ಆಡಳಿತ ಯಂತ್ರ ಸಂಪೂರ್ಣ ಕುಸಿತ: ಆರ್. ರುದ್ರಯ್ಯ

ಚಿತ್ತಾಪುರ: ತಾಲೂಕಿನಲ್ಲಿ ಸರ್ಕಾರಿ ಇಲಾಖೆಗಳು ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದು, ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಆರ್. ರುದ್ರಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರವನ್ನು ಕಡೆಗಣಿಸಿದ ಸಚಿವರು ದಂಡೋತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಷಾಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಎರಡು ದಿನ ಕಳೆದರೂ ಸ್ಥಳೀಯ ಸಚಿವರು ಬೆಂಗಳೂರಿನಿಂದಲೇ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದಾರೆಯೇ ವಿನಃ ಇತ್ತ ತಲೆಹಾಕಿಲ್ಲ. ಇದು ಕ್ಷೇತ್ರದ ಮೇಲಿರುವ ಅವರ ಕಾಳಜಿಯನ್ನು ತೋರಿಸುತ್ತದೆ. ಅಸ್ವಸ್ಥ ವಿದ್ಯಾರ್ಥಿಗಳಿಗೆ ನೆರವಾದವರ ಮೇಲೆಯೇ ಕ್ರಮ ಕೈಗೊಳ್ಳುವುದಾಗಿ ಧಮ್ಕಿ ಹಾಕುತ್ತಿರುವುದು ಸರಿಯಲ್ಲ ಎಂದು ರುದ್ರಯ್ಯ ಖಂಡಿಸಿದರು.

ತಾವು ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಲ್ಲ ಎಂದು ಸ್ಪಷ್ಟಪಡಿಸಿದ ಅವರು, "2023ರ ಚುನಾವಣೆಯಲ್ಲಿ ಲಿಂಗಸೂಗೂರು ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸಿ 14 ಸಾವಿರ ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ನಾನೇ ಕಾರಣನಾಗಿದ್ದೇನೆ. ಜನರನ್ನು ಕತ್ತಲೆಯಲ್ಲಿಟ್ಟು ನಿರಂತರ ಅಧಿಕಾರ ನಡೆಸುತ್ತಿರುವ ಖರ್ಗೆ ಕುಟುಂಬದಿಂದ ಜಿಲ್ಲೆಯಲ್ಲಿ ಯಾವೊಬ್ಬ ದಲಿತರಿಗೂ ಉದ್ಧಾರವಾಗಿಲ್ಲ" ಎಂದು ಪ್ರಶ್ನಿಸಿದರು.

ಇದೇ ವೇಳೆ ಎಸ್‌ಐಆ‌ರ್ (SIR) ಪ್ರಕ್ರಿಯೆ ಕುರಿತು ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಶುದ್ಧೀಕರಣಕ್ಕೆ ಇದು ಅಗತ್ಯವಿದ್ದು, ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮಾಡುತ್ತಿದೆ. ಅಧಿಕಾರಿಗಳು ಯಾವುದೇ ಪಕ್ಷಪಾತವಿಲ್ಲದೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಎಚ್ಚರಿಸಿದರು. ಅಲ್ಲದೆ, ತಾವು ಕಳೆದ 25 ವರ್ಷಗಳಿಂದ ಜಿಲ್ಲೆಯಲ್ಲೇ ನೆಲೆಸಿದ್ದು, ಪಕ್ಷ ನೀಡುವ ಮುಂದಿನ ಯಾವುದೇ ನಿರ್ಧಾರಕ್ಕೂ ಬದ್ಧವಾಗಿರುವುದಾಗಿ ತಿಳಿಸಿದರು.

ಕಲಬುರಗಿ ಮಾಜಿ ಮೇಯರ್ ವಿಶಾಲ್ ದರ್ಗಿ ಮಾತನಾಡಿ, "ನಾನು ಮೇಯರ್ ಆಗಿದ್ದಾಗ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ 20ಕ್ಕೂ ಹೆಚ್ಚು ಬಾರಿ ಫೋನ್ ಮಾಡಿದರೂ ಒಮ್ಮೆಯೂ ಸಭೆಗೆ ಬರಲಿಲ್ಲ. ಅವರಿಗೆ ಮಹಾನಗರದ ಅಭಿವೃದ್ಧಿ ಬಗ್ಗೆ ಕಾಳಜಿಯಿಲ್ಲ, ಕೇವಲ ದಿನವಿಡೀ ಆರ್.ಎಸ್.ಎಸ್ ನಿಂದಿಸುವುದೇ ಅವರ ಕೆಲಸವಾಗಿದೆ" ಎಂದು ಟೀಕಿಸಿದರು.

"ಪ್ರಭಾವಿ ಸಚಿವರ ಕ್ಷೇತ್ರ ಮಾದರಿಯಾಗಬೇಕಿತ್ತು. ಆದರೆ ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ ಚಿತ್ತಾಪುರ ತೀರಾ ಕೆಳಮಟ್ಟದಲ್ಲಿದೆ. ಸಚಿವರು ಅಭಿವೃದ್ಧಿ ಬಿಟ್ಟು ಬರೀ ಆ‌ರ್.ಎಸ್.ಎಸ್ ನಿಷೇಧದ ಬಗ್ಗೆ ಮಾತನಾಡುತ್ತಾ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ."

– ಆರ್. ರುದ್ರಯ್ಯ, ಬಿಜೆಪಿ ಮುಖಂಡ

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಪುರಸಭೆ ಮಾಜಿ ಅಧ್ಯಕ್ಷ ನಾಗರಾಜ ಭಂಕಲಗಿ,
ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸುರಕರ್, ಪ್ರಮುಖರಾದ ರಮೇಶ್ ಬೊಮ್ಮನಳ್ಳಿ, ಪ್ರಭು ಗಂಗಾಣಿ, ಮಹಿಳಾ ಮೋರ್ಚಾ ಅಧ್ಯಕ್ಷೆ ನಾಗುಬಾಯಿ ಜಿತುರೆ ಅಕ್ಕಮಹಾದೇವಿ ನಾಗೇಶ್, ಚಂದ್ರಶೇಖರ ಉಟಗೂರ, ರವಿ ಮದನಕರ್ ಸೇರಿದಂತೆ ಇತರರು ಇದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು