ಕಲಬುರಗಿ: ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಜನರಿಗೆ ಬ್ಯಾಂಕಿಂಗ್ ಸೇವೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಕಲ್ಯಾಣ ಯೋಜನೆಗಳು ಹಾಗೂ ಸಬ್ಸಿಡಿ ಸಾಲ ಯೋಜನೆಗಳ ಕುರಿತು ಅರಿವು ಮೂಡಿಸಿ ಸೇವೆ ಸಲ್ಲಿಸಿದ ಚಿತ್ತಾಪುರದ ಆರ್ಥಿಕ ಸಾಕ್ಷರಕ ಶಿವರುದ್ರಪ್ಪ ಎಂ. ಕಟ್ಟಿಮನಿ ನೀಲಹಳ್ಳಿ ಅವರಿಗೆ ‘ಆರ್ಥಿಕ ಸಾಕ್ಷರತಾ ಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ನಗರದ ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಲಬುರಗಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮದರ ಸ್ವಯಂ ಸೇವಾ ಗ್ರಾಮೀಣಾಭಿವೃದ್ಧಿ ಸಂಸ್ಥೆ, ರೋಣ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಡಿಯಲ್ಲಿ ಆರ್ಥಿಕ ಸಾಕ್ಷರಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿವರುದ್ರಪ್ಪ ಕಟ್ಟಿಮನಿ ಅವರು, ಗ್ರಾಮೀಣ ಜನರಿಗೆ ಬ್ಯಾಂಕ್‌ಗಳ ವಿವಿಧ ಯೋಜನೆಗಳು, ಸರ್ಕಾರದ ಜನಪರ ಯೋಜನೆಗಳು, ಸಬ್ಸಿಡಿ ಆಧಾರಿತ ಸಾಲ ಸೌಲಭ್ಯಗಳು ಹಾಗೂ ಹಣಕಾಸು ನಿರ್ವಹಣೆ ಕುರಿತು ಮಾಹಿತಿ ನೀಡುವ ಮೂಲಕ ಜನರಲ್ಲಿ ಆರ್ಥಿಕ ಅರಿವು ಮೂಡಿಸುತ್ತಿದ್ದಾರೆ.
ಗ್ರಾಮೀಣ ಮತ್ತು ಹಿಂದುಳಿದ ವರ್ಗಗಳ ಜನರು ಸರ್ಕಾರ ಹಾಗೂ ಬ್ಯಾಂಕ್‌ಗಳ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿರುವ ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಶಿವರುದ್ರಪ್ಪ ಕಟ್ಟಿಮನಿಗೆ ಗಣ್ಯರು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದರು.