ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ, ಅಸ್ಪೃಶ್ಯತೆ ಆಚರಣೆ ಖಂಡಿಸಿ ಬೃಹತ್ ಪ್ರತಿಭಟನೆ.

ಸಂವಿಧಾನ ಉಲ್ಲಂಘನೆ ಮತ್ತು ಜಾತಿವಾದಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ.

ತಹಸೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಕೆ.

ಚಿತ್ತಾಪುರ: ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಆ. 8 ರಂದು ಸಾರ್ವಜನಿಕ ಸಭೆ ನಡೆಸಿದ ನಂತರ, ಆ ಮೈದಾನದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರೇರಿತ ಸಂಘಟನೆಗಳು 'ಶುದೀಕರಣ' ಕಾರ್ಯಕ್ರಮ ನಡೆಸಿರುವುದನ್ನು ಖಂಡಿಸಿ ಚಿತ್ತಾಪುರ-ವಾಡಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಮಂಗಳವಾರ ಲಾಡ್ಜಿಂಗ್ ಕ್ರಾಸ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ತಾಲೂಕು ಮತ್ತು ವಾಡಿ ಬ್ಲಾಕ್ ಕಾಂಗ್ರೆಸ್ ಪಕ್ಷವು ಈ ಕೃತ್ಯವನ್ನು ಬಲವಾಗಿ ಖಂಡಿಸಿದ್ದು, ಇದು ಸಂವಿಧಾನದ ಉಲ್ಲಂಘನೆ, ದೇಶದ್ರೋಹ ಹಾಗೂ ಅಸ್ಪೃಶ್ಯತೆಯ ಆಚರಣೆಯಾಗಿದೆ ಎಂದು ಕಿಡಿಕಾರಿದೆ.

ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹಾಗೂ ಬ್ಲಾಕ್ ಅಧ್ಯಕ್ಷ ಎಮ್.ಡಿ. ರಫೀಕ್ ಮಾತನಾಡಿ, "ರಾಷ್ಟ್ರೀಯ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ನಾಯಕರಿಗೆ 'ಶುದ್ಧೀಕರಣ'ದ ಹೆಸರಿನಲ್ಲಿ ಅವಮಾನ ಮಾಡಿರುವುದು ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅವಮಾನವಲ್ಲ, ಇಡೀ ದಲಿತ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ ಮಾತನಾಡಿ, "ದಲಿತ ಸಮುದಾಯದ ಮಹಾನ್ ನಾಯಕ, ಬುದ್ಧ, ಬಸವ, ಅಂಬೇಡ್ಕರ್ ತತ್ವ-ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟು ಸಾಮಾಜಿಕ ನ್ಯಾಯಕ್ಕಾಗಿ ಹಗಲಿರುಳು ಹೋರಾಡುತ್ತಿರುವ ಖರ್ಗೆಯವರಿಗೆ ಅವಮಾನ ಮಾಡಿ, ಅಸ್ಪೃಶ್ಯತೆ ಆಚರಿಸಿರುವುದು ದೇಶದ ನಾಗರಿಕ ಸಮಾಜವು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡಿದೆ. ಕೇಂದ್ರ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು" ಎಂದು ಆಗ್ರಹಿಸಿದರು.

ಮುಖಂಡರಾದ ಸುರೇಶ್ ಮಂಗನ್ ಹಾಗೂ ಮಲ್ಲಿಕಾರ್ಜುನ ಬೊಮ್ಮನಹಳ್ಳಿ ಮಾತನಾಡಿ, "ಸಂವಿಧಾನದ ಅನುಚ್ಛೇದ 17ರ ಪ್ರಕಾರ ದೇಶದಲ್ಲಿ ಅಸ್ಪೃಶ್ಯತೆ ಸಂಪೂರ್ಣ ನಿಷೇಧವಿದೆ. ಆದಾಗ್ಯೂ ಜಾತಿವಾದಿ, ಮನುವಾದಿ ಜನರು ಶುದ್ಧೀಕರಣ ಮಾಡುವ ಮೂಲಕ 'ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ-1955' ಹಾಗೂ 'ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ-1989'ರ ಸ್ಪಷ್ಟ ಉಲ್ಲಂಘನೆ ಮಾಡಿದ್ದಾರೆ. ಈ ಕೃತ್ಯ ಎಸಗಿದವರ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಬೇಕು" ಎಂದರು.

ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಖ್ತಾರ್ ಪಟೇಲ್ ಮಾತನಾಡಿ, ಇಂತಹ ಶುದ್ಧೀಕರಣ ಕಾರ್ಯಕ್ರಮಗಳನ್ನು ದೇಶಾದ್ಯಂತ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯ ನಂತರ, ರಾಷ್ಟ್ರಪತಿಯವರ ಹೆಸರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಹಸ್ತಾಂತರಿಸಲಾಯಿತು. ಪ್ರತಿಭಟನೆ ವೇಳೆಯಲ್ಲಿ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪ್ರತಿಭಟನೆಯಲ್ಲಿ ಮುಖಂಡರಾದ ಚಂದು ಚವ್ಹಾಣ್, ರಮೇಶ್ ಕಟಕೆ, ರಾಜು ಕೋಲಕುರ, ನಾಗರೆಡ್ಡಿ ಪಾಟೀಲ ಕುಡಕಿ, ಶ್ರೀಮಂತ ಸರಡಗಿ, ಚನ್ನಬಸವ ಸರಡಗಿ, ಬಾಬುರಾವ್ ಕೋಲೆ, ವಿಜಯಕುಮಾರ್ ಬಿಲ್ಲಾವಿ, ಗಂಗಾಧರ ಕಲ್ಲಮಠ, ಶರಣು ಗುತ್ತೇದಾರ, ಶ್ರೀಶೈಲ ನಾವಿ, ದೇವಿಂದ್ರನಾಥ ಹೊಸಮನಿ, ಸುನೀಲ್ ದೊಡ್ಡಮನಿ, ದೇವಿಂದ್ರ ಅರಣಕಲ್, ಶಿವಕುಮಾರ ಯಾಗಾಪುರ, ಚಂದ್ರಶೇಖರ ಕಾಶಿ, ಹಣಮಂತ ಸಂಕನೂರ, ಜಗಣ್ಣಗೌಡ ರಾಮತೀರ್ಥ, ವೀರುಪಾಕ್ಷಪ್ಪ ಗಡ್ಡದ್, ಮಲ್ಲಪ್ಪ ಹೊಸಮನಿ, ಮಲ್ಲಿಕಾರ್ಜುನ ಕಾಳಗಿ, ರಾಮಲಿಂಗ ಬಾನರ್, ಸಿದ್ಧುಗೌಡ ಅಫಜಲಪುರ, ಭೀಮಸಿಂಗ್ ಚವ್ಹಾಣ, ಶಿವಕುಮಾರ ಸುಲ್ತಾನಪುರ, ಜಗದೀಶ ಚವ್ಹಾಣ, ಯಲ್ಲಾಲಿಂಗ ಪೂಜಾರಿ, ಶಿವಕಾಂತ ಬೆಣ್ಣೂರಕರ್, ದೇವಿಂದ್ರ ಯಾಬಾಳ, ಬಸವರಾಜ ಪೂಜಾರಿ, ಮಲ್ಲಿಕಾರ್ಜುನ ಬೆಣ್ಣೂರಕರ್, ರಸೂಲ್ ಮುಸ್ತಫಾ, ಮಲ್ಲಿಕಾರ್ಜುನ ಮುಡಬೂಳಕರ್, ಶೇಖ್ ಬಬ್ಲು, ಸಂಜಯ್ ಬುಳಕರ್, ಬಾಬು ಕಾಶಿ, ಸಂತೋಷ ಪೂಜಾರಿ, ದಶರಥ್ ಭಂಡಿ, ಮಾಣಿಕ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು