ದೇಶಭಕ್ತಿ ಗೀತಾಗಾಯನ ಸ್ಪರ್ಧೆ: ಜಿಲ್ಲಾ ಮಟ್ಟಕ್ಕೆ ಆಯ್ಕೆ

ಚಿತ್ತಾಪುರ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಸ್ಥಳೀಯ ಸಂಸ್ಥೆ ಚಿತ್ತಾಪುರ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ದೇಶಭಕ್ತಿ ಗೀತಾಗಾಯನ ಸ್ಪರ್ಧೆಯಲ್ಲಿ ಡಿ.ಎ.ವಿ. ಓರಿಯಂಟ್ ಜ್ಞಾನ ಮಂದಿರ (ದಿಗ್ಗಾಂವ್) ಶಾಲೆಯ ನಾಲ್ಕು ತಂಡಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿವೆ.

ಆಗಸ್ಟ್ 20ರಂದು ಭಂಕೂರನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಈ ಸ್ಪರ್ಧೆಯಲ್ಲಿ, ಶಾಲೆಯ 'ಕಬ್ಸ್', 'ಬುಲ್‌ಬುಲ್ಸ್', 'ಸ್ಕೌಟ್ಸ್' ಹಾಗೂ 'ಗೈಡ್ಸ್' ಎಂಬ ನಾಲ್ಕೂ ವಿಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿ ಅಭೂತಪೂರ್ವ ಸಾಧನೆ ತೋರಿದ್ದಾರೆ. ನಾಲ್ಕೂ ವಿಭಾಗಗಳಲ್ಲೂ ಪ್ರಥಮ ಸ್ಥಾನ ಗಳಿಸುವ ಮೂಲಕ ಶಾಲೆಗೆ ಅಪಾರ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿಗಳ ಈ ಅದ್ಭುತ ಸಾಧನೆಗೆ ಅದಾನಿ ಸಿಮೆಂಟ್ಸ್ ಚಿತ್ತಾಪುರ ಘಟಕದ ಎಲ್‌ಎಮ್‌ಸಿ ಚೇರ್ಮನ್ ಅಜಯ್ ಶರ್ಮಾ, ಎಲ್‌ಎಮ್‌ಸಿ ಸದಸ್ಯ ಹಾಗೂ ಮಾನವ ಸಂಪನ್ಮೂಲ ಮುಖ್ಯಸ್ಥ ರೋಹಿತ್ ಜೋಶಿ, ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಜಿ. ಜ್ಯೋತಿ ಹಾಗೂ ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿ, ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಕರಾದ ಶ್ರೀ ಶ್ರೀಶೈಲ ವಿಶ್ವಕರ್ಮ (ಸೇಡಂ) ಹಾಗೂ ಸ್ಕೌಟ್ ಮಾಸ್ಟರ್ ಶ್ರೀ ನಾಗಭೂಷಣ ಅವರು ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿಗಳ ಈ ಯಶಸ್ಸು ಶಾಲೆಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಿದೆ ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು