ಚಿತ್ತಾಪುರ: ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮಹಿಳೆಯರಿಗೆ ಶೇಕಡಾ 50 ರಷ್ಟು ಮೀಸಲಾತಿ ನೀಡಲಾಗಿದೆ. ತಾಲೂಕಿನ ಒಟ್ಟು 14 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳನ್ನು ಮಹಿಳೆಯರಿಗಾಗಿ ಕಾಯ್ದಿರಿಸಲಾಗಿದೆ.
ವರ್ಗಾವಾರು ಮೀಸಲಾತಿ ವಿವರಗಳಾದ ಪರಿಶಿಷ್ಟ ಜಾತಿ (ಪ.ಜಾ): ಒಟ್ಟು 4 ಕ್ಷೇತ್ರಗಳು (ಇವುಗಳಲ್ಲಿ 3 ಮಹಿಳೆಯರಿಗೆ ಮೀಸಲು). ಪರಿಶಿಷ್ಟ ಪಂಗಡ (ಪ.ಪಂ): 1 ಕ್ಷೇತ್ರ (ಮಹಿಳೆಗೆ ಮೀಸಲು). ಹಿಂದುಳಿದ ವರ್ಗ 'ಅ': ಒಟ್ಟು 2 ಕ್ಷೇತ್ರಗಳು (ಇವುಗಳಲ್ಲಿ 1 ಮಹಿಳೆಗೆ ಮೀಸಲು). ಸಾಮಾನ್ಯ ವರ್ಗ: ಒಟ್ಟು 7 ಕ್ಷೇತ್ರಗಳು (ಇವುಗಳಲ್ಲಿ 3 ಮಹಿಳೆಯರಿಗೆ ಮೀಸಲು).
ಕ್ಷೇತ್ರವಾರು ಮೀಸಲಾತಿ ಪಟ್ಟಿಗಳಾದ ಗುಂಡಗುರ್ತಿ: ಸಾಮಾನ್ಯ, ದಂಡೋತಿ: ಸಾಮಾನ್ಯ (ಮಹಿಳೆ), ದಿಗ್ಗಾಂವ: ಸಾಮಾನ್ಯ (ಮಹಿಳೆ), ಭಾಗೋಡಿ: ಸಾಮಾನ್ಯ, ಕರದಾಳ: ಸಾಮಾನ್ಯ, ಹಲಕಟ್ಟಾ: ಪರಿಶಿಷ್ಟ ಜಾತಿ, ಲಾಡ್ಲಾಪುರ: ಪರಿಶಿಷ್ಟ ಪಂಗಡ (ಮಹಿಳೆ), ಇಂಗಳಗಿ: ಸಾಮಾನ್ಯ, ಅಳ್ಳೋಳ್ಳಿ: ಹಿಂದುಳಿದ ವರ್ಗ ‘ಅ’ (ಮಹಿಳೆ), ರಾಜೋಳಾ: ಹಿಂದುಳಿದ ವರ್ಗ ‘ಅ’, ಯಾಗಾಪುರ: ಪರಿಶಿಷ್ಟ ಜಾತಿ (ಮಹಿಳೆ), ನಾಲವಾರ: ಪರಿಶಿಷ್ಟ ಜಾತಿ (ಮಹಿಳೆ), ಕಡಬೂರ: ಸಾಮಾನ್ಯ (ಮಹಿಳೆ), ಕೊಲ್ಲೂರ: ಪರಿಶಿಷ್ಟ ಜಾತಿ.
ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 19 ಕೊನೆಯ ದಿನ:
ಈ ಮೀಸಲಾತಿ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 10 ದಿನಗಳ ಒಳಗಾಗಿ, ಅಂದರೆ ಅಕ್ಟೋಬರ್ 19ರ ಸೋಮವಾರ ಸಂಜೆ 5 ಗಂಟೆಯೊಳಗೆ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಸೂಕ್ತ ಪೂರಕ ದಾಖಲೆಗಳೊಂದಿಗೆ ಸಲ್ಲಿಸಬಹುದು.
ಆಕ್ಷೇಪಣೆಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ "ಸರ್ಕಾರದ ಕಾರ್ಯದರ್ಶಿ (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, 3ನೇ ಹಂತ, 3ನೇ ಮಹಡಿ, ಡಾ.ಅಂಬೇಡ್ಕರ್ ವೀಧಿ, ಬೆಂಗಳೂರು-560001" ಈ ವಿಳಾಸಕ್ಕೆ ತಲುಪುವಂತೆ ಸಲ್ಲಿಸಬೇಕಾಗಿದೆ.
ನಿಯಮಿತ ಕೊನೆಯ ದಿನಾಂಕದ ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಅಲ್ಲದೆ ಅಂಚೆ ವಿಳಂಬಕ್ಕೆ ಇಲಾಖೆಯು ಜವಾಬ್ದಾರಿಯಾಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಕೆ.ಹೆಚ್ ತಿಳಿಸಿದ್ದಾರೆ.