ಏಕದಂತ ಯುವ ಮಂಡಳಿಯಿಂದ ರಸಮಂಜರಿ ಕಾರ್ಯಕ್ರಮ ವಿಜೃಂಭಣೆ.

ಚಿತ್ತಾಪುರ: ಪಟ್ಟಣದ ಬಸವನಗರದಲ್ಲಿ ಶ್ರೀ ಏಕದಂತ ಯುವ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಗಣೇಶೋತ್ಸವ ನಿಮಿತ್ತ ವಿಜೃಂಭಣೆಯ ‘ರಸಮಂಜರಿ’ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪುರಸಭೆಯ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾಳಗಿ ಅವರು ಮಾತನಾಡಿ, ಪಟ್ಟಣದ ಯುವಜನರು ಹಾಗೂ ಸಂಘ-ಸಂಸ್ಥೆಗಳು ಸಮಾಜಮುಖಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವುದು ಶ್ಲಾಘನೀಯ. ಯುವ ಮಂಡಳಿಯ ಈ ಕಾರ್ಯಕ್ರಮವು ಪಟ್ಟಣದಲ್ಲಿ ಸೌಹಾರ್ದತೆ ಮತ್ತು ಸಾಂಸ್ಕೃತಿಕ ವಾತಾವರಣವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಹಾರೈಸಿ, ಶುಭಕೋರಿದರು.

ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಕಾಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರರು, ಗಣೇಶೋತ್ಸವವು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಭಕ್ತಿಭಾವವನ್ನು ಪಸರಿಸುವ ಅತ್ಯುತ್ತಮ ಮಾಧ್ಯಮವಾಗಿದೆ ಎಂದು ಆಶೀರ್ವದಿಸಿದರು.

ನಾಗಾವಿ ಎಕ್ಸ್‌ಪ್ರೆಸ್’ ಪತ್ರಿಕೆಯ ಸಂಪಾದಕರಾದ ಕಾಶಿನಾಥ್ ಗುತ್ತೇದಾರ್ ಮಾತನಾಡಿ, "ದೇಶದ ಎಲ್ಲಾ ಉತ್ಸವಗಳಲ್ಲಿ ಗಣೇಶೋತ್ಸವಕ್ಕೆ ತನ್ನದೇ ಆದ ಐತಿಹಾಸಿಕ ಮಹತ್ವವಿದೆ. ಬ್ರಿಟಿಷರ ಕಾಲದಲ್ಲಿ ಜನರು ಒಂದೆಡೆ ಸೇರಲು ಸಾಧ್ಯವಾಗದಿದ್ದಾಗ, ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣೇಶೋತ್ಸವ ಆರಂಭಿಸಿ ಪ್ರತಿಯೊಬ್ಬರಿಗೂ ಒಂದಾಗುವ ಅವಕಾಶ ಮಾಡಿಕೊಟ್ಟರು," ಎಂದು ಸ್ಮರಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಬೊಮ್ಮನಹಳ್ಳಿ ಮಾತನಾಡಿ, "ಗಣೇಶೋತ್ಸವ ಆಚರಣೆಯ ಹಿಂದಿದ್ದ ನೈಜ ಉದ್ದೇಶವನ್ನು ಇಂದಿನ ಯುವಕರು ತಿಳಿದುಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳಿಗೆ ಮೌಲ್ಯಾಧಾರಿತ ಪದ್ಧತಿಗಳನ್ನು ಹಾಗೂ ನೈತಿಕ ಶಿಕ್ಷಣವನ್ನು ನೀಡಬೇಕು," ಎಂದು ಹೇಳಿದರು.

ವೇದಿಕೆಯ ಮೇಲೆ ಪ್ರಮುಖರಾದ ಮಹಾಂತೇಶ್ ಬೊಮ್ಮನಹಳ್ಳಿ, ಜ್ಞಾನ ಮಿತ್ರ, ಸಾಬಣ್ಣ ಹಲಗಿ, ಅಯ್ಯಪ್ಪ ಮುಗಕೋಡ ಹಾಗೂ ಪತ್ರಕರ್ತರಾದ ಜಗದೇವ ಕುಂಬಾರ ಮತ್ತು ಚಂದ್ರಶೇಖರ ಬಳ್ಳಾ ಉಪಸ್ಥಿತರಿದ್ದರು.

ಕಾರ್ಯಕ್ರಮದ ಯಶಸ್ಸಿಗೆ ಶ್ರೀ ಏಕದಂತ ಯುವ ಮಂಡಳಿಯ ರಾಘವೇಂದ್ರ ಮುಗಳಕರ್, ಬಸವರಾಜ, ಯಲ್ಲಾಲಿಂಗ ಹೊಸೂರ, ವಿಶ್ವಾರಾಧ್ಯ, ಶ್ರೀನಾಥ್ ದೊಡ್ಡಮನಿ, ಭೀಮರಾಯ, ಬಸವರಾಜ, ಸುದೀಪ್, ಸಾಬಣ್ಣ, ನಾಗೇಶ್ ಹಲಗಿ, ಅಯ್ಯಪ್ಪ, ಶ್ರೀನಿವಾಸ ಹಾಗೂ ಪದಾಧಿಕಾರಿಗಳು ಶ್ರಮಿಸಿದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು