ಚಿತ್ತಾಪುರ: ಕೇಂದ್ರದ ಬಿಜೆಪಿ ಸರ್ಕಾರದ ಬೃಹತ್ ವೈಫಲ್ಯಗಳು ಹಾಗೂ ನೀಟ್ ಪರೀಕ್ಷೆಯ ಅಕ್ರಮದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಿರುವ ಘಟನೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಆರ್. ರುದ್ರಯ್ಯ ಅವರು, ಕಾಂಗ್ರೆಸ್ ಪಕ್ಷ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಕಾಳಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನೀಟ್ ಅಕ್ರಮ ಮತ್ತು ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ಕಾಂಗ್ರೆಸ್‌ನ ಆಗ್ರಹ ಸರಿಯಾಗಿದೆ ಎಂಬುದಕ್ಕೆ ಸಾಕ್ಷಿ, ನೀಟ್ ಪರೀಕ್ಷೆಯ ಅಕ್ರಮದಿಂದಾಗಿ ದೇಶದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಮತ್ತು ವಿದ್ಯಾರ್ಥಿಗಳ ಭವಿಷ್ಯ ಅಂಧಕಾರಕ್ಕೆ ದೂಡಲ್ಪಟ್ಟಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಕೆಲವರನ್ನು ಬಂಧಿಸಿರುವುದು ಸಮಸ್ಯೆಗೆ ಪೂರ್ಣ ಪರಿಹಾರವಲ್ಲ.
ಲಕ್ಷಾಂತರ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡಿದ್ದಕ್ಕೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ನ್ಯಾಯಸಮ್ಮತ ಆಗ್ರಹವಾಗಿತ್ತೇ ಹೊರತು ಯಾವುದೇ ರಾಜಕೀಯ ಉದ್ದೇಶದ್ದಲ್ಲ ಎಂಬುದು ಈಗ ಸಾಬೀತಾಗಿದೆ.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕಿಮ್ಮನೆ ರತ್ನಾಕರ್ ಸಚಿವರಾಗಿದ್ದಾಗ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ ಸರ್ಕಾರ ಅದನ್ನು ಮುಚ್ಚಿಡಲು ಯತ್ನಿಸಲಿಲ್ಲ; ತಕ್ಷಣವೇ ಮರುಪರೀಕ್ಷೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ನೀಟ್ ಅಕ್ರಮದಲ್ಲಿ ಆರಂಭದಲ್ಲಿ ತಪ್ಪನ್ನೇ ಒಪ್ಪಿಕೊಳ್ಳಲಿಲ್ಲ. ವ್ಯಾಪಕ ಪ್ರತಿಭಟನೆ ಮತ್ತು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ ಮೇಲಷ್ಟೇ ತನಿಖೆಗೆ ಮುಂದಾಗಿ, ಈಗ ಸಚಿವರ ರಾಜೀನಾಮೆಗೆ ಶರಣಾಗಿದೆ.
ಕಲಬುರಗಿ ಜಿಲ್ಲೆ ಹಾಗೂ ಚಿತ್ತಾಪುರ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲೇ ಆಡಳಿತ ನಡೆಯುತ್ತಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಯಾವುದೇ ಸುಳ್ಳು ಕೇಸ್ ಹಾಕಿಸುವ ಕೆಲಸ ಮಾಡಿಲ್ಲ. ಕಾನೂನು ವಿರೋಧಿ ಚಟುವಟಿಕೆ, ಸಮಾಜದಲ್ಲಿ ಶಾಂತಿ ಕದಡುವ ಯತ್ನ ಹಾಗೂ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ತನ್ನ ಕ್ರಮ ಕೈಗೊಳ್ಳುತ್ತಿದೆ. ಇದನ್ನು "ನಿರಂಕುಶ ಆಡಳಿತ" ಎನ್ನುವುದು ಬಿಜೆಪಿ ನಾಯಕರ ಹತಾಶೆಯನ್ನು ಎತ್ತಿ ತೋರಿಸುತ್ತದೆ.
ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತವು ಬರಗಾಲ ಹಾಗೂ ಮಳೆ ಅಭಾವದ ಪರಿಸ್ಠಿತಿಯನ್ನು ತೀವ್ರವಾಗಿ ಪರಿಗಣಿಸಿದೆ. ಸಚಿವರು ಮತ್ತು ಜಿಲ್ಲಾಡಳಿತವು ನಿರಂತರವಾಗಿ ಪರಿಸ್ಥಿತಿಯ ಪರಾಮರ್ಶೆ ನಡೆಸುತ್ತಿದ್ದು, ಕುಡಿಯುವ ನೀರು, ಮೇವು ಮತ್ತು ಪರಿಹಾರ ಕಾರ್ಯಗಳನ್ನು ಒದಗಿಸುತ್ತಿದೆ. ಆದ್ರೆ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಅನುದಾನ ತರುವಲ್ಲಿ ಸಂಪೂರ್ಣ ವಿಫಲವಾಗಿರುವ ಬಿಜೆಪಿ ನಾಯಕರು, ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ರಾಜ್ಯ ಸರ್ಕಾರದ ಕಡೆಗೆ ಬೆರಳು ತೋರಿಸುತ್ತಿರುವುದು ಸರಿಯಲ್ಲ.
ಕ್ಷೇತ್ರದಲ್ಲಿ ಮುಂದೆ ಟಿಕೆಟ್ ಸಿಗುವುದು ಎನ್ನುವ ಭ್ರಮೆಯಲ್ಲಿ ಬಿಜೆಪಿ ಮುಖಂಡರು ಬೆಂಗಳೂರು ಹಾಗೂ ಕಲಬುರಗಿಯಿಂದ ಚಿತ್ತಾಪುರಕ್ಕೆ ಪತ್ರಿಕಾಗೋಷ್ಠಿ ಮಾಡಲು ಬರುತ್ತಾರೆ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಕೆಲ ಮುಖಂಡರು ಬಂದಿದ್ದರು, ಈ ಬಾರಿ ಒಬ್ಬರು ಬಂದಿದ್ದಾರೆ. ಚಿತ್ತಾಪುರ ಕ್ಷೇತ್ರದ ಶುದ್ಧ ರಾಜಕೀಯವನ್ನು ಕಲುಷಿತ ಮಾಡುವುದೇ ಇವರ ಉದ್ದೇಶವಾಗಿದೆ.
ಬಿಜೆಪಿ ಮುಖಂಡರಿಗೆ ಬರೀ ಗಾಳಿಯಲ್ಲಿ ಗುಂಡು ಹೊಡೆಯುವುದು ಗೊತ್ತಿದೆ, ನಿಖರತೆ ಖಚಿತವಾಗಿ ಹಾಗೂ ಸ್ವಷ್ಟ ಮಾಹಿತಿ ಪಡೆದು ಮಾತನಾಡಲು ಬರುವುದಿಲ್ಲ ಎಂದು ವ್ಯಂಗ್ಯ ಮಾಡಿದರು.
"ಇಂದು ದೇಶದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಆಡಳಿತದ ವೈಫಲ್ಯಗಳು ಒಂದೊಂದಾಗಿ ಬಯಲಾಗುತ್ತಿವೆ. ಪರೀಕ್ಷೆಗಳ ಸರಣಿ ಅಕ್ರಮಗಳಿಂದಾಗಿ ಕೇಂದ್ರ ಶಿಕ್ಷಣ ಸಚಿವರೇ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಡಳಿತಾತ್ಮಕವಾಗಿ ಸಂಪೂರ್ಣವಾಗಿ ನೈತಿಕತೆ ಕಳೆದುಕೊಂಡಿರುವ ಬಿಜೆಪಿ ನಾಯಕರು, ತಮ್ಮ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಸ್ಥಳೀಯವಾಗಿ ಕಾಂಗ್ರೆಸ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ,"
- ಮಲ್ಲಿಕಾರ್ಜುನ ಕಾಳಗಿ,
ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರು
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರಸೂಲ್ ಮುಸ್ತಫಾ ಸೇಠ್.ಸೈಯದ್ ಚಿಸ್ತಿ, ಅಹ್ಮದ್ ಸೇಠ್ ಪ್ರಕಾಶ್ ಸಾಲಗಾರ, ಬಸವರಾಜ ಮುಡಬೂಳಕರ್, ಶ್ರೀಕಾಂತ್, ಅನಿಲ್ ನಾಡಗೇರಿ, ಸೇರಿದಂತೆ ಇತರರು ಇದ್ದರು.