ಪಡುಕೋಟೆಯವರನ್ನು ರೌಡಿಯಂತೆ ನೋಡಬೇಡಿ: ಸರ್ಕಾರಕ್ಕೆ 'ನಮ್ಮ ಕರ್ನಾಟಕ ಸೇನೆ' ಮನವಿ

​ಚಿತ್ತಾಪುರ: ಬೆಂಗಳೂರಿನ ಶಿವಾಜಿ ನಗರದಲ್ಲಿ ಪಾದಚಾರಿ ಮಾರ್ಗ ತೆರವುಗೊಳಿಸುವ ಸಂದರ್ಭದಲ್ಲಿ ನಡೆದ ಅಚಾತುರ್ಯದ ಘಟನೆಗೆ ವಿಷಾದ ವ್ಯಕ್ತಪಡಿಸಿರುವ ‘ನಮ್ಮ ಕರ್ನಾಟಕ ಸೇನೆ’ ತಾಲೂಕು ಘಟಕ, "ಈ ಘಟನೆಯನ್ನೇ ಇಟ್ಟುಕೊಂಡು ಸರ್ಕಾರ ಮತ್ತು ಅಧಿಕಾರಿಗಳು ಕನ್ನಡಪರ ಹೋರಾಟಗಾರ ಬಸವರಾಜ್‌ ಪಡುಕೋಟೆ ಅವರನ್ನು ರೌಡಿಗಳಂತೆ ಬಿಂಬಿಸಬಾರದು" ಎಂದು ಆಗ್ರಹಿಸಿದೆ.
​ಈ ಕುರಿತು ಶುಕ್ರವಾರ ತಹಸೀಲ್ದಾ‌ರ್ ನಾಗಯ್ಯ ಹಿರೇಮಠ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಕೃಷ್ಣ ಬೈರೇಗೌಡ ಅವರಿಗೆ ಸಂಘಟನೆಯ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.

​​ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ‘ನಮ್ಮ ಕರ್ನಾಟಕ ಸೇನೆ’ ತಾಲೂಕು ಅಧ್ಯಕ್ಷ ಸುನೀಲ್ ಗುತ್ತೇದಾರ, "ಬಸವರಾಜ್ ಪಡುಕೋಟೆಯವರ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸದೆ, ಕೇವಲ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಸುದ್ದಿಗಳನ್ನು ನೋಡಿ ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿರುವುದು ಸರಿಯಲ್ಲ. ಘಟನೆಯ ಸಂದರ್ಭದಲ್ಲಿ ಕೆಲ ಅಧಿಕಾರಿಗಳು ಪಡುಕೋಟೆ ಅವರ ಜೊತೆ ಅಸಭ್ಯವಾಗಿ ಹಾಗೂ ನಿಂದನಾತ್ಮಕವಾಗಿ ಮಾತನಾಡಿದ್ದರಿಂದ ಕೋಪಗೊಂಡ ಕಾರ್ಯಕರ್ತರು ಮತ್ತು ವ್ಯಾಪಾರಿಗಳು ಅನುಚಿತವಾಗಿ ನಡೆದುಕೊಂಡಿದ್ದಾರೆ," ಎಂದು ಸ್ಪಷ್ಟಪಡಿಸಿದರು.

​"ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಕನ್ನಡದ ಬಾವುಟ, ದೇವಸ್ಥಾನ ಅಥವಾ ಧ್ವಜಸ್ತಂಭ ತೆರವುಗೊಳಿಸುವ ಕಾರ್ಯಾಚರಣೆಗೂ ಮುನ್ನ ಸ್ಥಳೀಯ ಕನ್ನಡಪರ ಸಂಘಟನೆಗಳ ಜೊತೆ ಸೌಹಾರ್ದಯುತ ಚರ್ಚೆ ನಡೆಸಿದ್ದರೆ ಈ ಅಹಿತಕರ ಘಟನೆ ನಡೆಯುತ್ತಿರಲಿಲ್ಲ. ನಾವು ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಆದರೆ, ನಡೆದ ಘಟನೆಗೆ ಕೇವಲ ಹೋರಾಟಗಾರರು ಮತ್ತು ವ್ಯಾಪಾರಿಗಳು ಮಾತ್ರವಲ್ಲದೆ ಅಧಿಕಾರಿಗಳ ನಡವಳಿಕೆಯೂ ಕಾರಣ," ಎಂದು ಹೇಳಿದರು.

​ವಾಡಿ ವಲಯ ಅಧ್ಯಕ್ಷ ಸಿದ್ದು ಪೂಜಾರಿ ಮಾತನಾಡಿ, "ಕಳೆದ 30 ವರ್ಷಗಳಿಂದ ಕನ್ನಡ ನಾಡು, ನುಡಿ ಮತ್ತು ಗಡಿ ವಿಚಾರವಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿರುವ ಬಸವರಾಜ್ ಪಡುಕೋಟೆ ಅವರನ್ನು ಕನ್ನಡಪರ ಹೋರಾಟಗಾರರೆಂದು ಪರಿಗಣಿಸಬೇಕು. ಅವರ ಮೇಲೆ ದೊಡ್ಡ ಮಟ್ಟದ ಕಠಿಣ ಕಾನೂನು ಕ್ರಮ ಕೈಗೊಳ್ಳದೆ, ಮಾನವೀಯತೆಯ ದೃಷ್ಟಿಯಿಂದ ಸಣ್ಣ ಪ್ರಮಾಣದ ಶಿಕ್ಷೆ ನೀಡಿ, ಕ್ಷಮಿಸಿ ಬಿಡುಗಡೆ ಮಾಡಬೇಕು," ಎಂದು ಸರ್ಕಾರಕ್ಕೆ ಮನವಿ ಮಾಡಿದರು.

​ಮನವಿ ಸಲ್ಲಿಕೆಯ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ರಾಹುಲ್ ಸಿಂದಗಿ, ಸಂಘಟನಾ ಸಂಚಾಲಕ ಅಂಬರೀಷ ಮಾಳಗಿ, ಪ್ರಭು ಹಲಕರ್ಟಿ, ನಾಗರಾಜ ಬನಸೋಡೆ, ಪ್ರಭಾಕರ ಪೂಜಾರಿ, ಶಶಿಸಾಗರ, ರವೀಂದ್ರ, ಜೈ ಭೀಮ ವಾಲೇಕ‌ರ್, ಬಸವರಾಜ ಗುತ್ತೇದಾರ, ಪ್ರೇಮ್ ಜೋಶಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು