ಚಿತ್ತಾಪುರ: ಪಟ್ಟಣದ ಆರಾಧ್ಯ ದೈವ ಶ್ರೀ ಮರಗಮ್ಮ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವವು ಸಕಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ, ಸಾವಿರಾರು ಭಕ್ತ ಸಾಗರದ ಮಧ್ಯೆ ಮಂಗಳವಾರ ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾ-ಭಕ್ತಿಯಿಂದ ಸಂಜೆ ಅದ್ಧೂರಿಯಾಗಿ ಜರುಗಿತು.
ಪಟ್ಟಣದ ಹೋಳಿಕಟ್ಟಾದ ದೇಶಮುಖ ಹಾಗೂ ರೇಷ್ಮೆ ಮನೆಯಿಂದ ದೇವಿಯ ಉತ್ಸವ ಮೂರ್ತಿಗಳಿಗೆ (ಗೊಂಬೆಗಳಿಗೆ) ಬಟ್ಟೆ ತರುವ ಮೂಲಕ ಜಾತ್ರಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ನಂತರ ಮುಕುಂದ ಬಡಿಗೇರ ಅವರ ನಿವಾಸದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಧಾರ್ಮಿಕ ವಿಧಿ-ವಿಧಾನಗಳ ಪ್ರಕಾರ ಗೊಂಬೆಗಳಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಈ ವೇಳೆ ನೂರಾರು ಮಹಿಳೆಯರು ಹಾಗೂ ಸಾರ್ವಜನಿಕರು ಭಾಗವಹಿಸಿ ದೇವಿಗೆ ಪೂಜೆ ಸಲ್ಲಿಸಿ ಪುನೀತರಾದರು.
ಸಂಜೆ 6 ಗಂಟೆಗೆ ಮುಕುಂದ ಬಡಿಗೇರ ಅವರ ಮನೆಯಿಂದ ಶ್ರೀ ಮರಗಮ್ಮ ದೇವಿಯ ಮೂರ್ತಿಗಳ ಭವ್ಯ ಮೆರವಣಿಗೆ ಪ್ರಾರಂಭವಾಯಿತು. ಮೆರವಣಿಗೆಯು ಹನುಮಾನ ಮಂದಿರ ರಸ್ತೆ, ಶಿಶು ವಿಹಾರ ಶಾಲೆಯ ರಸ್ತೆಯ ಮೂಲಕ ಸಾಗಿ ಅಂತಿಮವಾಗಿ ಮರಗಮ್ಮ ದೇವಿ ದೇವಸ್ಥಾನವನ್ನು ತಲುಪಿತು. ಮೆರವಣಿಗೆಯದ್ದಕ್ಕೂ ಮಂಗಳವಾದ್ಯಗಳು, ಭಕ್ತಾದಿಗಳ ಜಯಘೋಷ ಹಾಗೂ ಸಂಭ್ರಮ ಮುಗಿಲು ಮುಟ್ಟಿತ್ತು.
ಮರಗಮ್ಮ ದೇವಿ ಮೆರವಣಿಗೆಯ ಪ್ರಮುಖ ಆಕರ್ಷಣೆ ಎಂದರೆ ಭಕ್ತರು ದೇವಿಯ ಗೊಂಬೆಗಳ ಮೇಲೆ ಕೋಳಿಗಳನ್ನು ಎಸೆಯುವ ವಿಶಿಷ್ಟ ಹರಕೆ ಸಂಪ್ರದಾಯ. ಮೆರವಣಿಗೆಯುದ್ದಕ್ಕೂ ನೂರಾರು ಭಕ್ತರು ತಮಗಿಷ್ಟವಾದ ಬೇಡಿಕೆಗಳು ಈಡೇರಲಿ ಎಂದು ದೇವಿಗೆ ಕೋಳಿಗಳನ್ನು ಎಸೆದು ಹರಕೆ ತೀರಿಸಿದರು. ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಗಟ್ಟಿಯಾದ ನಂಬಿಕೆ ಹಾಗೂ ಸಾಂಪ್ರದಾಯಿಕ ಆಚರಣೆಯಾಗಿದೆ.
ಮೆರವಣಿಗೆಯಲ್ಲಿ ಗೊಂಬೆಗಳ ಮೇಲೆ ಎಸೆದ ಕೋಳಿಗಳನ್ನು ಹಿಡಿಯಲು ಯುವಕರು 'ನಾ ಮುಂದು ತಾ ಮುಂದು' ಎಂದು ಪೈಪೋಟಿಗೆ ಬಿದ್ದು ಮುಗಿಬಿದ್ದರು. ಒಬ್ಬರ ಕೈಗೆ ಸಿಕ್ಕರೆ ಕೋಳಿ ಸುಕ್ಷೇಮವಾಗಿ ಉಳಿಯುತ್ತದೆ, ಅದೇ ಇಬ್ಬರು ಅಥವಾ ಮೂವರ ನಡುವೆ ಸಿಲುಕಿದಾಗ ಕೋಳಿ ಹಿಂಸೆಗೊಳಗಾಗಿ ದೃಶ್ಯ ನೋಡುಗರಿಗೆ ಕೊಂಚ ನೋವನ್ನುಂಟುಮಾಡಿದರೂ, ಭಕ್ತಾದಿಗಳು ದೇವಿಯ ದರ್ಶನ ಪಡೆದು ಭಾವಪರವಶರಾದರು.
ಈ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಜಾತಿ, ಜನಾಂಗ, ಧರ್ಮದ ಭೇದಭಾವವಿಲ್ಲದೆ ಸರ್ವ ಧರ್ಮೀಯರೂ ಶ್ರದ್ಧೆಯಿಂದ ಭಾಗವಹಿಸುವುದು ಇಲ್ಲಿನ ವಿಶೇಷ. ಮಹಿಳೆಯರು, ಯುವಕರು, ರಾಜಕೀಯ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಜಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಸಹಸ್ರಾರು ಸಂಖ್ಯೆಯಲ್ಲಿ ಜನಸ್ತೋಮ ಹರಿದುಬಂದಿದ್ದರೂ ಸಹ ಯಾವುದೇ ಜಗಳ, ಅಹಿತಕರ ಘಟನೆಗಳು ಅಥವಾ ಅನಾಹುತಗಳು ನಡೆಯದೆ ಶಾಂತಿಯುತವಾಗಿ ಜಾತ್ರೆ ಮುಕ್ತಾಯಗೊಂಡಿತು. " ಮರಗಮ್ಮ ದೇವಿ ಜಾತ್ರೆಗೆ ಸೇರುವಷ್ಟು ಜನಸ್ತೋಮ ಮತ್ತಾವ ಜಾತ್ರೆಗೂ ಸೇರುವುದಿಲ್ಲ" ಎಂಬುದು ಇಲ್ಲಿನ ಸ್ಥಳೀಯರ ಅಭಿಪ್ರಾಯವಾಗಿದೆ.
ಜಾತ್ರಾ ಮಹೋತ್ಸವ ಹಾಗೂ ಮೆರವಣಿಗೆಯ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಸಂಚಾರ ವ್ಯವಸ್ಥೆಗೆ ಅಡಚಣೆಯಾಗದಂತೆ ಪೊಲೀಸ್ ಇಲಾಖೆಯು ಸೂಕ್ತ ಹಾಗೂ ಕಟ್ಟುನಿಟ್ಟಿನ ಬಂದೋಬಸ್ತ್ ಏರ್ಪಡಿಸಿತ್ತು.