಸಿಂಧೆ, ಲೋಹಿತ್ ಮುದ್ದಡಗಿ, ಸೂರಜ್ ಕಲ್ಲಕ್ ಇದ್ದರು.