ಚಿತ್ತಾಪುರ: ತಾಲೂಕಿನ ದಂಡೋತಿ ಹೊರ ವಲಯದ ಪ್ರೌಢ ಶಾಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭೀಕರ ಘಟನೆಯೊಂದು ಸಂಭವಿಸಿದೆ. ಶಾಲೆಯಲ್ಲಿ ನೀಡಲಾದ ಕಲುಷಿತ ಆಹಾರ (ಫುಡ್ ಪಾಯ್ಸನ್) ಸೇವಿಸಿ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಅವರೆಲ್ಲರನ್ನೂ ತುರ್ತಾಗಿ ಪೊಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಮೂವರು ವಿದ್ಯಾರ್ಥಿಗಳ ಪರಿಸ್ಥಿತಿ ಗಂಭೀರವಾಗಿದ್ದರಿಂದ, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುರ್ತು ವಾಹನದ (ಆಂಬ್ಯುಲೆನ್ಸ್) ಮೂಲಕ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಶ್ಲಾಘನೀಯ ಕಾರ್ಯ ಘಟನೆ ತಿಳಿಯುತ್ತಿದ್ದಂತೆ ಚಿತ್ತಾಪುರ ಆಸ್ಪತ್ರೆಯ ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿ ವರ್ಗದವರು ಅಸ್ವಸ್ಥ ರೋಗಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಹರಸಾಹಸ ಪಡುತ್ತಿದ್ದಾರೆ. ಸಮಯಪ್ರಜ್ಞೆ ಮೆರೆದು ವಿದ್ಯಾರ್ಥಿಗಳ ಪ್ರಾಣ ಉಳಿಸಲು ವೈದ್ಯಕೀಯ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಶ್ರಮಿಸುತ್ತಿದ್ದಾರೆ.
ಇನ್ನೊಂದೆಡೆ, ಆಸ್ಪತ್ರೆಯ ಆವರಣದಲ್ಲಿ ಆತಂಕಗೊಂಡ ಪೋಷಕರು ಮತ್ತು ಸಾರ್ವಜನಿಕರ ಜನದಟ್ಟಣೆ ಹೆಚ್ಚಾಗದಂತೆ ನಿಯಂತ್ರಿಸಲು ಪೊಲೀಸ್ ಇಲಾಖೆಯ ಸಿಪಿಐ, ಪಿಎಸ್ಐ ಹಾಗೂ ಸಿಬ್ಬಂದಿ ವರ್ಗದವರು ಶ್ರಮಿಸುತ್ತಿದ್ದಾರೆ. ಆಸ್ಪತ್ರೆಯ ಒಳಗಡೆ ಅನಗತ್ಯವಾಗಿ ಯಾರು ಪ್ರವೇಶಿಸದಂತೆ ನೋಡಿಕೊಳ್ಳುವ ಮೂಲಕ ಚಿಕಿತ್ಸೆಗೆ ಯಾವುದೇ ಅಡ್ಡಿಯಾಗದಂತೆ ಪೊಲೀಸರು ಅಚ್ಚುಕಟ್ಟಾದ ಬಂದೋಬಸ್ತ್ ಕಲ್ಪಿಸಿದ್ದಾರೆ.
ಇನ್ನೂ ದಂಡೋತಿ ಮತ್ತು ಮಲಖೇಡ್ ಆಸ್ಪತ್ರೆಯಲ್ಲಿಯೂ ಸಹ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಕೊಡ ಇದೆ.
ವಸತಿ ಶಾಲೆಯ ಅವ್ಯವಸ್ಥೆ ಬಿಚ್ಚಿಟ್ಟ ವಿದ್ಯಾರ್ಥಿಗಳು ಇಷ್ಟೊಂದು ದೊಡ್ಡ ದುರಂತ ಸಂಭವಿಸಿದರೂ ಸಹ ವಸತಿ ಶಾಲೆಯ ಯಾವೊಬ್ಬ ಶಿಕ್ಷಕರೂ ಅಥವಾ ಜವಾಬ್ದಾರಿಯುತ ಸಿಬ್ಬಂದಿಯೂ ಸ್ಥಳಕ್ಕೆ ಬಾರದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳು ವಸತಿ ಶಾಲೆಯ ನರಕಯಾತನೆಯನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.
ಶಾಲೆಗೆ ಸರಿಯಾದ ಕುಡಿಯುವ ನೀರಿಲ್ಲ, ಸ್ನಾನಕ್ಕೂ ನೀರಿಲ್ಲ. ಅಡುಗೆ ಸಿಬ್ಬಂದಿಗಳು ಸರಿಯಾಗಿ ಅಡುಗೆ ಮಾಡುವುದಿಲ್ಲ, ಕಲುಷಿತ ಆಹಾರವನ್ನೇ ನೀಡಲಾಗುತ್ತಿದೆ. ವಾರ್ಡನ್ ಹಾಗೂ ಪ್ರಾಂಶುಪಾಲರು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಮಕ್ಕಳ ಕಷ್ಟ ಕೇಳುತ್ತಿಲ್ಲ. ವಸತಿ ಶಾಲೆಯಲ್ಲಿ ಸದಾ ವಿದ್ಯುತ್ ಸಮಸ್ಯೆಯಿರುತ್ತದೆ. ಕರೆಂಟ್ ಹೋದರೆ ಬ್ಯಾಕಪ್‌ಗಾಗಿ ಕನಿಷ್ಠ ಒಂದು ಜನರೇಟರ್ ವ್ಯವಸ್ಥೆಯೂ ಇಲ್ಲ.
ಹತ್ತು ಹಲವಾರು ಸಮಸ್ಯೆಗಳಿಂದ ನಾವು ನರಳುತ್ತಿದ್ದರೂ, ನಮ್ಮ ಕಷ್ಟಗಳಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ವಸತಿ ಶಾಲೆಯ ಪ್ರಾಂಶುಪಾಲರು, ವಾರ್ಡನ್ ಹಾಗೂ ಬೇಜವಾಬ್ದಾರಿ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.