ಪ್ರತಾಪ್ ಸಿಂಹ ಹೇಳಿಕೆಗೆ ಮಲ್ಲಿಕಾರ್ಜುನ ಕಾಳಗಿ ತೀವ್ರ ಆಕ್ರೋಶ: ಗಡಿಪಾರಿಗೆ ಆಗ್ರಹ.

ಚಿತ್ತಾಪುರ: ಟಿ. ನರಸೀಪುರದಲ್ಲಿ ನಡೆದ ಗಣೇಶ ಶೋಭಾಯಾತ್ರೆ ವೇಳೆ ನೀಲಿ ಶಾಲು ಧರಿಸಿದ ದಲಿತ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ಅತ್ಯಂತ ಹಗುರವಾದದ್ದು ಮತ್ತು ಖಂಡನೀಯ ಎಂದು ದಲಿತ ಹಿರಿಯ ಮುಖಂಡ ಹಾಗೂ ಪುರಸಭೆಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸರ್ವಧರ್ಮ ಸಮಭಾವ ತತ್ವ ಹಾಗೂ ನೀಲಿ ಶಾಲಿನ ಮಹತ್ವದ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಕನಿಷ್ಠ ಜ್ಞಾನವೂ ಇಲ್ಲದಿರುವುದು ದುರಂತ. ಸಮಾಜದಲ್ಲಿ ಸೌಹಾರ್ದತೆ, ಸಮಾನತೆ ಮತ್ತು ಶಾಂತಿ ಕಾಪಾಡಲು ನಿರಂತರವಾಗಿ ಶ್ರಮಿಸುವ ದಲಿತ ಸಂಘಟನೆಗಳನ್ನು ಹಾಗೂ ಅವರ ಆತ್ಮಗೌರವದ ಸಂಕೇತವಾದ ನೀಲಿ ಶಾಲನ್ನು ಹಗುರವಾಗಿ ಮಾತನಾಡುವುದು ಅವರ ಅಹಂಕಾರದ ಸಂಕೇತವಾಗಿದೆ" ಎಂದು ಕಿಡಿಕಾರಿದರು.

"ಇಂತಹ ಪ್ರಚೋದನಾಕಾರಿ ಹೇಳಿಕೆಗಳ ಮೂಲಕ ಸಮಾಜದಲ್ಲಿ ಕೋಮು ಸೌಹಾರ್ದತೆ ಕದಡಿ, ಶಾಂತಿ ಭಂಗ ಉಂಟುಮಾಡಲು ಯತ್ನಿಸುತ್ತಿರುವ ಪ್ರತಾಪ್ ಸಿಂಹ ಅವರನ್ನು ರಾಜ್ಯ ಸರ್ಕಾರ ತಕ್ಷಣವೇ ಗಡಿಪಾರು ಮಾಡಬೇಕು. ಅವರು ತಾವು ನೀಡಿರುವ ಬೇಜವಾಬ್ದಾರಿ ಹೇಳಿಕೆಯನ್ನು ತಕ್ಷಣ ಹಿಂಪಡೆದು, ದಲಿತ ಸಮುದಾಯಕ್ಕೆ ಹಾಗೂ ದೇಶಕ್ಕೆ ಬಹಿರಂಗ ಕ್ಷಮೆಯಾಚಿಸಬೇಕು," ಎಂದು ಕಾಳಗಿ ಒತ್ತಾಯಿಸಿದರು.

"ರಾಜಕೀಯ ಲಾಭಕ್ಕಾಗಿ ಮಹಾಪುರುಷರನ್ನು ಮತ್ತು ದಲಿತ ಸಂಘಟನೆಗಳನ್ನು ನಿಂದಿಸುವ ಚಟವನ್ನು ಪ್ರತಾಪ್ ಸಿಂಹ ತಕ್ಷಣವೇ ಬಿಡಬೇಕು. ಒಂದು ವೇಳೆ ಅವರು ಬಹಿರಂಗ ಕ್ಷಮೆಯಾಚಿಸದಿದ್ದರೆ, ರಾಜ್ಯಾದ್ಯಂತ ದಲಿತ ಸಂಘಟನೆಗಳು ಹಾಗೂ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಒಗ್ಗೂಡಿಸಿ ಉಗ್ರ ಹೋರಾಟ ರೂಪಿಸಲಾಗುವುದು," ಎಂದು ಅವರು ಎಚ್ಚರಿಕೆ ನೀಡಿದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم