ನಾಗಾವಿ ನಿರ್ಗತಿಕ ಕುಟುಂಬಗಳಿಗೆ ಸಮಯಾವಕಾಶ: ತಹಶೀಲ್ದಾರ್ ಭರವಸೆಗೆ ಸಮ್ಮತಿಸಿದ ಸಂತ್ರಸ್ತರು

ಚಿತ್ತಾಪುರ: ತಾಲೂಕಿನ ಐತಿಹಾಸಿಕ ಸುಕ್ಷೇತ್ರ ನಾಗಾವಿ ಪಾರಂಪರಿಕ ಪ್ರದೇಶದ ನಂದಿ ಬಾವಿ ಪಕ್ಕದಲ್ಲಿ ಕಳೆದ ೨೧ ವರ್ಷಗಳಿಂದ ವಾಸಿಸುತ್ತಿದ್ದ ಬಡ ಹಾಗೂ ನಿರ್ಗತಿಕ ೫ ಕುಟುಂಬಗಳ ವಸತಿ ತೆರವುಗೊಳಿಸುವ ಚರ್ಚಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ತಾಲೂಕು ಆಡಳಿತವು ವಾರಗಳ ಸಮಯಾವಕಾಶ ನೀಡುವ ಜೊತೆಗೆ ಪುನರ್ವಸತಿಯ ಭರವಸೆ ನೀಡಿದೆ.

ರಾಜ್ಯ ಪುರಾತತ್ವ ಇಲಾಖೆಯ ಸೂಚನೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಇಲ್ಲಿನ ೫ ಕುಟುಂಬಗಳನ್ನು ತೆರವುಗೊಳಿಸಲು ತಾಲೂಕು ಆಡಳಿತ ಸೂಚಿಸಿತ್ತು. ಕೇವಲ ೩ ದಿನಗಳ ಒಳಗೆ ಮನೆ ಖಾಲಿ ಮಾಡಲು ನೀಡಿದ್ದ ಆದೇಶದಿಂದಾಗಿ ಇಲ್ಲಿನ ದೇವಕಿ ದೇವಪ್ಪ, ಸಾಯಮ್ಮ ದೇವಯ್ಯ, ಪಾರ್ವತಿ ರಾಜು, ಪದ್ಮ ನರಸಪ್ಪ ಹಾಗೂ ಶಿವಪ್ಪ ಮಲ್ಲಪ್ಪ ಅವರ ಕುಟುಂಬಗಳು ಸೇರಿದಂತೆ ಒಟ್ಟು ೧೮ ಸದಸ್ಯರು ಆಸರೆಯಿಲ್ಲದೆ ಬೀದಿಗೆ ಬೀಳುವ ಆತಂಕ ಎದುರಾಗಿತ್ತು.

ಈ ಗಂಭೀರ ವಿಷಯ ತಿಳಿದ ಬಿಜೆಪಿ ಹಿರಿಯ ಮುಖಂಡ ಅಯ್ಯಪ್ಪ ರಾಮತೀರ್ಥ ಅವರು ಕಳೆದ ಆಗಸ್ಟ್ ೨೧ರಂದು ತಹಶೀಲ್ದಾರ್ ನಾಗಯ್ಯ ಸ್ವಾಮಿ ಹಿರೇಮಠ ಅವರನ್ನು ಭೇಟಿಯಾಗಿ ಮಾನವೀಯ ಆಧಾರದ ಮೇಲೆ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಮನವಿ ಸಲ್ಲಿಸಿದ್ದರು. ಜೊತೆಗೆ ಜಿಲ್ಲಾಧಿಕಾರಿ ಕಚೇರಿ ಹಾಗೂ ಪುರಾತತ್ವ ಇಲಾಖೆಯ ಉಪನಿರ್ದೇಶಕರ ಗಮನಕ್ಕೂ ಈ ವಿಷಯ ತಂದಿದ್ದರು.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ತಹಶೀಲ್ದಾರರು ಆಗಸ್ಟ್ ೨೭ರಂದು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿದರು. ಅಯ್ಯಪ್ಪ ರಾಮತೀರ್ಥ ಅವರ ಸಮ್ಮುಖದಲ್ಲಿಯೇ ಸಂತ್ರಸ್ತ ಕುಟುಂಬಗಳ ಮನವಿ ಆಲಿಸಿದ ತಹಶೀಲ್ದಾರರು, ಮನೆ ತೆರವಿಗೆ ಮತ್ತೊಂದು ವಾರ ಹೆಚ್ಚುವರಿ ಸಮಯಾವಕಾಶ ನೀಡುವುದಾಗಿ ಪ್ರಕಟಿಸಿದರು. ಅಲ್ಲದೆ ಮುಂಬರುವ ದಿನಗಳಲ್ಲಿ ಸರ್ಕಾರದ ವಸತಿ ಯೋಜನೆಯಡಿ ಎಲ್ಲರಿಗೂ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದರು. ಇದರಿಂದ ಸಮಾಧಾನಗೊಂಡ ಕುಟುಂಬಗಳು ಬೇರೆಡೆ ಮನೆ ಸ್ಥಳಾಂತರಿಸಲು ಸಮ್ಮತಿಸಿದವು.

"ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ವಿವಾದಾತ್ಮಕ ಪ್ರಕರಣವು ಎಲ್ಲರ ಸಮ್ಮುಖದಲ್ಲಿ ಸೌಹಾರ್ದಯುತವಾಗಿ ಇತ್ಯರ್ಥಗೊಂಡಿರುವುದು ಸಂತಸ ತಂದಿದೆ. ತಾಲೂಕು ಆಡಳಿತವು ಕೊಟ್ಟ ಮಾತಿನಂತೆ ಶೀಘ್ರವೇ ಈ ನಿರ್ಗತಿಕ ಕುಟುಂಬಗಳಿಗೆ ಸರ್ಕಾರದ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡಿ ಆಸರೆಯಾಗಬೇಕು."

ಅಯ್ಯಪ್ಪ ರಾಮತೀರ್ಥ, ಹಿರಿಯ ಬಿಜೆಪಿ ಮುಖಂಡರು, ಚಿತ್ತಾಪುರ

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم