ಚಿತ್ತಾಪುರ: ಪಟ್ಟಣದ ಆಶ್ರಯ ಕಾಲೋನಿಯಲ್ಲಿ ಶನಿವಾರ ಬೀಗ ಹಾಕಿದ್ದ ಮನೆಯೊಂದರ ಬೀಗ ಮುರಿದು ಸುಮಾರು 7,28,000 ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದನ್ನು ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ಆಶ್ರಯ ಕಾಲೋನಿಯ ನಿವಾಸಿ, ಓರಿಯಂಟ್ ಸಿಮೆಂಟ್ ಕಂಪನಿ ಉದ್ಯೋಗಿ ಸತೀಶ್ ಹರಳಕಟ್ಟೆ ಎಂಬುವವರ ಮನೆಯಲ್ಲಿ ಈ ಕಳವು ನಡೆದಿದೆ. ಜುಲೈ 4ರಂದು ಮಧ್ಯಾಹ್ನ 1:30ರ ಸುಮಾರಿಗೆ ಸತೀಶ್ ಅವರು ತಮ್ಮ ಪತ್ನಿಯ ಪರೀಕ್ಷೆಗಾಗಿ ಮನೆಗೆ ಬೀಗ ಹಾಕಿ ಬಂಕೂರಕ್ಕೆ ಹೋಗಿದ್ದರು. ಸಂಜೆ 6:30ರ ಸುಮಾರಿಗೆ ವಾಪಸ್ ಬಂದು ನೋಡಿದಾಗ ಮನೆಯ ಮುಂಭಾಗದ ಬಾಗಿಲಿನ ಬೀಗ ಹಾಗೂ ಅಲ್ಮೇರಾ ಒಡೆದಿರುವುದು ಕಂಡುಬಂದಿದೆ.
ಅಲ್ಮೇರಾದಲ್ಲಿದ್ದ 50 ಗ್ರಾಂ ಚಿನ್ನದ ಪಟ್ಲಿ, 30 ಗ್ರಾಂ ಮಂಗಳಸೂತ್ರ ಸೇರಿದಂತೆ ಒಟ್ಟು 136.5 ಗ್ರಾಂ ಚಿನ್ನಾಭರಣಗಳು, ಬೆಳ್ಳಿಯ ಕಾಲುಂಗುರ, ಉಡುದಾರ, ಕಡಗ ಮತ್ತು ₹35,000 ನಗದು ಹಣ ಸೇರಿದಂತೆ ಒಟ್ಟು ₹7.28 ಲಕ್ಷ ಮೌಲ್ಯದ ವಸ್ತುಗಳನ್ನು ಅಪರಿಚಿತ ಕಳ್ಳರು ಕಳವು ಮಾಡಿದ್ದಾರೆ.
ಈ ಕುರಿತು ಸತೀಶ್ ಹರಳಕಟ್ಟಿ ಅವರು ನೀಡಿದ ದೂರಿನನ್ವಯ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 102/2026, ಬಿಎನ್‌ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.