ಮಾತೃ-ಪಿತೃಗಳ ಸೇವೆ ಮಾಡುವುದೇ ನಿಜವಾದ ದೇವಪೂಜೆ.

ಚಿತ್ತಾಪುರ: ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೈರಾಗ್ಯ ನಿಧಿ ಶ್ರೀ ಅಕ್ಕಮಹಾದೇವಿ ಅಕ್ಕನ ಬಳಗ ಹಾಗೂ ಶ್ರೀ ಋಗ್ವೇದ ಪುರೋಹಿತರ ಟ್ರಸ್ಟ್ ಇವರುಗಳ ಸಂಯುಕ್ತಾಶ್ರಯದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ‘ಗುರುಪಾದ ಪೂಜೆ’ ಕಾರ್ಯಕ್ರಮವನ್ನು ಕಾಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಆಶೀರ್ವಚನ ನೀಡಿದ ಶ್ರೀಗಳು, "ನಮ್ಮ ದೇಶವು ದೈವಭಕ್ತಿಗೆ ಹೆಸರಾದ ಪವಿತ್ರ ಭೂಮಿಯಾಗಿದೆ. ಸನಾತನ ಧರ್ಮದಲ್ಲಿ ಯಾವುದೇ ಪೂಜೆ-ಪುನಸ್ಕಾರಗಳಿರಲಿ, ಮೊದಲ ಪೂಜೆಯನ್ನು ವಿಘ್ನನಿವಾರಕ ಗಣಪತಿಗೆ ಸಲ್ಲಿಸಲಾಗುತ್ತದೆ. ಧರ್ಮದಲ್ಲಿ ಅನೇಕ ದೇವತೆಗಳಿದ್ದರೂ ಗಣೇಶನಿಗೆ ಪ್ರಥಮ ಪೂಜೆಯ ಶ್ರೇಷ್ಠ ಸ್ಥಾನ ನೀಡಲಾಗಿದೆ. ಆದರೆ, ಮನೆಯಲ್ಲಿರುವ ವೃದ್ಧ ತಂದೆ-ತಾಯಂದಿರನ್ನು ಹಾಗೂ ಹಿರಿಯರ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳದೆ ಬರಿ ಗಣೇಶನ ಪೂಜೆ ಮಾಡಿದರೆ ಅದಕ್ಕೆ ಯಾವುದೇ ಫಲ ಸಿಗುವುದಿಲ್ಲ. ಹೆತ್ತವರನ್ನು ಪ್ರೀತಿಯಿಂದ ಪೂಜಿಸಿ, ಗೌರವಿಸುವುದೇ ನಿಜವಾದ ದೇವಪೂಜೆ" ಎಂದು ಮಾರ್ಮಿಕವಾಗಿ ನುಡಿದರು.

ಕಾರ್ಯಕ್ರಮದಲ್ಲಿ ಸೇಡಂನ ಶ್ರೀ ಶಿವಶಂಕರ್ ಶಿವಾಚಾರ್ಯರು, ಪ್ರಮುಖರಾದ ಕೋಟೇಶ್ವರ ರೇಷ್ಮಿ ಹಾಗೂ ಪ್ರಸಾದ್ ಅವಂಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಧನುಶ್ರೀ ಗುಂಡೇರಾವ ದೇಶಪಾಂಡೆ ಅವರು ನಡೆಸಿಕೊಟ್ಟ ಭರತನಾಟ್ಯ ಪ್ರದರ್ಶನವು ಸಭಿಕರ ಮನಸೆಳೆಯಿತು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಸಂಗಮೇಶ ರೋಣದ, ಶಿವರೆಡ್ಡಿ, ನೆಹಲ್ ಗೌಡ, ಮಹೇಶ ರೇಷ್ಮಿ, ಓಂಕಾರ ರೇಷ್ಮಿ, ಮಹಾದೇವ ಅಂಗಡಿ, ಅಂಬರೀಷ ಕೊಲ್ಲೂರ, ಸಿದ್ರಾಮಪ್ಪ ರೇಷ್ಮಿ, ವಿಶಾಲ್ ಗುಂಡಗುರ್ತಿ ಸೇರಿದಂತೆ ಅನೇಕ ಭಕ್ತಾದಿಗಳು ಭಾಗವಹಿಸಿದ್ದರು.

ಗೋದಾವರಿ ಹಿರೇಮಠ್ ಪ್ರಾರ್ಥನಾ ಗೀತೆ ಹಾಡಿದರು. ಭಾರತಿ ರೇಷ್ಮಿ ಸ್ವಾಗತಿಸಿದರೆ, ಗಂಗಣ್ಣ ಹೊಸೂರ ಕಾರ್ಯಕ್ರಮ ನಿರೂಪಿಸಿದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು