ಚಿತ್ತಾಪುರ: ಕಾಳಗಿ ತಾಲೂಕಿನ ಹಿರಿಯ ಸಿವಿಲ್ ವಿಭಾಗದ ಪ್ರಕರಣಗಳ ನ್ಯಾಯವ್ಯಾಪ್ತಿಯನ್ನು ಬದಲಾಯಿಸಿ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಮರುಪರಿಶೀಲಿಸಿ, ಚಿತ್ತಾಪುರದ ಮೂಲ ಹಿರಿಯ ಸಿವಿಲ್ ನ್ಯಾಯವ್ಯಾಪ್ತಿಯನ್ನು ತಕ್ಷಣವೇ ಪುನಃಸ್ಥಾಪಿಸಬೇಕು ಎಂದು ಆಗ್ರಹಿಸಿ ಚಿತ್ತಾಪುರ ವಕೀಲರ ಸಂಘವು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರ ಮೂಲಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿತು.
ಈ ವೇಳೆ ಮಾತನಾಡಿದ ಸಂಘದ ಪದಾಧಿಕಾರಿಗಳು, ಕಾಳಗಿ ತಾಲೂಕಿನ ಪ್ರಕರಣಗಳ ನ್ಯಾಯವ್ಯಾಪ್ತಿಯಲ್ಲಿ ಮಾಡಲಾದ ಬದಲಾವಣೆಯು ಕಕ್ಷಿದಾರರಿಗೆ ಹಾಗೂ ವಕೀಲರಿಗೆ ತೀವ್ರ ಅನಾನುಕೂಲ ಉಂಟುಮಾಡಿದೆ. ದೀರ್ಘಕಾಲದಿಂದ ಜಾರಿಯಲ್ಲಿದ್ದ ಚಿತ್ತಾಪುರ ಹಿರಿಯ ಸಿವಿಲ್ ನ್ಯಾಯಾಲಯದ ವ್ಯವಸ್ಥೆಗೆ ಜನಸಾಮಾನ್ಯರು ರೂಢಿಯಾಗಿದ್ದು, ದಿಢೀರ್ ಬದಲಾವಣೆಯಿಂದ ನ್ಯಾಯಾಂಗ ವ್ಯವಸ್ಥೆಯ ಮೇಲೂ ಪ್ರಭಾವ ಬೀರಿದೆ. ಈ ಕುರಿತು ಈಗಾಗಲೇ ಆಕ್ಷೇಪಣೆ ಸಲ್ಲಿಸಲಾಗಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಳಗಿ ಹಿರಿಯ ಸಿವಿಲ್ ನ್ಯಾಯವ್ಯಾಪ್ತಿಗೆ ಸಂಬಂಧಿಸಿದ ಸರ್ಕಾರದ ಹಿಂದಿನ ಅಧಿಸೂಚನೆಯನ್ನು ತಕ್ಷಣವೇ ಮರುಪರಿಶೀಲಿಸಬೇಕು. ಚಿತ್ತಾಪುರ ನ್ಯಾಯಾಲಯದ ಮೂಲ ನ್ಯಾಯವ್ಯಾಪ್ತಿಯನ್ನು ಪುನಃಸ್ಥಾಪಿಸಬೇಕು. ವಕೀಲರ ಸಂಘವು ಈಗಾಗಲೇ ಸಲ್ಲಿಸಿರುವ ಆಕ್ಷೇಪಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕಾಳಗಿಗೆ ಸಂಬಂಧಿಸಿದ ಹಿರಿಯ ಸಿವಿಲ್ ಪ್ರಕರಣಗಳನ್ನು ಕಲಬುರಗಿ ನ್ಯಾಯಾಲಯದಿಂದ ಹಿಂಪಡೆಯಬೇಕು.ಸಂಘವು ಕಾಳಗಿ ನ್ಯಾಯಾಲಯವನ್ನು ರದ್ದುಪಡಿಸುವಂತೆ ಕೋರುತ್ತಿಲ್ಲ, ಬದಲಿಗೆ ಚಿತ್ತಾಪುರದ ಹಿತದೃಷ್ಟಿಯಿಂದ ಮೂಲ ವ್ಯವಸ್ಥೆಯನ್ನು ಮುಂದುವರಿಸಲು ಮನವಿ ಮಾಡುತ್ತಿದೆ ಎಂದು ಪದಾಧಿಕಾರಿಗಳು ಸ್ಪಷ್ಟಪಡಿಸಿದರು.
ನ್ಯಾಯಾಲಯ ಕಲಾಪ ಬಹಿಷ್ಕಾರದ ಎಚ್ಚರಿಕೆ:
ಸಮಂಜಸ ಅವಧಿಯಲ್ಲಿ ತಮ್ಮ ನ್ಯಾಯಸಮ್ಮತ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ, ಪ್ರಜಾಸತ್ತಾತ್ಮಕ ರೀತಿಯಲ್ಲಿ ನ್ಯಾಯಾಲಯದ ಕಾರ್ಯಕಲಾಪಗಳಿಂದ ದೂರ ಉಳಿದು ತೀವ್ರ ಸ್ವರೂಪದ ಮುಷ್ಕರ ಹಾಗೂ ಹೋರಾಟ ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ವಕೀಲರ ಸಂಘವು ಎಚ್ಚರಿಸಿದೆ.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಕರದಳ್ಳಿ, ಪ್ರಧಾನ ಕಾರ್ಯದರ್ಶಿ ಬಿ.ಎಲ್.ವಾಡಿ, ಹಿರಿಯ ನ್ಯಾಯವಾದಿಗಳಾದ ಶರಣಗೌಡ ಪಾಟೀಲ, ಎಸ್.ಎಂ.ಹೋಳಿ, ಬಿ.ಬಿ.ದೊಡ್ಡಮನಿ, ಎಸ್.ಪಿ.ಸಾತನೂರಕರ್, ಎ.ಟಿ.ರಾಠೋಡ, ಎಲ್.ಎ.ಪಾಪೀಲ, ಎಸ್.ಇ.ಅನ್ವರಕರ್, ಅಶ್ವಥ್ ರಾಠೋಡ ಸೇರಿದಂತೆ ಹಲವು ವಕೀಲರು ಉಪಸ್ಥಿತರಿದ್ದರು.