ಚಿತ್ತಾಪುರ: ರಾಜ್ಯ ಸರ್ಕಾರವು ಇತ್ತೀಚೆಗೆ ಬಿಡುಗಡೆ ಮಾಡಿರುವ 101 ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಚಿತ್ತಾಪುರವನ್ನು ಕೈಬಿಟ್ಟಿರುವುದನ್ನು ಖಂಡಿಸಿ, ಸೆಪ್ಟೆಂಬರ್ 3 ರಂದು ಬಿಜೆಪಿ ತಾಲೂಕು ಮಂಡಲದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವಿಂದ್ರ ಸಜ್ಜನಶೆಟ್ಟಿ ತಿಳಿಸಿದರು.
ಪಟ್ಟಣದ ಬಿಜೆಪಿ ತಾಲೂಕು ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು ತಾಲೂಕಿನ ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದು, ವಾಸ್ತವ ಪರಿಸ್ಥಿತಿಯ ಸರಿಯಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಕೂಡಲೇ ಅಧಿಕಾರಿಗಳು ತಾಲೂಕಿನಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಿ, ಚಿತ್ತಾಪುರವನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು. ಭೀಕರ ಬರದಿಂದ ಬೆಳೆ ಕಳೆದುಕೊಂಡಿರುವ ತಾಲೂಕಿನ ರೈತರಿಗೆ ಸರ್ಕಾರ ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂಪಾಯಿ ಪರಿಹಾರ ಧನ ನೀಡಬೇಕು.
ರೈತರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲು ಸೆ. 3 ರಂದು ಪಟ್ಟಣದ ಮಾರುಕಟ್ಟೆಯಿಂದ ಲಾಡ್ಜಿಂಗ್ ಕ್ರಾಸ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಇದು ರೈತರ ಬದುಕಿನ ಹೋರಾಟವಾಗಿದ್ದು, ತಾಲೂಕಿನ ರೈತರು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.
ಬಿಜೆಪಿ ಮುಖಂಡ ರಮೇಶ್ ಬೋಮ್ಮನಳ್ಳಿ ಮಾತನಾಡಿ ಮುಂಗಾರು ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರಿಗೆ ಹಿಂಗಾರು ಬೆಳೆಗಾಗಿ ಅಗತ್ಯವಿರುವ ಬಿತ್ತನೆ ಬೀಜಗಳನ್ನು ಉಚಿತವಾಗಿ ಪೂರೈಸಬೇಕು. ಜೊತೆಗೆ, ಇದುವರೆಗೆ ಪಾವತಿಯಾಗದೇ ಇರುವ ಬೆಳೆ ವಿಮೆ ಹಣವನ್ನು ಅರ್ಹ ರೈತರಿಗೆ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿಯ ಪ್ರಮುಖ ಮುಖಂಡರಾದ ನಾಗರಾಜ ಭಂಕಲಗಿ, ಆನಂದ ಪಾಟೀಲ ನರಿಬೋಳ, ಸುರೇಶ್ ಬೆನಕನಳ್ಳಿ, ಮಲ್ಲಿಕಾರ್ಜುನ ಮಾಲಗತ್ತಿ, ದಶರಥ್ ದೂಡ್ಡಮನಿ, ಶ್ರೀಶೈಲ ಪಾಟೀಲ್, ಸಂಗಮೇಶ ಪಾಟೀಲ್, ರಮೇಶ್ ಕಾಳನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.