ಅಂಬಿಗರ ಚೌಡಯ್ಯ ಜನಜಾಗೃತಿ ಜಾಥಾಗೆ ಭವ್ಯ ಸ್ವಾಗತ.

ಚಿತ್ತಾಪುರ: ಹಾವೇರಿ ಜಿಲ್ಲೆಯ ಚೌಡದಾನಪೂರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಪೀಠದ ಸಂಸ್ಥಾಪಕ ಬಿ.ಜಿ.ಸುಣಗಾರ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ 'ಹೋರಾಟ ಜನಜಾಗೃತಿ ಜಾಥಾ' ಪಟ್ಟಣಕ್ಕೆ ಆಗಮಿಸಿದಾಗ ತಾಲೂಕು ಕೋಲಿ ಸಮಾಜದ ವತಿಯಿಂದ ಭವ್ಯವಾಗಿ ಸ್ವಾಗತಿಸಲಾಯಿತು.

ಚೌಡದಾನಪೂರದ ಮೂಲ ಗದ್ದುಗೆಯ ಅಭಿವೃದ್ಧಿ ಹಾಗೂ ಬಸವಕಲ್ಯಾಣದ ಹೊಸ ಅನುಭವ ಮಂಟಪದಲ್ಲಿ ಸಮಕಾಲೀನ ಶರಣ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹಿಸಿ ಬಸವಕಲ್ಯಾಣದಿಂದ ಬೆಂಗಳೂರಿನವರೆಗೆ ಈ ಜಾಥಾ ಆಯೋಜಿಸಲಾಗಿದೆ.

ಕಾರ್ಯಕ್ರಮದ ಆರಂಭದಲ್ಲಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವಕುಮಾರ ಯಾಗಾಪೂರ ಅವರು ಕುಲದೇವತೆ ಗಂಗಾಪರಮೇಶ್ವರಿ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಸಂಸ್ಥಾಪಕ ಬಿ.ಜಿ.ಸುಣಗಾರ ಅವರು, "ಸಮಾಜದ ಪ್ರತಿಯೊಬ್ಬರೂ ಜಾಗೃತರಾಗಬೇಕು. ಜಾಥಾದ ಕೊನೆಯ ದಿನದಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಆಗಮಿಸಿ, ಸಮಾಜದ ಕಾಳಜಿ ಮೆರೆಯಬೇಕು ಮತ್ತು ಮೂಲ ಗದ್ದುಗೆಯ ಅಭಿವೃದ್ಧಿಗೆ ಕೈಜೋಡಿಸಬೇಕು" ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕೋಲಿ ಸಮಾಜದ ಯುವ ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲೂರಕರ್ ಹಾಗೂ ರಾಜ್ಯ ಗಂಗಾಪುತ್ರ ಘರ್ಜನೆ ಪಡೆಯ ರಾಜ್ಯಾಧ್ಯಕ್ಷ ಗುಂಡ ಐನಾಪೂರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಮುಖ ಮುಖಂಡರಾದ ದಶರಥ ದೊಡ್ಡಮನಿ, ಶರಣು ಅರಣಕಲ್, ರಾಜು ಹೊಸ್ಸುರ್, ಕಾಶಿನಾಥ್, ತಿಪ್ಪಣ್ಣ ಇವಣಿ, ಮಲ್ಲು ಮುಗಳನಾಗಾಂವ್, ಆನಂದ ಯರಗಲ್, ಮಲ್ಲಿಕಾರ್ಜುನ ಬೆಣ್ಣೂರಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم