ಚಿತ್ತಾಪುರ 'ಬರಪೀಡಿತ ಪ್ರದೇಶ'ವೆಂದು ಘೋಷಿಸಲು ಆಗ್ರಹಿಸಿ ಮನವಿ.

ಚಿತ್ತಾಪುರ: ತಾಲೂಕಿನಲ್ಲಿ ಈ ಬಾರಿ ತೀವ್ರ ಮಳೆ ಅಭಾವ ಉಂಟಾಗಿದ್ದು, ರೈತರು ಕಂಗಾಲಾಗಿದ್ದಾರೆ. ಆದ್ದರಿಂದ ಚಿತ್ತಾಪುರ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ವತಿಯಿಂದ ಕಂದಾಯ ಮಂತ್ರಿಗಳು ಹಾಗೂ ಕರ್ನಾಟಕ ಸರ್ಕಾರಕ್ಕೆ ತಹಸೀಲ್ದಾರ ನಾಗಯ್ಯ ಹಿರೇಮಠ ಮುಖಾಂತರ ಮನವಿ ಸಲ್ಲಿಸಲಾಯಿತು.

ತಾಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಈ ವರ್ಷ ಮಳೆ ಕೈಕೊಟ್ಟ ಕಾರಣ ರೈತರು ತೀವ್ರ ಆರ್ಥಿಕ ಹಾಗೂ ಬೆಳೆ ನಷ್ಟದ ಸಂಕಷ್ಟದಲ್ಲಿದ್ದಾರೆ. ಇತ್ತೀಚೆಗೆ ಸರ್ಕಾರವು 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದರೂ, ಚಿತ್ತಾಪುರ ತಾಲೂಕನ್ನು ಕೈಬಿಟ್ಟಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ರೈತ ಸಂಘಟನೆಯ ತಾಲೂಕಾಧ್ಯಕ್ಷ ಮೌನೇಶ ಕರದಾಳಕರ್ ಮಾತನಾಡಿದ ಸರ್ಕಾರದ ಮುಂದೆ ಈ ಕೆಳಗಿನ ಪ್ರಮುಖ ಹಕ್ಕುಒತ್ತಾಯಗಳನ್ನು ಇಟ್ಟಿದೆ ತಕ್ಷಣವೇ 'ಬರಪೀಡಿತ ತಾಲೂಕು' ಎಂದು ಘೋಷಿಸಬೇಕು. ಕಷ್ಟದಲ್ಲಿರುವ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂಪಾಯಿ ಪರಿಹಾರ ಒದಗಿಸಬೇಕು. ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಮುಂಗಾರು ಬೆಳೆ ಕಳೆದುಕೊಂಡಿರುವ ರೈತರಿಗೆ ಹಿಂಗಾರು ಬೆಳೆಗೆ ಅಗತ್ಯವಿರುವ ಬಿತ್ತನೆ ಬೀಜಗಳನ್ನು ಉಚಿತವಾಗಿ ಪೂರೈಸಬೇಕು.ಹಿಂಗಾರು ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಇದುವರೆಗೆ ಬಾರದೇ ಇರುವ ಬೆಳೆ ವಿಮೆ (ಇನ್ಶೂರೆನ್ಸ್) ಹಣವನ್ನು ಎಲ್ಲಾ ರೈತರಿಗೆ ತಕ್ಷಣವೇ ಬಿಡುಗಡೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ರೈತ ಸಂಘದ ಗೌರವಾಧ್ಯಕ್ಷ  ಶಾಂತಕುಮಾರ ಮಳಖೇಡ ನಗರ ಅಧ್ಯಕ್ಷ ವಿಠ್ಠಲ ಕಟ್ಟಿಮನಿ, ಶಿವರಾಮ ಚವ್ಹಾಣ, ತುಕಾರಾಮ ನಾಯಕ, ಪ್ರಕಾಶ ಸಲಗರ, ಮೋಹನ ಕುಮಾರ ಬೆಂಜಿ, ನರಹರಿ ಕುಲ್ಕರ್ಣಿ, ಶ್ರೀಕಾಂತ ಹೊಸಳ್ಳಿಕರ್, ಮಂಜುನಾಥ ಕಾಶಿ, ಮಹ್ಮದ ಅಲಿ, ಯೂಸುಫ್ ಖಾನ್, ಸೇರಿದಂತೆ ಸಂಘಟನೆಯ ಪ್ರಮುಖ ಪದಾಧಿಕಾರಿಗಳು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು