ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾದ ಬಂಜಾರ ಸಮಾಜದ ವತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಗದಂಬಾ ದೇವಿ ಮೂರ್ತಿಯ ಭವ್ಯ ಮೆರವಣಿಗೆಯು ರವಿವಾರ ಸಾಯಂಕಾಲ ಅತ್ಯಂತ ಅದ್ದೂರಿ ಹಾಗೂ ವಿಜೃಂಭಣೆಯಿಂದ ನೆರವೇರಿತು.
ಪಟ್ಟಣದ ರೈಲ್ವೆ ಸ್ಟೇಷನ್‌ನಿಂದ ಆರಂಭಗೊಂಡ ಮೆರವಣಿಗೆಯು ಅಂಬಿಗರ ಚೌಡಯ್ಯ ಭವನ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ ರಸ್ತೆ, ಅಂಬೇಡ್ಕರ್ ವೃತ್ತ, ಭುವನೇಶ್ವರಿ ವೃತ್ತ ಹಾಗೂ ನಾಗಾವಿ ಚೌಕ್ ಮೂಲಕ ಹಾದು ಸ್ಟೇಷನ್ ತಾಂಡಾದ ದೊಡ್ಡ ಸೇವಾಲಾಲ್ ಮಂದಿರದ ಆವರಣ ತಲುಪಿತು. ಬಳಿಕ ಅಲ್ಲಿ ದೇವಿಯ ಮೂರ್ತಿಯನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಯಿತು.
ಮೆರವಣಿಗೆಯುದ್ದಕ್ಕೂ ಭಕ್ತರ 'ಜಗದಂಬಾ ದೇವಿ ಕಿ ಜೈ' ಎಂಬ ಜಯಘೋಷಗಳು ಮುಗಿಲು ಮುಟ್ಟಿದ್ದವು. ಬಂಜಾರ ಸಮಾಜದ ಸಾಂಪ್ರದಾಯಿಕ ಉಡುಪಿನಲ್ಲಿದ್ದ ಪುರುಷರು ಮತ್ತು ಮಹಿಳೆಯರು ಸಮಾಜದ ಜಾನಪದ ನೃತ್ಯ ಹಾಗೂ ಡಿಜೆ ಸೌಂಡ್‌ಗೆ ಹೆಜ್ಜೆ ಹಾಕುವ ಮೂಲಕ ಮೆರವಣಿಗೆಗೆ ಮೆರಗು ನೀಡಿದರು.
ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ಜಗದೀಶ್ ಡಿ. ಚವ್ಹಾಣ, ಮಾತನಾಡಿ"ಸ್ಟೇಷನ್ ತಾಂಡಾದಲ್ಲಿ 2ಸಾವಿರರಲ್ಲಿ ಪ್ರಾರಂಭವಾದ ಈ ನವರಾತ್ರಿ ಉತ್ಸವವು ಇದೀಗ 26ನೇ ವರ್ಷಕ್ಕೆ ಕಾಲಿಟ್ಟಿದೆ. ಕಳೆದ ಬಾರಿ ಬೆಳ್ಳಿ ಹಬ್ಬದ (25ನೇ ವರ್ಷ) ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗಿತ್ತು. ಅದೇ ಉತ್ಸಾಹದೊಂದಿಗೆ ಈ ಬಾರಿಯೂ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ನಾಡಿನ ಜನರ ಸುಖ, ಶಾಂತಿ, ಸಮೃದ್ಧಿ ಹಾಗೂ ಕಲ್ಯಾಣಕ್ಕಾಗಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ" ಎಂದು ತಿಳಿಸಿದರು. ಮುಂದಿನ 9 ದಿನಗಳ ಕಾಲ ದಿನನಿತ್ಯ ಪೂಜೆ, ಪುನಸ್ಕಾರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಈ ಸಂದರ್ಭದಲ್ಲಿ ನವರಾತ್ರಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಕಿಶನ್ ಹುನ್ನು ರಾಠೋಡ್, ಪ್ರಮುಖರಾದ ಭೀಮಸಿಂಗ್ ಚವ್ಹಾಣ, ಗೋಪಾಲ ರಾಠೋಡ್, ಕಿಶನ್ ನಾಯಕ್, ಕಿರಣ್ ಭೀಮಾ ನಾಯಕ, ಲಕ್ಷ್ಮಣ್ ವಿಠ್ಠಲ್ ನಾಯಕ್, ಶಂಕರ್ ಬಾಬು ನಾಯಕ್, ದೇವಿದಾಸ್ ಭೀಕು ನಾಯಕ, ಚಂದು ನಾಯಕ್, ರವೀಂದ್ರ ನಾಯಕ್, ಪೆಮ್ಯಾ ನಾಯಕ್, ಪೋಮು ಚವ್ಹಾಣ, ವಿನೋದ್ ಪವಾರ್, ರವಿ ಜಾಧವ, ದೇವಿದಾಸ್ ಚವ್ಹಾಣ, ಶ್ರೀಕಾಂತ್ ರಾಠೋಡ್, ತಿರುಪತಿ ಚವ್ಹಾಣ, ಮಹದೇವ್ ರಾಠೋಡ್, ಆಕಾಶ್ ಚವ್ಹಾಣ, ಭಮು ಪವಾರ್, ಪ್ರೇಮ್ ಚವ್ಹಾಣ, ಅನಿಲ್ ಚವ್ಹಾಣ, ಮೂರ್ತಿ ಚವ್ಹಾಣ, ಹರೀಶ್ ರಾಠೋಡ್, ಗೋಪಿ ಬಿ. ರಾಠೋಡ್, ವಿಜಯ ಚವ್ಹಾಣ, ಕುಮಾರ್ ರಾಠೋಡ್, ವಿಜಯ ಪವಾರ್, ಪ್ರೇಮ್ ಪವಾರ್, ಆನಂದ್ ಜಾದವ, ಸುನಿಲ್ ರಮೇಶ್ ರಾಠೋಡ್, ಗಣೇಶ್ ಚವ್ಹಾಣ, ತಿರುಪತಿ ರಾಠೋಡ್, ರಾಮ ಚವ್ಹಾಣ, ಕಪಿಲ್ ಪವಾರ್, ಪ್ರಕಾಶ್ ಜಾಧವ, ಹೀರು ಚವ್ಹಾಣ, ಪ್ರಕಾಶ್ ನಾಯಕ, ಚಂದರಕಾಂತ್ ಪವಾರ್, ಶರಣು ಚವ್ಹಾಣ ಸೇರಿದಂತೆ ಸಮಾಜದ ಅನೇಕ ಮುಖಂಡರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.