ಚಿತ್ತಾಪುರ: ಮುಂಬರುವ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಅವರ ಕೈಬಲ ಪಡಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಹಳ್ಳಿ ಅವರು ಕರೆ ನೀಡಿದ್ದಾರೆ.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಡಪದ ಸಮಾಜದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಪಂಚ್ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ರಮೇಶ್ ಹಡಪದ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ಪಂಚ್ ಗ್ಯಾರಂಟಿ ಸಮಿತಿಯಲ್ಲಿ ಪ್ರತಿಯೊಂದು ಜಾತಿಗೆ ಸೂಕ್ತ ಪ್ರಾತಿನಿಧ್ಯ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ಲಾಭವನ್ನು ಪ್ರತಿಯೊಬ್ಬ ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಚಾರ ಕಾರ್ಯ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಅವರು ಪಂಚ್ ಗ್ಯಾರಂಟಿ ಸಮಿತಿಗೆ ಜಾತಿವಾರಾಗಿ 14 ಜನರನ್ನು ನಾಮನಿರ್ದೇಶನ ಮಾಡುವ ಮೂಲಕ ಸಣ್ಣ ಸಣ್ಣ ಸಮಾಜಗಳಿಗೂ ಅವಕಾಶ ಕಲ್ಪಿಸಿದ್ದಾರೆ. ಪಂಚ್ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರಿಗೆ, ಮಹಿಳೆಯರಿಗೆ ಹಾಗೂ ಯುವಕರಿಗೆ ಅತ್ಯಂತ ಉಪಯುಕ್ತವಾಗಿವೆ. ಪಕ್ಷಕ್ಕೆ ಯಾವಾಗಲೂ ನಿಷ್ಠರಾಗಿದ್ದರೆ ಉತ್ತಮ ಸ್ಥಾನಮಾನಗಳು ಸಿಗಲಿವೆ. ಎಲ್ಲರನ್ನೂ ಜೊತೆಯಾಗಿ ಕರೆದೊಯ್ಯುವ ಏಕೈಕ ಪಕ್ಷ ಕಾಂಗ್ರೆಸ್ ಆಗಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗ್ಯಾರಂಟಿ ಸಮಿತಿ ಸದಸ್ಯ ರಮೇಶ್ ಹಡಪದ ಸಚಿವರು ಹಡಪದ ಸಮಾಜಕ್ಕೆ ಸಮುದಾಯ ಭವನಕ್ಕೆ ಈಗಾಗಲೇ 15 ಲಕ್ಷ ರೂ. ಅನುದಾನ ನೀಡಿದ್ದು, ಮುಂದುವರಿದ ಕಾಮಗಾರಿಗೆ ಮತ್ತೆ 15 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ. ಹಡಪದ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಸಮಾಜದ ಜನಸಂಖ್ಯೆ ಹೆಚ್ಚಿರುವುದರಿಂದ ಈ ಭಾಗದವರಿಗೆ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನ ನೀಡಬೇಕು ಎಂಬುದು ಸಮಾಜದ ಕೂಗಾಗಿದೆ. ಮುಂಬರುವ ದಿನಗಳಲ್ಲಿ ಹಿಂದುಳಿದ ಹಡಪದ ಸಮಾಜವನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡರಲ್ಲಿ ವಿನಂತಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪಂಚ್ ಗ್ಯಾರಂಟಿ ಸಮಿತಿ ಸದಸ್ಯರಾದ ಸೋಮಶೇಖರ ತೋಕಪೂರ, ವಿನುಕುಮಾರ ಜಡಿ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂಜಯ್ ಬುಳಕರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಡಪದ ಸಮಾಜದ ಮುಖಂಡರಾದ ಅಶೋಕ್ ಹಡಪದ, ಬಸವರಾಜ್ ಮುಡಬೂಳ, ಮುರುಳಿ ಹಡಪದ, ಶೇಖಪ್ಪ ದಂಡಗುಂಡ, ಸಿದ್ದು ಹಡಪದ, ಸಿದ್ದು ಭೀಮನಹಳ್ಳಿ, ಸಿದ್ದು ಸುಗೂರಿ, ವಿಶ್ವನಾಥ ಅಲ್ಲೂರ, ದೇವು ಲಾಡ್ಲಾಪುರ, ವಿಜಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಲ್ಯಾಣಿ ಗುಂಡಗುರ್ತಿ ಕಾರ್ಯಕ್ರಮ ನಿರೂಪಿಸಿದರು.